ಬೆಂಗಳೂರು:
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಕೆಲವರು ಅತಿರೇಕದ ವಿಡಿಯೋಗಳನ್ನು ಮಾಡುವ ಘಟನೆಗಳು ಹೆಚ್ಚುತ್ತಿರುವ ನಡುವೆಯೇ, ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆ ಒಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ನಗರದ ಕೊರಿಯರ್ ಕಚೇರಿಗೆ ಬಂದ ಮಹಿಳೆಯರು ಹಾಗೂ ಒಬ್ಬ ವೃದ್ಧರನ್ನು ಒಳಗೊಂಡ ಆರು ಮಂದಿ ತಂಡ, ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿರುವ ವಸ್ತುವನ್ನು ಪಾರ್ಸೆಲ್ ಮಾಡಲು ಕೇಳಿದ್ದಾರೆ. ಆದರೆ ಚೀಲ ಅಸಹಜವಾಗಿ ಅಲುಗಾಡುತ್ತಿರುವುದು ಹಾಗೂ ಶಬ್ದ ಬರುತ್ತಿರುವುದನ್ನು ಗಮನಿಸಿದ ಸಿಬ್ಬಂದಿ, ಅದರೊಳಗೆ ಏನಿದೆ ಎಂದು ಪರಿಶೀಲನೆ ನಡೆಸಿದ್ದಾರೆ.

ಚೀಲವನ್ನು ತೆರೆಯುತ್ತಿದ್ದಂತೆಯೇ ಅದರಲ್ಲಿ ಒಬ್ಬ ವೃದ್ಧ ವ್ಯಕ್ತಿ ಹೊರಬಂದಿರುವುದು ಕಂಡುಬಂದಿದೆ. ಈ ವೇಳೆ ಕುಟುಂಬಸ್ಥರು, ಅವರನ್ನು ಬೇರೆ ಜಿಲ್ಲೆಗೆ ಕೊರಿಯರ್ ಮೂಲಕ ಕಳುಹಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿರುವುದು ಸಿಬ್ಬಂದಿಯನ್ನು ಅಚ್ಚರಿಗೆ ಗುರಿಪಡಿಸಿದೆ. ಸಿಬ್ಬಂದಿ ಮನುಷ್ಯರನ್ನು ಕೊರಿಯರ್ ಮಾಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದಕ್ಕೂ ಮಧ್ಯೆ ಕುಟುಂಬದವರು ಕ್ಷಮೆ ಕೇಳುವ ಬದಲು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, “ಕೊರಿಯರ್ ಮಾಡಲು ಸಾಧ್ಯವಿಲ್ಲದಿದ್ದರೆ ವ್ಯವಹಾರ ಏಕೆ?” ಎಂದು ಪ್ರಶ್ನಿಸಿ ಸಮಯ ವ್ಯರ್ಥ ಮಾಡಿದಕ್ಕಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.

ಘಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಗುಂಪಿನ ಕೆಲವರು ಮೊಬೈಲ್ ಫೋನ್‌ನಲ್ಲಿ ರೀಲ್ಸ್ ಚಿತ್ರೀಕರಿಸುತ್ತಿರುವುದು ಪತ್ತೆಯಾಗಿದೆ.ಪರಿಶೀಲನೆ ವೇಳೆ, ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ಬಸ್ ಟಿಕೆಟ್ ದರ ಏರಿಕೆಯನ್ನು ವ್ಯಂಗ್ಯವಾಗಿ ತೋರಿಸಲು ಈ ವಿಡಿಯೋ ಚಿತ್ರೀಕರಿಸಿದ್ದೇವೆ ಎಂದು ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ಸಂಬಂಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ವ್ಯೂಸ್‌ಗಾಗಿ ತಂದೆಯ ಜೀವವನ್ನೇ ಅಪಾಯಕ್ಕೆ ಒಳಪಡಿಸುವುದೇ?’ ಎಂದು ಪ್ರಶ್ನಿಸಿರುವವರು, ಇಂತಹ ಅತಿರೇಕದ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.ಸೈಬರ್ ತಜ್ಞರು ಮತ್ತು ಮನಶ್ಶಾಸ್ತ್ರಜ್ಞರು ಕೂಡ ಆತಂಕ ವ್ಯಕ್ತಪಡಿಸಿದ್ದು, ಡಿಜಿಟಲ್ ಜಗತ್ತಿನಲ್ಲಿ ಗಮನ ಸೆಳೆಯುವ ಹಂಬಲದಲ್ಲಿ ಕೆಲವರು ವಿವೇಕ ಕಳೆದುಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದ್ದಾರೆ.






