ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ಮುಂದುವರೆದಿದ್ದು, ಇಂದು ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಪ್ರಧಾನಿ ಮೋದಿಯವರ ಭಾಷಣವನ್ನು ರದ್ದುಗೊಳಿಸಲಾಗಿದ್ದು, ಸದನವನ್ನ ನಾಳೆಗೆ ಮುಂದೂಡಲಾಗಿದೆ.

ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಬೇಕಿತ್ತು. ಆದರೆ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ಸದನವನ್ನ ನಾಳೆಗೆ ಮುಂದೂಡಲಾಗಿದೆ. ಲೋಕಸಭೆಯಲ್ಲಿ ಚೀನಾ – ಭಾರತದ ಸೇನಾ ತಿಕ್ಕಾಟ ವಿಷಯಕ್ಕೆ ಸಂಬಂಧಿಸಿದ ವಿವಾದವು ಮುಂದುವರೆಯುತ್ತಿದೆ.

ಅಹಿತಕರ ಘಟನೆಯಿಂದ ಬಜೆಟ್ ಅಧಿವೇಶನದಲ್ಲಿ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರು ಭಾರೀ ಘೋಷಣೆಗಳನ್ನು ಕೂಗಿದ ನಂತರ ಇಂದು ಲೋಕಸಭೆ ಕಲಾಪವನ್ನು ಮುಂದೂಡಲಾಯಿತು.

ಚರ್ಚೆಗಾಗಿ ಸದನವು 18 ಗಂಟೆಗಳ ಸಮಯವನ್ನು ಮೀಸಲಿಟ್ಟಿದ್ದು,ಲೋಕಸಭೆ ಅಧಿವೇಶನವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನವು ಏಪ್ರಿಲ್ 2ರಂದು ಕೊನೆಗೊಳ್ಳಲಿದೆ. ಫೆಬ್ರವರಿ 13ರಂದು ಎರಡೂ ಸದನಗಳು ವಿರಾಮ ತೆಗೆದುಕೊಂಡು ಮಾರ್ಚ್ 9ರಂದು ಮತ್ತೆ ಸಭೆ ಸೇರಲಿದೆ.

