ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಬಜೆಟ್ನಲ್ಲಿ ₹1,000 ಕೋಟಿ ಅನುದಾನ ಘೋಷಿಸಿರುವುದನ್ನು ಕೆಪಿಸಿಸಿ ಅಧ್ಯ ಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸ್ವಾಗತಿಸಿದ್ದು, ಇದನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ (CM Bommai), ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ ಚೊಚ್ಚಲ ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ ₹1,000 ಕೋಟಿ ಅನುದಾನ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಕೆಶಿ, ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ನೀರಿನ ವಿಷಯದಲ್ಲಿ ಕರ್ನಾಟಕವನ್ನು ಸ್ವಾವಲಂಬಿಯಾಗಿಸುವ ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಮುಂದುವರೆದು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸಲಾದ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕನ್ನಡಿಗರಿಗೂ ಇದರ ಪ್ರತಿಫಲ ಸಲ್ಲುತ್ತದೆ. ಇದು ನಮ್ಮೆಲ್ಲರ ಗೆಲುವು. ಸಾಮೂಹಿಕ ಹೋರಾಟದಿಂದ ಹಕ್ಕುಗಳನ್ನು ಪಡೆಯಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.

ಆದರೆ, ಕಳೆದ ಸಾಲಿನ ಬಜೆಟ್ನಲ್ಲಿ ಬೆಂಗಳೂರು ನಗರಕ್ಕೆ ಘೋಷಿಸಿದ್ದ ₹ 7,795 ಕೋಟಿ ವೆಚ್ಚದ ಕಾರ್ಯಕ್ರಮವನ್ನು ಸರ್ಕಾರ ಒಂದು ವರ್ಷ ಕಳೆದರೂ ಈಡೇರಿಸಿಲ್ಲ ಎಂಬುದು ಗಮನಾರ್ಹ. ಹಾಗಾಗಿ ಮಹತ್ವಾಕಾಂಕ್ಷೆಯ ಯೋಜನೆಗೆ ಸಾವಿರ ಕೋಟಿ ರೂಪಾಯಿ ಘೋಷಣೆ ಕೇವಲ ಭರವಸೆಯಾಗಿ ಉಳಿಯದೆ ತ್ವರಿತವಾಗಿ ಕಾರ್ಯಗತಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.






