ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ (Shamanurushivashankarappa) ಕಾಂಗ್ರೆಸ್ ಪಕ್ಷವನ್ನೇ ಕಡೆಗಣಿಸಿ, ಬಿಜೆಪಿ (BJP) ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಬಿಜೆಪಿ ಎಂಪಿ ಗೆಲ್ಲಿಸುವಂತೆ ಶಿವಮೊಗ್ಗದಲ್ಲಿ ಕರೆಕೊಟ್ಟಿದ್ದಾರೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ. ಸಮುದಾಯಕ್ಕಾಗಿ ಸ್ವಪಕ್ಷವನ್ನೇ ಮರೆತು ಭಾಷಣ ಮಾಡಿದ್ದಾರೆ ಶಾಮನೂರು. ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ, ಶಿವಮೊಗ್ಗ ಸಂಸದ ಬಿಜೆಪಿಯ ಬಿ.ವೈ.ರಾಘವೇಂದ್ರ (BYRaghavendra) ಪರ ಬ್ಯಾಟಿಂಗ್ ಮಾಡಿದ್ದಾರೆ. ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಂಸದ ರಾಘವೇಂದ್ರರನ್ನು ಪುನಃ ಗೆಲ್ಲಿಸುವಂತೆ ಕರೆ ನೀಡಿದ್ದಾರೆ.

ಮತ್ತೆ ರಾಘವೇಂದ್ರರನ್ನು ಗೆಲ್ಲಿಸಿ, ಸಂಸದರನ್ನಾಗಿ ಮಾಡಿ!
ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ನಡೆದ ಸಮ್ಮೇಳನದಲ್ಲಿ ಶಾಮನೂರು ಮಾತನಾಡಿದ್ದು, ರಾಘವೇಂದ್ರರಂತ ಪಾರ್ಲಿಮೆಂಟ್ ಸದಸ್ಯರನ್ನು ಪಡೆದ ನೀವೇ ಧನ್ಯರು. ಕ್ಷೇತ್ರದಲ್ಲಿ ಆಗಬೇಕಾದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಕಷ್ಟವಿದ್ದರೂ ಕೂಡ ನಿರಂತರವಾಗಿ ಬೆನ್ನತ್ತಿ ಮಾಡುವ ಧೀಮಂತ ನಾಯಕ ರಾಘವೇಂದ್ರ ಎಂದು ಹಾಡಿ ಹೊಗಳಿದ್ದಾರೆ. ಒಳ್ಳೆಯ ವ್ಯಕ್ತಿಯನ್ನು ನೀವು ಸಂಸದರಾಗಿ ಆಯ್ಕೆ ಮಾಡಿದ್ದೀರಿ. ಅವರು ಸಹ ಸಂಸದರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಲೋಕಸಭಾ ಚುನಾವಣೆ ಸಹ ಬರುತ್ತೆ. ಬಿಜೆಪಿಯಿಂದ ರಾಘವೇಂದ್ರ ಅವರೇ ನಿಲ್ತಾರೆ. ಬೇರೆ ಯಾರು ಇಲ್ಲ. ನನ್ನ ಆಶೀರ್ವಾದ ಯಾವಾಗಲೂ ಇರುತ್ತೆ. ಅವರು ಮತ್ತೆ ಸ್ಫರ್ಧೆ ಮಾಡೇ ಮಾಡ್ತಾರೆ. ಕ್ಷೇತ್ರದ ಅಭಿವೃದ್ಧಿ ಎಷ್ಟು ಮಾಡಿದ್ದಾರೆ ಎಂಬುದನ್ನು ತೂಕ ಮಾಡಿ. ಅವರನ್ನು ಗೆಲ್ಲಿಸುವ ದೊಡ್ಡ ಕರ್ತವ್ಯ ನಿಮ್ಮದಾಗಿದೆ ಎಂದಿದ್ದಾರೆ ಶಾಮನೂರು ಶಿವಶಂಕರಪ್ಪ.

ಗೀತಾ ಶಿವರಾಜ್‌ಕುಮಾರ್ ಕನಸು ನನಸಾಗಲ್ಲ..!
ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅವರನ್ನು ಅಖಾಡಕ್ಕೆ ಇಳಿಸಲು ಮಧು ಬಂಗಾರಪ್ಪ ತಯಾರಿ ಮಾಡಿಕೊಳ್ತಿದ್ದಾರೆ. ಶಿವಣ್ಣ ಕೂಡ ಗೀತಾ ಸ್ಪರ್ಧೆ ಮಾಡಿದ್ರೆ ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗ್ತೀನಿ ಎಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕರೇ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ನಾಯಕರು ಈ ರೀತಿ ಹೇಳಿದಾಗ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇರುವುದೇ ಸೂಕ್ತ ಎನ್ನಬಹುದು. ನಾಮಕಾವಸ್ತೆಗೆ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಿ ಒಳ ಒಪ್ಪಂದ ಮಾಡಿಕೊಳ್ಳುವ ಬದಲು ಅವಿರೋಧವಾಗಿ ಆಯ್ಕೆ ನಡೆದರೆ ಚುನಾವಣಾ ವೆಚ್ಚವಾದರೂ ಉಳಿಯುತ್ತದೆ ಅಲ್ಲವೇ..?

ಕೆಪಿಸಿಸಿ ಅಧ್ಯಕ್ಷರು ಶಾಮನೂರಿಗೆ ನೋಟಿಸ್ ನೀಡ್ತಾರಾ..?
ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ವಿರುದ್ಧ ಆಗ್ಗಿಂದಾಗ್ಗೆ ಹೇಳಿಕೆ ನೀಡುತ್ತಿದ್ದಾಗ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಪಕ್ಷದಲ್ಲಿ ಆಗಿದ್ದರೆ ನೋಟಿಸ್ ನೀಡಿ ಶಿಸ್ತುಕ್ರಮ ಜರುಗಿಸುತ್ತಿದ್ದೆವು ಎಂದಿದ್ದರು. ಆದರೆ ಇದೀಗ ಕಾಂಗ್ರೆಸ್ ಶಾಸಕರೂ ಆಗಿರುವ ಶಾಮನೂರು ಶಿವಶಂಕರಪ್ಪ, ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗ ಸಭೆಯಲ್ಲಿ ಕರೆ ನೀಡಿದ್ದಾರೆ. ಈಗ ಶಾಮನೂರಿಗೆ ನೋಟಿಸ್ ಕೊಡ್ತಾರಾ..? ಶಿಸ್ತುಕ್ರಮ ತೆಗೆದುಕೊಳ್ತಾರಾ..? ಅಥವಾ ಶಾಮನೂರು ಹಿರಿಯ ನಾಯಕ ಅನ್ನೋ ಕಾರಣಕ್ಕೆ ಸುಮ್ಮನಾಗ್ತಾರಾ..? ಕರೆದು ಮಾತನಾಡಿ ತೇಪೆ ಹಚ್ಚುವ ಕೆಲಸ ಮಾಡ್ತಾರಾ..? ಅನ್ನೋದನ್ನು ಕಾದು ನೋಡಬೇಕಿದೆ.