ಬೆಂಗಳೂರು : ಜೂನ್ 1: ಮೇಕೆದಾಟು ಯೋಜನೆ ಕುರಿತು ಆಕ್ರಮಣಕಾರಿ ವರ್ತನೆ ಬಿಡಿ ಎಂದು ತಮಿಳುನಾಡಿ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಉದ್ಧಟತನದ ಹೇಳಿಕೆ ಬೆನ್ನಲ್ಲೆ ಕರ್ನಾಟಕದ ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ಇಂದು ಸರಣಿ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ. ಆದರೆ, ಖರ್ಚು ಮಾಡಿಲ್ಲ. ಮೇಕೆದಾಟು ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ ಎಂದಿದ್ದಾರೆ.



ಕರ್ನಾಟದಲ್ಲಿ ನೆಲೆಸಿರುವ ತಮಿಳಿಗರು ಹಾಗೂ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಕೋರ್ಟು, ಕಚೇರಿ ಅಲೆದದ್ದು ಸಾಕು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಕಾವೇರಿ ಪಾತ್ರದಲ್ಲಿರುವ ರೈತರಿಗೆ ನೀರಾವರಿ ಹಾಗೂ ಶ್ರೀಸಾಮಾನ್ಯರಿಗೆ ಕುಡಿಯುವ ನೀರು ಎರಡೂ ಲಭಿಸಲಿದೆ ಎಂದು ತಿಳಿಸಿದ್ದಾರೆ. ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅಕ್ಕಪಕ್ಕದ ರಾಜ್ಯದವರು ಅಣ್ಣ ತಮ್ಮಂದಿರಂತೆ ಬದುಕೋಣ. ನಿಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ಒಬ್ಬರಿಗೊಬ್ಬರು ಸಹಕರಿಸುತ್ತಾ ಜೊತೆಯಾಗಿ ಸಾಗೋಣ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮನವಿ ಮಾಡಿದ್ದಾರೆ.






