ನಾ ದಿವಾಕರ
( ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟಗಳು ಮೂರು ಕವಲುಗಳಾಗಿ ಹರಿಯುತ್ತಿದ್ದು , ಈ ಹೋರಾಟಗಳಲ್ಲಿ ಮುನ್ನಲೆಗೆ ಬಾರದ ತಾತ್ವಿಕ ಅಂಶಗಳನ್ನು ನಾಲ್ಕು ಭಾಗದ ಲೇಖನದಲ್ಲಿ ಚರ್ಚಿಸಲಾಗಿದೆ. ಅನುಪಾತ, ಶೇಕಡಾವಾರು ಹಂಚಿಕೆ ಇತ್ಯಾದಿ ಅಂಕಿ ಸಂಖ್ಯೆಗಳನ್ನು ಹೊರಗಿಟ್ಟು ಸಮಾಜದ ವಾಸ್ತವ ನೆಲೆಗಟ್ಟಿನಲ್ಲಿ ವಿಷಯ ಮಂಡಿಸಲಾಗಿದೆ. )
ಈ ಸರಣಿಯ ನಾಲ್ಕನೆಯ ಕೊನೆಯ ಭಾಗ ಇಲ್ಲಿದೆ.
ಭಾಗ 4
ಒಳಮೀಸಲಾತಿ ಹೋರಾಟಗಳು ತಾರಕಕ್ಕೆ ತಲುಪುತ್ತಿರುವ ಹೊತ್ತಿನಲ್ಲಿ, ಕೆಲವು ನಾಯಕರ ಮತ್ತು ಚಿಂತಕರ ಹೇಳಿಕೆಗಳು ಭಾವಾತಿರೇಕಕ್ಕೆ ಹೋಗುತ್ತಿರುವ ಹೊತ್ತಿನಲ್ಲಿ, ಕೆಲವು ಪ್ರಗತಿಪರ ಮನಸ್ಸುಗಳು, ಹಿರಿಯ ಬಣರಹಿತ ದಲಿತ ನಾಯಕರು ʼ ಒಂದುಗೂಡಿಸುವ ʼ ಪ್ರಯತ್ನವನ್ನು ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಯಾರನ್ನು ಒಂದುಗೂಡಿಸುವುದು ? ಬಲಗೈ-ಎಡಗೈ ಸಮುದಾಯಗಳನ್ನೋ ? ಎರಡನ್ನೂ ಪ್ರತಿನಿಧಿಸುವ ಹತ್ತಾರು ಸಂಘಟನೆಗಳನ್ನೋ ? ಈ ಸಂಘಟನೆಗಳ ನಾಯಕರನ್ನೋ ? ಅಥವಾ ಇಡೀ ಹೋರಾಟದ ಕೇಂದ್ರ ಬಿಂದು ಆಗಿರುವ ಬಾಧಿತ ಜನರನ್ನೋ ? ಬಾಧಿತ ಜನರನ್ನೇ ಆದರೆ ಭಿನ್ನಮತಗಳನ್ನು ಬದಿಗಿಟ್ಟು ಒಂದಾಗುವ ಅನಿವಾರ್ಯತೆ ಇರುವುದು ಯುವ ಜನಾಂಗ ಮತ್ತು ಮಹಿಳೆಯರಿಗಲ್ಲವೇ ? ಈ ಜನಸಂಖ್ಯೆ ನಮ್ಮ ಗುರಿಯಲ್ಲಿರುವುದೇ ?
ದಲಿತ ಐಕ್ಯತೆ ಎಂಬ ಕಲ್ಪನೆ ದಲಿತ ಚಳುವಳಿಯಷ್ಟೇ ಹಳೆಯದು. 2023ರಲ್ಲೂ ಈ ಕಲ್ಪನೆ ಮರುಧ್ವನಿಸಿತ್ತು. ಒಂದು ಸಮಾವೇಶವನ್ನೂ ಏರ್ಪಡಿಸಲಾಗಿತ್ತು. ಐಕ್ಯತೆಯ ಕಲ್ಪನೆ ಹರಳುಗಟ್ಟಲು (Crystlise) ಸಾಧ್ಯವಾಗದೆ ಹೋದದ್ದಕ್ಕೆ ಕಾರಣ ವಿವಿಧ ಬಣಗಳ ನಾಯಕರ ವೈಯುಕ್ತಿಕ ಪ್ರತಿಷ್ಠೆ ಮತ್ತು ಭಿನ್ನಾಭಿಪ್ರಾಯಗಳು ಹಾಗೂ ಸಂಘಟನೆಯಲ್ಲಿ ಬಹುತೇಕವಾಗಿ ಸಾಂಸ್ಥೀಕ ರೂಪ ಪಡೆದುಕೊಂಡಿದ್ದ ಶಾಶ್ವತ ನಾಯಕತ್ವದ ಪರಂಪರೆ. ದಲಿತ ಚಳುವಳಿಯ ವಿಘಟನೆಗೆ ಅಥವಾ ಒರಟಾಗಿ (Crude) ಹೇಳುವುದಾದರೆ ಛಿದ್ರೀಕರಣಕ್ಕೆ ತತ್ವ-ಸಿದ್ದಾಂತ ಯಾವ ಕಾಲದಲ್ಲೂ ಕಾರಣವಾಗಿರಲಿಲ್ಲ. ಎಲ್ಲ ಬಣಗಳಿಗೂ ಇರುವ/ಇದ್ದ ಒಂದೇ ಮೂಲ ಅಂಬೇಡ್ಕರ್‌ವಾದ, ಬೌದ್ಧ ಚಿಂತನೆಗಳು. ಮಾರ್ಕ್ಸ್ ಅಥವಾ ಲೋಹಿಯಾ ವಿಚಾರಧಾರೆಗಳು ವಿಘಟನೆಯ ಕಾರಣಗಳಾಗಿಲ್ಲ ಎನ್ನುವುದು ದಿಟ.
ವಿಭಜನೆಯ ಅಪಾಯಗಳ ನಡುವೆ
ಈಗ ನಾವು ಕಾಣುತ್ತಿರುವ ವಿಘಟನೆ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ವಿಭಜನೆಯ ಹಾದಿ ಹಿಡಿಯುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಈ ವಿಘಟನೆಗೆ ಕಾರಣ ಸಾಂಘಿಕ (Organisational) ಅಲ್ಲ ಅಥವಾ ಸೈದ್ಧಾಂತಿಕವೂ (Ideological) ಅಲ್ಲ. ಸಂವಿಧಾನ ಕಲ್ಪಿಸಿರುವ ಶಾಸನಾತ್ಮಕ ಹಕ್ಕುಗಳು ಅವುಗಳ ಸಮತೋಲನದ ಹಂಚಿಕೆ/ವಿತರಣೆ ಹಾಗೂ ಈ ಸೌಲಭ್ಯ-ಸವಲತ್ತುಗಳು ಅವಶ್ಯಕತೆ ಇರುವ ಜನರಿಗೆ ತಲುಪಬೇಕಾದ ನೈತಿಕ ಅಗತ್ಯತೆ ಈಗ ಎದ್ದಿರುವ ಪ್ರಶ್ನೆ. 1950ರ ದಶಕದಲ್ಲಿ ಅವಶ್ಯಕತೆ ಇರುವ ಸಮಾಜಗಳನ್ನು ಗುರುತಿಸಿದ ನಂತರವೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂಬ ವರ್ಗೀಕರಣ ಮಾಡಿ, ಸಾಂವಿಧಾನಿಕ ಸೌಲಭ್ಯಗಳ ಹಂಚಿಕೆಯನ್ನು ಮಾಡಲಾಗಿತ್ತು. ಈ ಅವಶ್ಯಕತೆಯನ್ನು ನಿರ್ಧರಿಸುವ ಮಾನದಂಡಗಳಾಗಿದ್ದುದು ಸಾಮಾಜಿಕ ತಾರತಮ್ಯ-ಅಸ್ಪೃಶ್ಯತೆಯಂತಹ ಪ್ರತ್ಯೇಕೀಕರಣ ಮತ್ತು ಆರ್ಥಿಕ ಅಸಮಾನತೆಗಳು.
ಹೊಸ ಜಾತಿಗಳು ಈ ಆವರಣದಲ್ಲಿ ಸೇರಿಕೊಳ್ಳುತ್ತಿರುವುದರಿಂದ, ಸರ್ಕಾರಗಳು, ನ್ಯಾಯಾಲಯಗಳು ಕಾಲದಿಂದ ಕಾಲಕ್ಕೆ ಪರಿಷ್ಕರಿಸುತ್ತಿರುವ ಮೀಸಲಾತಿಯ ಶೇಕಡಾವಾರು ಪ್ರಮಾಣವನ್ನು ಯಾವ ಯಾವ ಜಾತಿಗಳಿಗೆ ಹಂಚಬೇಕು ಎನ್ನುವುದೂ ಸಹ ಜಟಿಲ ಪ್ರಶ್ನೆಯೇ ಆಗಿದ್ದು ಹಲವು ಆಯೋಗಗಳ ಸಂಶೋಧನೆ, ಅಧ್ಯಯನಗಳ ಮೂಲಕ ಇದನ್ನು ನಿಷ್ಕರ್ಷೆ ಮಾಡಲಾಗಿದೆ. ಈ ಎಲ್ಲ ಸಾಂವಿಧಾನಿಕ ಪ್ರಕ್ರಿಯೆಗಳೂ ʼಇರುವುದನ್ನು ಅಥವಾ ಕಲ್ಪಿತ ಅವಕಾಶಗಳನ್ನುʼ ಹಂಚಿಕೊಳ್ಳುವ ನೈತಿಕ ನಿಯಮ ಅವಲಂಬಿಸುವುದನ್ನು ನಾವು ಅರಿತಿರಬೇಕು. ಹಾಗೆಯೇ ಸಮಾಜ ಬೆಳೆಯುತ್ತಾ ಹೋದಂತೆ, ಅಭಿವೃದ್ಧಿಯ ಹಾದಿಯಲ್ಲಿ ಹಿಂದುಳಿಯುತ್ತಾ ಹೋಗುವ, ಅಂಚಿಗೆ ತಳ್ಳಲ್ಪಡುವ (Marginalise) ಮತ್ತು ಲಭ್ಯ ಅವಕಾಶಗಳಿಂದಲೂ ವಂಚಿತವಾಗುವ ಸಮುದಾಯಗಳನ್ನು ಗುರುತಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಇದನ್ನು ಮಾಡುತ್ತಲೇ ಬಂದಿವೆ.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಳಮೀಸಲಾತಿ ಎಂಬ ಸಾಂವಿಧಾನಿಕ ಸವಲತ್ತು ಇನ್ನೂ ಕೆಲವು ಸಮಾಜಗಳನ್ನು ತಲುಪಿಯೇ ಇಲ್ಲ ಅಥವಾ ಸಮರ್ಪಕವಾಗಿ ತಲುಪಿಲ್ಲ ಎನ್ನುವುದು ದಿಟವಾಗುತ್ತದೆ. ಈ ಅವಕಾಶವಂಚಿತ (Deprived) ಮತ್ತು ಅಂಚಿನಲ್ಲಿರುವ (Marginalised) ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಕೇವಲ ಸರ್ಕಾರಗಳದ್ದೇ ಅಲ್ಲ, ಮುಂದುವರೆದ ಸಮಾಜಗಳ ಕರ್ತವ್ಯವೂ ಹೌದು. ಮೀಸಲಾತಿಯ ವಿಚಾರದಲ್ಲಿ ನೋಡಿದಾಗ, 1950ರಲ್ಲಿ ಮತ್ತು ತದನಂತರದ ವರ್ಷಗಳಲ್ಲಿ ಅವಲಂಬಿಸಲಾದ ಮಾನದಂಡಗಳನ್ನೇ 2026ರಲ್ಲೂ ಅನ್ವಯಿಸುವುದು ನೈತಿಕತೆಯ ಪ್ರಶ್ನೆ. ಡಾ. ಅಂಬೇಡ್ಕರ್ ಪದೆಪದೇ ಹೇಳುತ್ತಿದ್ದ ಸಾಂವಿಧಾನಿಕ ನೈತಿಕತೆ (Constitutional Morality) ಇಲ್ಲಿಗೂ ಅನ್ವಯಿಸುತ್ತದೆ.
ಅಭಿವೃದ್ಧಿ ಮತ್ತು ಮೇಲ್ ಚಲನೆ
ಕಳೆದ 77 ವರ್ಷಗಳಲ್ಲಿ ತಳಸ್ತರದ ಸಮಾಜದ ಕೆಲವು ಸಮುದಾಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದು ಬಡತನ ಮತ್ತು ಅನಕ್ಷರತೆಯ ಹಂತದಿಂದ ಶ್ರೀಮಂತಿಕೆ-ಅತ್ಯುನ್ನತ ಶೈಕ್ಷಣಿಕ ಹಂತದವರೆಗೂ ತಲುಪಿರುವುದು ವಾಸ್ತವ. ಈ ಸಮುದಾಯಗಳಲ್ಲಿ ಮಧ್ಯಮ ವರ್ಗಗಳೂ, ಔದ್ಯಮಿಕ ವರ್ಗಗಳೂ, ಅಕಾಡೆಮಿಕ್ ವಲಯದಲ್ಲಿ ಉನ್ನತ ವರ್ಗಗಳೂ ರೂಪುಗೊಂಡಿವೆ. ಆದಾಗ್ಯೂ ಸಾಮುದಾಯಿಕ ನೆಲೆಯಲ್ಲಿ ನೋಡಿದಾಗ ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಗಳಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಈ ವಾಸ್ತವದ ಹೊರತಾಗಿಯೂ ನೈತಿಕ ನೆಲೆಯಲ್ಲಿ ನಿಂತು ನೋಡಿದಾಗ, ಈ ಹಂತದ ಬೆಳವಣಿಗೆಯನ್ನೂ ಕಾಣದೆ ಕೈಚಾಚಿ ನಿಂತಿರುವ ಹಲವಾರು ಸಮುದಾಯಗಳು ನಮ್ಮ ನಡುವೆ ಇದೆ.
ಈ ತಳಸ್ತರದ ತಳಸಮುದಾಯಗಳು (Ground level Subaltern communities) ಮೀಸಲಾತಿಯಿಂದ ವಂಚಿತರಾಗಿದ್ದರೆ, ಆ ಜನತೆಗೆ ಸಂವಿಧಾನದ ಚೌಕಟ್ಟಿನಲ್ಲೇ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳ ನೈತಿಕ ಕರ್ತವ್ಯ. ಇದನ್ನು ಆಗುಮಾಡುವುದು ಮೇಲ್ದರ್ಜೆಗೆ ಬಡ್ತಿ ಪಡೆದಿರುವ ಫಲಾನುಭವಿ ಸಮಾಜಗಳ ಆದ್ಯತೆಯಾಗಬೇಕು. ಇಂತಹ ಜನಸಂಖ್ಯೆಯ ಪ್ರಮಾಣ ಎಷ್ಟಿದೆ ? ಇದನ್ನು ಸರ್ಕಾರಗಳು ರಚಿಸುವ ಆಯೋಗಗಳು ಪ್ರಕಟಿಸುತ್ತವೆ. ಆದರೆ ಈ ಜನರ ಹಿಂದುಳಿಯುವಿಕೆಗೆ ಮತ್ತು ಅವಕಾಶವಂಚಿತರಾಗಿರುವುದಕ್ಕೆ ಕಾರಣಗಳೇನು , ಇಂತಹವರ ಜನಸಂಖ್ಯೆ ನಿಖರವಾಗಿ ಎಷ್ಟಿದೆ, ಇವರಲ್ಲಿ ಯುವಜನರು ಮತ್ತು ಮಹಿಳೆಯರು ಎಷ್ಟಿದ್ದಾರೆ, ಯಾವ ರೀತಿಯ ಶೋಷಣೆ ಮತ್ತು ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ, ಶೋಷಣೆ ಯಾರಿಂದ ಆಗುತ್ತಿದೆ, ದೌರ್ಜನ್ಯಗಳ ರೂವಾರಿ ಸಮಾಜಗಳು ಯಾವುದು ಇಂತಹ ಸೂಕ್ಷ್ಮ ವಿವರಗಳನ್ನು ಸಂಗ್ರಹಿಸಿ, ದಾಖಲಿಸುವುದು, ದಲಿತ ಚಳುವಳಿಗಳ ಮತ್ತು ಎಡಪಕ್ಷಗಳ ಆದ್ಯತೆಯಾಗಬೇಕಿತ್ತು.
ಚಳುವಳಿಗಳ ಬಾಧ್ಯತೆ ಮತ್ತು ಕರ್ತವ್ಯ
ಅದ್ಧೂರಿ ಸಮಾವೇಶ, ಮೆರವಣಿಗೆ, ಸೆಮಿನಾರ್‌ಗಳು, ವಾರ್ಷಿಕ ಆಚರಣೆಗಳು, ಸನ್ಮಾನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣದಲ್ಲಿ ಒಂದಂಶವನ್ನು ಈ ನಿಟ್ಟಿನಲ್ಲಿ ತೊಡಗಿಸಿದ್ದರೂ ಸಹ ಈ ವೈಜ್ಞಾನಿಕ ಅಂಕಿಸಂಖ್ಯೆಗಳು ದಲಿತ ಚಳುವಳಿಗಳ ಬಳಿ ಇರುತ್ತಿದ್ದವು. ಇದಕ್ಕೆ ಬೇಕಾದ ಮಾನವ ಸಂಪನ್ಮೂಲಗಳ ಕೊರತೆಯಂತೂ ಇರಲಿಲ್ಲ, ಇರುವುದೂ ಇಲ್ಲ. ಕೊರತೆ ಕಾಣುವುದು ಇಚ್ಛಾಶಕ್ತಿಯಲ್ಲಿ ಅಥವಾ ಈ ರೀತಿಯ ಕಲ್ಪನೆಯಲ್ಲಿ. ಒಂದು ಕುಗ್ರಾಮದಿಂದ ದೊಡ್ಡನಗರದವರೆಗೆ ದಲಿತ ಸಂಘಟನೆಗಳು ಸರ್ಕಾರ ಅಥವಾ ಜನಪ್ರತಿನಿಧಿಗಳ ಮುಂದೆ ಮಂಡಿಸುವ ಬೇಡಿಕೆಗಳಲ್ಲಿ ಮೊದಲು ಅಂಬೇಡ್ಕರ್ ಪ್ರತಿಮೆ, ಸಮುದಾಯ ಭವನ ಮತ್ತು ಕೆಲವೇ ಸಂದರ್ಭಗಳಲ್ಲಿ ಗ್ರಂಥಾಲಯ ಪ್ರಧಾನವಾಗಿರುತ್ತದೆ.
ಸಂಘಟನೆಗಳ ಆಶ್ರಯದಲ್ಲೇ ಈ ರೀತಿಯ ಜಾತಿ ಸಮೀಕ್ಷೆ ಮತ್ತು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ವೈಜ್ಞಾನಿಕ ಸಂಶೋಧನೆಗೆ ಅಗತ್ಯವಾದ ಒಂದು ಸಾಂಸ್ಥಿಕ ಚೌಕಟ್ಟನ್ನು ರೂಪಿಸುವುದು ಈ ಬೇಡಿಕೆಗಳ ಭಾಗವಾಗುವುದೇ ಇಲ್ಲ. ಕಳೆದ 25 ವರ್ಷಗಳಿಂದಾದರೂ ಈ ಪ್ರಯತ್ನಗಳು ನಡೆದಿದ್ದರೆ, ಇಂದು ವಂಚಿತ ಜನತೆಯ ಸಂಖ್ಯೆ ಮತ್ತು ಆ ಸಮಾಜಗಳ ಒಳಸಂಕಟಗಳನ್ನು ಗ್ರಹಿಸಲು ಸಾಧ್ಯವಾಗುತ್ತಿತ್ತು. ಹಕ್ಕೊತ್ತಾಯದ ಪ್ರತಿಭಟನೆಗಳಂತೆಯೇ ಈ ರೀತಿಯ ಆಂತರಿಕ ಅಧ್ಯಯನ (Internal Study) ದಲಿತ ಸಂಘಟನೆಗಳ ಆದ್ಯತೆಯಾಗಿದ್ದಲ್ಲಿ, ಇಂದು ಯುವ ಜನಾಂಗದ ಮುಂದೆ ವೈಜ್ಞಾನಿಕವಾಗಿ ಪರಿಶೋಧಿಸಲ್ಪಟ್ಟ ನಿಖರವಾದ ಮಾಹಿತಿಯನ್ನು ಇಟ್ಟು, ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಬಹುದಿತ್ತು. ಈ ಪ್ರಯತ್ನಗಳು ಎಡಪಕ್ಷಗಳಿಂದಲೂ ಸಮರ್ಪಕವಾಗಿ ನಡೆದಿಲ್ಲ ಎನ್ನುವುದನ್ನೂ ಗಮನಿಸಬೇಕು.
ಪ್ರಧಾನ ಎದುರಾಳಿ ಮತ್ತು ಮಂಜಿನ ಪರದೆ
ದಲಿತ ಚಳುವಳಿ ವಿಘಟನೆಯಿಂದ ವಿಭಜನೆಗೆ ಸಾಗುವುದರ ಬದಲು ಐಕ್ಯತೆಯ ಕಡೆಗೆ ಸಾಗಬೇಕಾದರೆ, ಈ ಯುವ ಸಮಾಜಗಳಲ್ಲಿ ಅಂತಹ ಜಾಗೃತಿ ಮೂಡಬೇಕು. ಅದರೊಳಗೆ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಸಮುದಾಯಗಳಲ್ಲಿರುವ ಯುವ ಜನಾಂಗ ಮತ್ತು ಮಹಿಳೆಯರು ಜಾಗೃತರಾಗಬೇಕು. ನಮ್ಮನ್ನು ವಂಚಿಸುತ್ತಿರುವವರು ಯಾರು ಎಂಬ ಅರಿವು ಅವರಲ್ಲಿರಬೇಕು. ಪ್ರಸ್ತುತ ಚಳುವಳಿಗಳಲ್ಲಿ ʼ ಮನುವಾದಿ ʼ ಎಂಬ ಮಂಜಿನ ಪರದೆಯನ್ನು ಸೃಷ್ಟಿಸಲಾಗುತ್ತಿದೆ, ತಳಸ್ತರದ ಸಮಾಜದ ಎಲ್ಲ ಕಷ್ಟ ಕಾರ್ಪಣ್ಯಗಳಿಗೂ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಈ ಪರದೆಯ ಹಿಂದೆ ಅಡಗಿರುವ ಮಾರುಕಟ್ಟೆ, ಬಂಡವಾಳ,ಕಾರ್ಪೋರೇಟ್ ಹಿತಾಸಕ್ತಿ ಮತ್ತು ಈ ಮೂರನ್ನೂ ಪ್ರತಿನಿಧಿಸುವ ರಾಜಕೀಯ ಪಕ್ಷಗಳನ್ನು ಪ್ರಥಮ ಎದುರಾಳಿಗಳಾಗಿ ನೋಡಲಾಗುತ್ತಿಲ್ಲ. ನವ ಉದಾರವಾದದ ಅಪಾಯಗಳು ಕಾಣದಂತೆ ʼ ಹಿಂದುತ್ವ ʼ ಎಂಬ ಪರದೆಯನ್ನು ಸೃಷ್ಟಿಸಿದಂತೆಯೇ, ಮತ್ತೊಂದು ತುದಿಯಲ್ಲಿ ʼಮನುವಾದಿʼ ಎಂಬ ಪರದೆಯನ್ನೂ ರೂಪಿಸಲಾಗುತ್ತಿದೆ.
ಪ್ರಸ್ತುತ ಒಳಮೀಸಲಾತಿ ಹೋರಾಟ ತೀವ್ರತೆಯನ್ನು ಪಡೆಯಲು ಕಾರಣ ನವ ಉದಾರವಾದಿ ಆರ್ಥಿಕತೆ ಮತ್ತು ಅದನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡಿರುವ ಎಲ್ಲ ಬಂಡವಾಳಿಗ ರಾಜಕೀಯ ಪಕ್ಷಗಳು. ಇಡೀ ರಾಜಕೀಯ ವಲಯದ ಮೌನ ಇದನ್ನೇ ಸೂಚಿಸುತ್ತದೆ. ಇದರ ವಿರುದ್ಧ ದನಿ ಎತ್ತಲು ಬೇಕಾದ ಯುವ ದನಿಗಳು ಎಲ್ಲಿವೆ ? ಯಾವ ವಿಶ್ವವಿದ್ಯಾಲಯದ ವಿದ್ಯಾರ್ಥಿ-ಸಂಶೋಧಕರ ಸಂಘಟನೆಗಳು ಈ ದನಿಯನ್ನು ಹೊರಡಿಸುತ್ತಿವೆ ? ಯಾವ ದಲಿತ ಸಂಘಟನೆಗಳು ಈ ಆರ್ಥಿಕ ಸೂಕ್ಷ್ಮತೆಯನ್ನು ಅರಿತು, ಜನಸಂಘಟನೆಗೆ ಮುಂದಾಗಿವೆ ? ಒಳಮೀಸಲಾತಿ, ರೋಸ್ಟರ್ ಪದ್ಧತಿಯ ಒಳಸೂಕ್ಷ್ಮಗಳನ್ನು ಅರಿಯುವುದು ಅವಶ್ಯ. ಆದರೆ ಈ ಮೂಲ ನೀತಿಗಳಿಗೆ ಕಾರಣವಾದ ಆರ್ಥಿಕತೆಯ ಒಳಸುಳಿಗಳನ್ನು ಗ್ರಹಿಸಬೇಕಲ್ಲವೇ ,?
ಸಾಂಸ್ಥಿಕ ಬೆಳವಣಿಗೆಯ ಕೊರತೆ.
ದಲಿತ ಚಳುವಳಿ ಆರಂಭದ ದಿನದಿಂದಲೂ ಸಹ ತನ್ನ ಸಾಂಸ್ಥಿಕ ಬೆಳವಣಿಗೆಯನ್ನು (Insitutional Growth) ಗಂಭೀರವಾಗಿ ಪರಿಗಣಿಸದೆ ಇರುವುದರ ಪರಿಣಾಮವನ್ನು ಈಗ ಕಾಣುತ್ತಿದ್ದೇವೆ. ಸಾಂಸ್ಥೀಕರಣಕ್ಕೂ (Institutionalisation) ಸಾಂಸ್ಥಿಕ ಬೆಳವಣಿಗೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕಿದೆ. ಸಾಂಸ್ಥೀಕರಣ ಅಧಿಕಾರಶಾಹಿ ಧೋರಣೆಯನ್ನು ಪ್ರಚೋದಿಸುತ್ತದೆ. ಆದರೆ ಸಾಂಸ್ಥಿಕ ಬೆಳವಣಿಗೆ ತಳಮಟ್ಟದಿಂದ ರಾಜ್ಯಮಟ್ಟದವರೆಗೂ ದಲಿತ ಚಳುವಳಿಯನ್ನು ನಿರ್ದಿಷ್ಟ ಬೌದ್ಧಿಕ ಚೌಕಟ್ಟುಗಳಲ್ಲಿ ಕಟ್ಟುವ ಒಂದು ಪ್ರಕ್ರಿಯೆಯನ್ನು ಸೂಚಿಸುತ್ತದೆ. ಅಧ್ಯಯನ ಶಿಬಿರಗಳ ಉದ್ದೇಶ ಈ ಬೆಳವಣಿಗೆಯ ಹಾದಿಯಲ್ಲೇ ಯುವ ಜನಾಂಗವನ್ನು ಮಾಹಿತಿಯುಕ್ತ ಬೌದ್ಧಿಕ ಚಿಂತನಾವಲಯಗಳತ್ತ ಕೊಂಡೊಯ್ಯುವುದೇ ಆಗಿರಬೇಕು. ವಿಚಾರ ಮಂಥನದ ಕಡೆಗೆ ಕರೆದೊಯ್ಯುವುದಾಗಿರಬೇಕು.
ಒಂದು ವೇಳೆ ಇದು ಸಾಧ್ಯವಾಗಿದ್ದಲ್ಲಿ ಇಂದು ಅಂಬೇಡ್ಕರ್ ಸಮುದಾಯ ಭವನಗಳು, ಬುದ್ಧಸಮಿತಿಯ ಮಂದಿರಗಳು ಯುವ ಸಮಾಜಗಳ ಚಿಂತನ-ಮಂಥನ ಕೇಂದ್ರಗಳಾಗಿರುತ್ತಿದ್ದವು. ಗ್ರಾಮ-ತಾಲ್ಲೂಕು ಮಟ್ಟದಲ್ಲೇ ಈ ಬೌದ್ಧಿಕ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಬಹುದಿತ್ತು. ಈ ಸ್ಥಾವರಗಳಲ್ಲಿ ಭಕ್ತಿಭಾವಗಳ ಆಚರಣೆ, ಧ್ಯಾನ ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳ ಬದಲು ಅಥವಾ ಅದರೊಟ್ಟಿಗೆ ವಿಚಾರ ಮಂಥನ ಶಿಬಿರಗಳನ್ನು, ಸಣ್ಣ ಸಣ್ಣ ಗುಂಪುಗಳಿಗೆ, ಸರದಿಯ ಮೇಲೆ ನಡೆಸಿದಲ್ಲಿ ಭವಿಷ್ಯದತ್ತ ಮುಖಮಾಡಿರುವ ಯುವ ಜನಾಂಗಕ್ಕೆ, ಕೈಚಾಚಿ ನಿಂತಿರುವ ವಂಚಿತ ಯುವ ಸಮುದಾಯಗಳಿಗೆ, ಶೋಷಿತ ಸಮಾಜಗಳಿಗೆ ವಸ್ತುಸ್ಥಿತಿಯನ್ನು ಮನದಟ್ಟು ಮಾಡುವುದು ಸುಲಭವಾಗುತ್ತಿತ್ತು. ಅಲ್ಲಿ ನಮ್ಮ ಪ್ರಧಾನ ಎದುರಾಳಿ ಯಾವುದು ಎಂದು ವಿಶ್ಲೇಷಿಸಬಹುದಿತ್ತು. ದುರದೃಷ್ಟವಶಾತ್ ನಾವು ಈಗಲೂ ಸಹ ಸೆಮಿನಾರ್‌ಗಳಿಂದಾಚೆ ಯೋಚಿಸುತ್ತಿಲ್ಲ.
ವ್ಯವಸ್ಥೆಯ ಒಳಸುಳಿಗಳ ಅರಿವು
ನವ ಉದಾರವಾದ, ಬಂಡವಾಳಶಾಹಿ ಆರ್ಥಿಕತೆ, ಕಾರ್ಪೋರೇಟ್ ಮಾರುಕಟ್ಟೆ ಈ ಚೌಕಟ್ಟುಗಳಲ್ಲೇ ತಮ್ಮ ಪಾರಂಪರಿಕ ಅಸ್ತಿತ್ವವನ್ನು ಮರಳಿ ಗಳಿಸಿ ಗಟ್ಟಿಗೊಳಿಸಿಕೊಳ್ಳುವ ಪಿತೃಪ್ರಧಾನ, ಊಳಿಗಮಾನ್ಯ ಮೌಲ್ಯಗಳು ಮತ್ತು ಈ ಮೌಲ್ಯಗಳಿಗೆ ಆಸರೆ ನೀಡುವ ಜಾತಿ ವ್ಯವಸ್ಥೆಯ ಮೇಲ್ ಸ್ತರದ ಸಮಾಜಗಳು ಹಾಗೂ ಹಿಂದುತ್ವ ರಾಜಕಾರಣ ಇವೆಲ್ಲವೂ ಸಹ ತಳಸಮಾಜದ ಒಳಸಂಕಟಗಳಿಗೆ ಕಾರಣ ಎನ್ನುವುದನ್ನು ಅರ್ಥಮಾಡಿಕೊಂಡಾಗ, ಈ ಪ್ರಧಾನ ಎದುರಾಳಿಯ ಸ್ವರೂಪವೂ ಅರ್ಥವಾದೀತು. ʼ ಮನುವಾದ ʼ ಇದರ ಒಂದು ಭಾಗ ಮಾತ್ರ. ಈ ಎಲ್ಲ ವಲಯಗಳನ್ನೂ ಒಳಹೊಕ್ಕು ನೋಡಿದರೆ ಅಲ್ಲಿ ರಾಜಕೀಯವಾಗಿ ಸಮಾಜವಾದಿಗಳೂ, ಲೋಹಿಯಾವಾದಿಗಳೂ, ಅಂಬೇಡ್ಕರ್‌ವಾದಿಗಳೂ, ಪೆರಿಯಾರ್‌ವಾದಿಗಳೂ, ಕೆಲವು ಮಾರ್ಕ್ಸ್‌ವಾದಿಗಳೂ ಕಾಣುತ್ತಾರೆ.
ಇದನ್ನು ಯುವ ಜನಾಂಗಕ್ಕೆ ಅರ್ಥ ಮಾಡಿಸುವುದು ಹೇಗೆ ?
ಕಳೆದ ಐದಾರು ದಶಕಗಳ ದಲಿತ ಚಳುವಳಿಗಳ ಪಯಣದಲ್ಲಿ ಪ್ರತಿ ತಾಲ್ಲೂಕಿನಲ್ಲೊಂದು ʼ ಅಂಬೇಡ್ಕರ್ ವಿಚಾರಮಂಥನ ಶಾಲೆ ʼ (Ambedkar School of Thought) ಆರಂಭಿಸುವ ಅವಕಾಶ ಸಾಧ್ಯತೆ ಖಂಡಿತವಾಗಿಯೂ ಇತ್ತು. ಇದನ್ನೇ ʼ ಚಳುವಳಿಯ ಸಾಂಸ್ಥಿಕ ಬೆಳವಣಿಗೆ ʼ ( Institutional Growth of Movements) ಎನ್ನುವುದು. ಇದು ಸಾಧ್ಯವಾಗಿದ್ದಲ್ಲಿ ಮಿಲೆನಿಯಂ ಯುವ ಜನಾಂಗ ಈಗ ನಡೆಯುತ್ತಿರುವ ಒಳಮೀಸಲಾತಿ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಏಕೆಂದರೆ ಮೀಸಲಾತಿ ಎಂಬ ಸಾಂವಿಧಾನಿಕ ಕಲ್ಪನೆಯ ಮೂಲ ಧಾತು ಇರುವುದೇ ಯುವ ಜನಾಂಗದಲ್ಲಿ. ಉದ್ಯೋಗವೇ ಮರೀಚಿಕೆಯಾಗುತ್ತಿರುವ ವಿಕಸಿತ ಭಾರತದಲ್ಲಿ ಈ ಸಮಾಜವೇ ಪ್ರಧಾನ ಭಾಗಿದಾರ (Stakeholder) ಆಗಿರುವುದರಿಂದ, ಇಲ್ಲಿ ಹೂಡಲಾಗುವ ಬೌದ್ಧಿಕ ಬಂಡವಾಳ ಭವಿಷ್ಯದ ಸ್ಥಾವರಗಳನ್ನು ನಿರ್ಮಿಸಲು ಸಹಾಯಕವಾಗುತ್ತದೆ.
ಒಂದುಗೂಡಿಸುವ ದಾರಿಯಲ್ಲಿ,,,,,,
ಈಗ ʼ ಒಂದುಗೂಡಿಸುವ ʼ ಪ್ರಯತ್ನಗಳಿಗೆ ಈ ಯುವ ಜನಾಂಗವೇ ಅಡಿಪಾಯವಾಗಬೇಕು. ಕೇವಲ ಸಂಘಟನೆ, ಬ್ಯಾನರ್, ಬಾವುಟ ಅಥವಾ ನಾಯಕತ್ವಗಳ ಒಗ್ಗೂಡುವಿಕೆ ನಿಷ್ಪ್ರಯೋಜಕವಾಗುತ್ತದೆ. ಒಂದುಗೂಡಬೇಕಿರುವುದು ಮನಸ್ಸುಗಳು, ಯುವ ಮನಸ್ಸುಗಳು ಮತ್ತು ಅವಕಾಶವಂಚಿತ ಮನಸ್ಸುಗಳು. ಒಂದುಗೂಡಿಸುವ ಜವಾಬ್ದಾರಿ ಹೊರಬೇಕಿರುವುದು ಮೇಲ್ದರ್ಜೆಗೆ ಬಡ್ತಿ ಪಡೆದಿರುವ ಫಲಾನುಭವಿ ಸಮಾಜಗಳು, ಸಂವಿಧಾನದ ಆಸರೆಯಲ್ಲೇ ಅತ್ಯುನ್ನತ ಬೌದ್ಧಿಕ ಕೇಂದ್ರಗಳಲ್ಲಿರುವ ಅಕಾಡೆಮಿಕ್ ಮನಸ್ಸುಗಳು, ಮಾರುಕಟ್ಟೆ ಆರ್ಥಿಕತೆಯಿಂದ ಉನ್ನತೀಕರಣಕ್ಕೊಳಗಾಗಿರುವ ಸಮಾಜಗಳು ಮತ್ತು ಅಪಾರ ಅಧ್ಯಯನ ಸಂಶೋಧನೆಯ ಆಗರಗಳಾಗಿರುವ, ಸಾಹಿತಿ-ಕಲಾವಿದರನ್ನೂ ಒಳಗೊಂಡ ಚಿಂತಕರ ವಲಯ.
ನಮ್ಮಲ್ಲಿ ಅರಿವಿನ ಭಂಡಾರಗಳು ಹೇರಳವಾಗಿವೆ ಅದರೆ ಅರಿವು ಪ್ರಸರಣದ ಕೇಂದ್ರಗಳು ಕಡಿಮೆ. ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಅರಿವು ಸಂಪೂರ್ಣ ಮನದಟ್ಟಾದಾಗ ಮಾತ್ರ ಅಲ್ಲಿ ʼ ಪ್ರಜ್ಞೆ ʼ ಜಾಗೃತವಾಗುತ್ತದೆ. ವರ್ತಮಾನದ ಸಂದಿಗ್ಧತೆಯಲ್ಲಿ ಈ ಪ್ರಜ್ಞೆಯೇ ದೊಡ್ಡ ಶಕ್ತಿ. ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ, ನಾಗರಿಕ ಪ್ರಜ್ಞೆ, ಲಿಂಗತ್ವ ಪ್ರಜ್ಞೆ ಇವೆಲ್ಲದರ ಸಮ್ಮಿಶ್ರಣವನ್ನು ಯುವ ಜನಾಂಗದ ನಡುವೆ ಬಿತ್ತಬೇಕಿದೆ. ಆಗ ಭವಿಷ್ಯ ಭಾರತದ ಭಾಗಿದಾರರಿಗೆ ಅವರ ಮುಂದಿನ ಅಪಾಯಗಳ ಅರಿವಾಗುತ್ತದೆ. ಈ ಯುವ ಜನಾಂಗದಲ್ಲಿ ಸಿದ್ಧಮಾದರಿಗಳಿಂದಾಚೆ ನೋಡುವ ಹೊಸ ದೃಷ್ಟಿಯನ್ನು ಬೆಳೆಸುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ. ದಲಿತ ಚಳುವಳಿಗಳನ್ನು ʼ ಒಂದುಗೂಡಿಸುವ ʼ ಆಲೋಚನಾ ಕ್ರಮದಲ್ಲಿ ಈ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ವರ್ತಮಾನದ ತುರ್ತು, ಹಿರಿಯ ಪೀಳಿಗೆಯ ನೈತಿಕ ಕರ್ತವ್ಯ.
ತೆರೆದ ಮನಸ್ಸುಗಳಿಂದ ಯೋಚಿಸೋಣ, ಬಾಗಿಲುಗಳನ್ನು ತೆರೆದು ಸಂವಾದಿಸೋಣ.
-೦-೦-೦-






