ಸಂಘಟಿತ ಹೋರಾಟ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್ ಜಿದ್ದಾಜಿದ್ದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಐಪಿಎಲ್ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ.
ಮುಂಬೈನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 177 ರನ್ ಕಲೆ ಹಾಕಿತು. ಬೃಹತ್ ಮೊತ್ತ ಬೆಂಬತ್ತಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್ ಟೈಟಾನ್ಸ್ ಕೊನೆಯ ಓವರ್ ನಲ್ಲಿ 7 ರನ್ ಗಳಿಸಬೇಕಾದ ಸುಲಭ ಗುರಿ ಹೊಂದಿತ್ತು. ಆದರೆ ಡೇನಿಯಲ್ ಸ್ಯಾಮ್ಸ್ 1 ವಿಕೆಟ್ ಪಡೆದಿದ್ದೂ ಅಲ್ಲದೇ ಕೇವಲ 1 ರನ್ ನೀಡಿ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು.

ಗುಜರಾತ್ ಟೈಟಾನ್ಸ್ ಆಡಿದ 11 ಪಂದ್ಯಗಳಿಂದ 8 ಜಯ ಸಾಧಿಸಿ 3 ಸೋಲಿನೊಂದಿಗೆ 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಉಳಿದುಕೊಂಡರೆ, ಮುಂಬೈ 10 ಪಂದ್ಯಗಳಲ್ಲಿ 8 ಸೋಲು ಹಾಗೂ 2 ಗೆಲುವಿನೊಂದಿಗೆ 4 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ.
ಕಠಿಣ ಗುರಿ ಬೆಂಬತ್ತಿದ ಗುಜರಾತ್ ಗೆ ವೃದ್ಧಿಮಾನ್ ಸಾಹ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಗೆ 106 ರನ್ ಜೊತೆಯಾಟ ನಿಭಾಯಿಸಿದರು. ಸಾಹ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ (24) ನಂತರ ತಂಡ ಕುಸಿತ ಅನುಭವಿಸಿದ್ದೂ ಅಲ್ಲದೇ ಕೊನೆಯ ಓವರ್ ನಲ್ಲಿ ಎಡವಿ ಗೆಲುವು ಕೈ ಚೆಲ್ಲಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ (45) ಮತ್ತು ರೋಹಿತ್ ಶರ್ಮ (43) ಮೊದಲ ವಿಕೆಟ್ ಗೆ 74 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಕೆಳ ಕ್ರಮಾಂಕದಲ್ಲಿ ಟಿಮ್ ಡೇವಿಡ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 44 ರನ್ ಬಾರಿಸಿ ತಂಡ ಪೈಪೋಟಿಯ ಮೊತ್ತ ದಾಖಲಿಸಲು ನೆರವಾದರು.