ತಮ್ಮ ತತ್ವ ಪದಗಳು ಹಾಗೂ ಮಾನವೀಯ ವಿಚಾರಗಳಿಂದ ಭಾವೈಕ್ಯತೆ ಸಂದೇಶ ಸಾರುತ್ತಾ, ಸೌಹಾರ್ದ ಸಮಾಜ ನಿರ್ಮಾಣಕ್ಕೆ ಅನನ್ಯ ಕಾಣಿಕೆ ನೀಡಿದರವಲ್ಲಿ ಕನ್ನಡದ ಕಬೀರರೆಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ ಮೊದಲ ಸಾಲಲ್ಲಿ ನಿಲ್ಲುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸರ್ವಧರ್ಮಗಳ ಸಾರ ಒಂದೇ ಎಂದು ಸಾರುತ್ತಾ ಸರ್ವಧರ್ಮ ಜನರ ಸಾಮರಸ್ಯಕ್ಕೆ ಶ್ರಮಿಸುತ್ತಿದ್ದ ಸುತಾರರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟ ಮಾತ್ರವಲ್ಲ, ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ ಎಂದು ತಿಳಿಸಿದರು.
ಎಲ್ಲರೂ ಒಂದೇ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಅವರು, ಕನ್ನಡಿಗರ ಪಾಲಿಗೆ ಸಂತ ಕಬೀರ ಸ್ವರೂಪರೇ ಆಗಿದ್ದರು. ಪದ್ಮಶ್ರೀ ಪುರಸ್ಕೃತರು ಆಗಿದ್ದ ಸುತಾರರು ತಮ್ಮ ಜೀವನದ ಕೊನೆ ಕ್ಷಣದವರೆಗೂ ಶಾಂತ ಸಮಾಜಕ್ಕಾಗಿ ಹಂಬಲಿಸಿದ್ದರು. ಅವರ ಆಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟುಂಬದವರು, ಅಭಿಮಾನಿಗಳಿಗೆ ಸಿಗಲಿ ಹಾಗೂ ಇಬ್ರಾಹಿಂ ಸುತಾರ ಆವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಆ ಭಗವಂತನನ್ನು ಪ್ರಾರ್ಥನೆ ಮಾಡುವುದಾಗಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.