ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್(Rajpal Yadav) ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಉದ್ಯಮಿಯೊಬ್ಬರಿಗೆ ಸಾಲ ಮರುಪಾವತಿ ಮಾಡದ ಕಾರಣದಿಂದಾಗಿ ನಟ ದೆಹಲಿಯ ತಿಹಾರ್ ಜೈಲು ಸೇರುವಂತಾಗಿದೆ.

ರಾಜ್‌ಪಾಲ್ ಯಾದವ್ ಅವರು 2010ರಲ್ಲಿ ತಮ್ಮದೇ ನಿರ್ದೇಶನದ ‘ಅತಾ ಪತಾ ಲಾಪತಾ’ ಚಿತ್ರಕ್ಕಾಗಿ ದೆಹಲಿ ಮೂಲದ ಉದ್ಯಮಿಯಿಂದ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಿನಿಮಾ ವಿಫಲವಾದ ಕಾರಣ ಅವರಿಗೆ ಆರ್ಥಿಕ ಸಂಕಷ್ಟ ಎದುರಾಯಿತು. ಸಾಲವನ್ನು ಮರುಪಾವತಿ ಮಾಡಲು ಅವರು ಸಾಧ್ಯವಾಗಲಿಲ್ಲ.

ಸಾಲ ನೀಡಿದ ಉದ್ಯಮಿ ರಾಜ್‌ಪಾಲ್ ಯಾದವ್ ವಿರುದ್ಧ ದೂರು ನೀಡಿದ್ದರು. ನಟ ನೀಡಿದ್ದ ಹಲವು ಚೆಕ್‌ಗಳು ಬೌನ್ಸ್ ಆದ ಕಾರಣ 2018ರಲ್ಲಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣ ಸುಮಾರು ಒಂದೂವರೆ ದಶಕಗಳಿಂದ ನಡೆಯುತ್ತಿದ್ದು, ಈಗ ಅಂತಿಮ ಹಂತ ತಲುಪಿದೆ. ಕೂಡಲೇ ಶರಣಾಗಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಸಮಯಾವಕಾಶ ಕೇಳಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

2010ರಲ್ಲಿ ಪಡೆದಿದ್ದ 5 ಕೋಟಿ ರೂಪಾಯಿ ಸಾಲ ಇದೀಗ ಬಡ್ಡಿ ಸೇರಿ 9 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹಲವು ಬಾರಿ ಅವಕಾಶ ನೀಡಿದರೂ ಸಾಲ ತೀರಿಸದ ಕಾರಣ ಈ ಬಾರಿ ರಾಜ್‌ಪಾಲ್ ಯಾದವ್‌ಗೆ ಜೈಲು ಶಿಕ್ಷೆಯಾಗಿದೆ.






