ಬಹು ವರ್ಷಗಳ ನಂತರ ಕನ್ನಡ ಸಿನಿಮಾಗೆ ರಶ್ಮಿಕಾ ಮಂದಣ್ಣ ಶುಭಾಶಯಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ, ಇಂದು ಬಹುಭಾಷಾ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೊಡಗಿನ ಈ ಚೆಲುವೆ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್ವುಡ್ನಿಂದ ದೂರ ಉಳಿದಿದ್ದಾರೆ.

‘ಕಿರಿಕ್ ಪಾರ್ಟಿ’ ಬಳಿಕ ‘ಅಂಜನಿಪುತ್ರ’, ‘ಪೊಗರು’, ‘ಯಜಮಾನ’, ‘ಚಮಕ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ರಶ್ಮಿಕಾ, ಇತ್ತೀಚೆಗೆ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ತಮ್ಮ ಮದುವೆಗೆ ಕನ್ನಡ ಚಿತ್ರರಂಗದ ಅನೇಕ ಮಂದಿಯನ್ನು ಆಹ್ವಾನಿಸಿದ್ದರೂ, ಕನ್ನಡ ಸಿನಿಮಾಗಳೊಂದಿಗೆ ಅವರ ಸಂಪರ್ಕ ಕಡಿಮೆಯೇ ಇತ್ತು.

ಇದೀಗ ಅಪರೂಪವೆನ್ನುವಂತೆ ನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ಕ್ಕೆ ರಶ್ಮಿಕಾ ಶುಭಾಶಯ ಕೋರಿರುವುದು ಗಮನ ಸೆಳೆದಿದೆ. ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಗೊಂಡ ಹಿನ್ನೆಲೆ, ಅದರ ಲಿಂಕ್ ಹಂಚಿಕೊಂಡು “ಸುನಿ ಸರ್ ಮತ್ತು ತಂಡಕ್ಕೆ ಶುಭವಾಗಲಿ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುನಿ, “ತುಂಬು ಹೃದಯದ ಧನ್ಯವಾದಗಳು, ಸದಾ ಖುಷಿಯಾಗಿರಿ” ಎಂದು ತಿಳಿಸಿದ್ದಾರೆ.

ರಶ್ಮಿಕಾ ಹಿಂದೆ ಸುನಿ ನಿರ್ದೇಶನದ ‘ಚಮಕ್’ ಸಿನಿಮಾದಲ್ಲಿ ನಟಿಸಿದ್ದರಿಂದ ಇಬ್ಬರ ನಡುವೆ ಸ್ನೇಹ ಬಾಂಧವ್ಯ ಇದೆ. ಕನ್ನಡ ಸಿನಿಮಾಗೆ ದೀರ್ಘ ವಿರಾಮದ ಬಳಿಕ ಅವರು ನೀಡಿದ ಈ ಬೆಂಬಲ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿ ಶೀಲಮ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರ ಇದೇ ಜೂನ್ 26ರಂದು ಬಿಡುಗಡೆಯಾಗಲಿದೆ.






