ವಿಮಾನ ಪ್ರಯಾಣಿಕರಿಗೆ ದೊಡ್ಡ ಶಾಕ್ ನೀಡುವಂತೆ ಇಂಡಿಗೋ ಏಪ್ರಿಲ್ 2, 2026ರಿಂದ ತನ್ನ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಇಂಧನ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉದ್ಭವಿಸಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಜೆಟ್ ಫ್ಯೂಯೆಲ್ ದರವು ಸುಮಾರು 130% ಏರಿಕೆಯಾಗಿದೆ. ಇದೇ ಕಾರಣದಿಂದ ವಿಮಾನ ಟಿಕೆಟ್ ದರಗಳಲ್ಲೂ ಹೆಚ್ಚಳ ಕಂಡುಬಂದಿದೆ.

ದೇಶೀಯ ವಿಮಾನ ಪ್ರಯಾಣದ ಹೊಸ ದರಗಳ ಪ್ರಕಾರ, ಪ್ರಯಾಣದ ದೂರದ ಆಧಾರದ ಮೇಲೆ ಹೆಚ್ಚುವರಿ ಇಂಧನ ಶುಲ್ಕ ವಿಧಿಸಲಾಗುತ್ತದೆ. 0-500 ಕಿ.ಮೀಗೆ ₹275, 501-1000 ಕಿ.ಮೀಗೆ ₹400, 1001-1500 ಕಿ.ಮೀಗೆ ₹600, 1501-2000 ಕಿ.ಮೀಗೆ ₹800 ಹಾಗೂ 2000 ಕಿ.ಮೀ ಮೇಲ್ಪಟ್ಟ ಪ್ರಯಾಣಕ್ಕೆ ₹950 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.

ಇದೇ ವೇಳೆ, ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಇನ್ನಷ್ಟು ಹೊರೆ ಹೆಚ್ಚಾಗಿದೆ. ಯುರೋಪ್ ಮತ್ತು ಬ್ರಿಟನ್ಗೆ ಪ್ರಯಾಣಿಸುವವರಿಗೆ ಪ್ರತಿ ಸೆಕ್ಟರ್ಗೆ ಸುಮಾರು ₹10,000ರವರೆಗೆ ಹೆಚ್ಚಳವಾಗಿದ್ದು, ಗಲ್ಫ್ ರಾಷ್ಟ್ರಗಳಿಗೆ ₹3,000ರಿಂದ ₹5,000, ಆಗ್ನೇಯ ಏಷ್ಯಾ ಮತ್ತು ಚೀನಾಕ್ಕೆ ₹3,500ರಿಂದ ₹5,000 ಹಾಗೂ ಆಫ್ರಿಕಾ ಮಾರ್ಗಗಳಿಗೆ ₹5,000ವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.

ಇಂಧನ ದರದ ಏರಿಕೆಯನ್ನು ಗಮನಿಸಿ ಭಾರತ ಸರ್ಕಾರ ಶೇ.25ರಷ್ಟು ಸಬ್ಸಿಡಿ ನೀಡಿದರೂ, ಜಾಗತಿಕ ಇಂಧನ ಪೂರೈಕೆ ವ್ಯತ್ಯಯದಿಂದ ಈ ಹೆಚ್ಚಳ ತಪ್ಪಿಸಲು ಸಾಧ್ಯವಾಗಿಲ್ಲ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಗಳಿಂದ ಇಂಧನ ಸರಬರಾಜು ಸಂಕಷ್ಟಕ್ಕೀಡಾಗಿದೆ.ವಿಮಾನಯಾನ ಸಂಸ್ಥೆಗಳ ಒಟ್ಟು ವೆಚ್ಚದಲ್ಲಿ ಸುಮಾರು 40% ಇಂಧನ ವೆಚ್ಚವೇ ಇರುವುದರಿಂದ, ಈ ಭಾರವನ್ನು ಹೊರುವುದಕ್ಕೆ ಸಾಧ್ಯವಾಗದೆ ಪ್ರಯಾಣಿಕರ ಮೇಲೆ ವರ್ಗಾಯಿಸಲಾಗಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
ಇಂಧನ ದರ ಏರಿಕೆಯ ಪರಿಣಾಮವಾಗಿ ವಿಮಾನ ಪ್ರಯಾಣ ಇನ್ನಷ್ಟು ದುಬಾರಿಯಾಗಿದ್ದು, ಪ್ರವಾಸ ಯೋಜನೆ ಮಾಡುವವರಿಗೆ ಹೆಚ್ಚುವರಿ ಖರ್ಚಿನ ಭಾರ ಬೀಳಲಿದೆ.






