ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೂ ಹೆಚ್ಚಾಗಿದೆ. ಆದರೆ ಕುಮಾರಸ್ವಾಮಿ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಪಾರ್ಟಿ, ಗೆಲುವನ್ನು ಕಸಿದುಕೊಳ್ಳುವ ಯತ್ನದಲ್ಲಿದೆ. ಗ್ಯಾರಂಟಿಗಳಿಂದ ತಾಯಂದಿರ ಮತಗಳು ದಾರಿ ತಪ್ಪಿ ಕಾಂಗ್ರೆಸ್ ಕಡೆಗೆ ಹೋಗುತ್ತಿವೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ಜೆಡಿಎಸ್ ಹಾಗು ಬಿಜೆಪಿ ನಾಯಕರ ಸಮರ್ಥನೆ. ಆದರೆ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ..? ಎಂದು ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ. ಇದರ ಕಿಚ್ಚು ತಣ್ಣಗಾಗಲು ಕಾಂಗ್ರೆಸ್ ಬಿಡುವಂತೆಯೂ ಕಾಣ್ತಿಲ್ಲ.

ಕಳೆದ ಲೋಕಸಭಾ ಚುನಾವಣೆ ವೇಳೆ ಇದೇ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಆದರೆ ಆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದ ಸುಮಲತಾ ಅಂಬರೀಷ್ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದವು. ಆ ಬಳಿಕ ಚುನಾವಣಾ ಫಲಿತಾಂಶ ವ್ಯತಿರಿಕ್ತವಾಗಿ ಬಂದಿತ್ತು. ಮಂಡ್ಯದ 7 ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರುವ ಕೆ.ಆರ್ ನಗರದಲ್ಲೂ ಜೆಡಿಎಸ್ ಶಾಸಕರೇ ಇದ್ದರು. ಆದರೂ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆಗಿದ್ದ ನಿಖಿಲ್ ಕುಮಾರಸ್ವಾಮಿ ಸೋಲುಂಡಿದ್ದರು. ಸ್ವತಃ ಮುಖ್ಯಮಂತ್ರಿ ಆಗಿದ್ದರೂ ಕುಮಾರಸ್ವಾಮಿ ತಮ್ಮ ಮಗನ ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತದೇ ಸ್ಥಿತಿ ಎದುರಾಗುವ ಸಾಧ್ಯತೆಯಿದೆ.

ಮಂಡ್ಯ ಜಿಲ್ಲೆಯ ಜನರು ಹೆಚ್ಚಾಗಿ ಭಾವನೆಗಳಿಗೆ ಹೆಚ್ಚು ಬೆಲೆ ಕೊಡ್ತಾರೆ. ಗ್ಯಾರಂಟಿ ಯೋಜನೆ ಬಗ್ಗೆ ಕುಮಾರಸ್ವಾಮಿ ಹೇಳಿರುವ ಮಾತಿಗೆ ಕಾಂಗ್ರೆಸ್ ತಿರುವು ಕೊಟ್ಟು ಆಗಿದೆ. ಇದರಿಂದ ಬಿಡಿಸಿಕೊಳ್ಳುವ ದಾರಿಯನ್ನು ಕುಮಾರಸ್ವಾಮಿ ನೋಡಿಕೊಳ್ಳಬೇಕಿದೆ. ಇದೀಗ ವಿಷಾದ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಮುಳ್ಳಿನ ಮೇಲೆ ಬಿದ್ದಿರುವ ಬಟ್ಟೆಯನ್ನು ಬಿಡಿಸಿಕೊಳ್ಳಬೇಕಿದೆ. ಇಲ್ಲದಿದ್ರೆ ಮಂಡ್ಯ ಜನರ ಭಾವನೆಗಳು ಯಾರನ್ನು ಬೇಕಿದ್ದರೂ ಸೋಲಿಸುವ ಗುಣ ಹೊಂದಿದ್ದಾರೆ. ಈ ಹಿಂದೆ ಅದೆಷ್ಟೇ ದೊಡ್ಡ ನಾಯಕರಾದರೂ ಸೋಲಿಸಿ ಕಳುಹಿಸುವ ದಾರ್ಷ್ಯ ತೋರಿಸುವ ಮಂಡ್ಯದ ಜನರು ಕುಮಾರಸ್ವಾಮಿಯನ್ನು ಸೋಲಿಸಿ ಕಳುಹಿಸುವುದರಲ್ಲಿ ನೋಡೌಟ್.

ಕುಮಾರಸ್ವಾಮಿ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಮಾತನಾಡುವ ವ್ಯಕ್ತಿತ್ವ ಹೊಂದಿರುವ ಮನುಷ್ಯ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಮನಸ್ಸಿಗೆ ತೋಚಿದನ್ನು ಹಿಂದೆ ಮುಂದೆ ನೋಡದೆ ಹೇಳಿಬಿಡ್ತಾರೆ. ಇದನ್ನು ಈ ಹಿಂದಿನ ಹಲವು ಪ್ರಕರಣಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಅದರಿಂದ ಆಗುವ ಅನಾಹುತಗಳ ಬಗ್ಗೆ ಕಿಂಚಿತ್ತು ಯೋಚಿಸುವುದಿಲ್ಲ. ಹಳ್ಳಿ ಜನರೂ ಕೂಡ ಗ್ಯಾರಂಟಿ ಬಿಟ್ಟಿ ಬಸ್ ಹಾಗು 2 ಸಾವಿರ ಬರ್ತಿರೋದ್ರಿಂದ ಹೆಂಡ್ತಿ ಮಾತೇ ಕೇಳಲ್ಲ ಅನ್ನೋ ಮಾತುಗಳು ಸಾಕಷ್ಟು ವೈರಲ್ ಕೂಡ ಆಗಿವೆ. ಇದನ್ನೇ ಗಮನಿಸಿರುವ ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯಿಂದ ಆಗುವ ಅನಾಹುತದ ಬಗ್ಗೆ ಚಿಂತಿಸಿಲ್ಲ. ಅದ್ಯ ಸತ್ಯವೂ ಇರಬಹುದು. ಆದರೆ ಹೇಳುವುದಕ್ಕೆ ಕೆಲವೊಂದು ರೀತಿನೀತಿಗಳು ಅತ್ಯಗತ್ಯ. ತಪ್ಪು ಮಾಡಿದ್ದಾರೆ. ತಿದ್ದಿಕೊಳ್ಳದಿದ್ದರೆ ಸಂಕಷ್ಟ ಗ್ಯಾರಂಟಿ.
ಕೃಷ್ಣಮಣಿ







