• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ತುರ್ತುಪರಿಸ್ಥಿತಿ – ಚರಿತ್ರೆ ಮತ್ತು ವರ್ತಮಾನ

ಪ್ರತಿಧ್ವನಿ by ಪ್ರತಿಧ್ವನಿ
June 27, 2024
in Uncategorized
0
ತುರ್ತುಪರಿಸ್ಥಿತಿ – ಚರಿತ್ರೆ ಮತ್ತು ವರ್ತಮಾನ
Share on WhatsAppShare on FacebookShare on Telegram
50 ವರ್ಷಗಳಲ್ಲಿ ಭಾರತದ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಪಾಠವನ್ನು ಕಲಿತೇ ಇಲ್ಲ
—–ನಾ ದಿವಾಕರ ——

 

 “ ಭೂತದ ಬಾಯಲ್ಲಿ ಭಗವದ್ಗೀತೆ ” ಎಂಬ ನಾಣ್ಣುಡಿ ಭಾರತೀಯ ಸಮಾಜದಲ್ಲಿ ಬಹಳ ಕಾಲದಿಂದಲೂ ಪ್ರಚಲಿತವಾಗಿದೆ. ಹಣಬಲ-ಶಿಫಾರಸ್ಸು-ಜಾತಿಬಲ ಮೊದಲಾದ ಭ್ರಷ್ಟ ಮಾರ್ಗಗಳನ್ನೇ ಅನುಸರಿಸಿ ಅಧಿಕಾರ ಕೇಂದ್ರಗಳಲ್ಲಿ ವಿರಾಜಮಾನರಾಗುವ ಉಪಕುಲಪತಿಗಳು, ಅಧಿಕಾರಶಾಹಿಗಳು, ಬೌದ್ಧಿಕ ವಲಯದ ಪರಿಚಾರಕರು ಪ್ರಾಮಾಣಿಕತೆ-ಪಾರದರ್ಶಕತೆ-ನಿಸ್ವಾರ್ಥತೆಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವುದು, ಗಾಂಧಿ ಅಂಬೇಡ್ಕರ್‌ ಮುಂತಾದವರನ್ನು ಉದ್ಧರಿಸುತ್ತಾ ಎಳೆಯರಿಗೆ ಉಪದೇಶ ಮಾಡುವುದು ವರ್ತಮಾನ ಭಾರತದ ಒಂದು ವಿಲಕ್ಷಣ. ಹಾಗೆಯೇ ಚುನಾಯಿತ ಸರ್ಕಾರಗಳು ನಾಗರಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯುಎಪಿಎ ದಂತಹ ಕರಾಳ ಶಾಸನಗಳನ್ನು ಬಳಸುತ್ತಲೇ ಪ್ರಜಾಪ್ರಭುತ್ವ-ಸಂವಿಧಾನದ ಬಗ್ಗೆ ಮಾತನಾಡುವುದೂ ಮತ್ತೊಂದು ವಿಲಕ್ಷಣ. ಈ ದೃಷ್ಟಿಯಿಂದಾದರೂ ಜನಸಾಮಾನ್ಯರ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡಬೇಕಾದ ಜವಾಬ್ದಾರಿ ಇರುವ ಯಾವುದೇ ರಾಜಕೀಯ ಪಕ್ಷವು 1975ರ ತುರ್ತುಪರಿಸ್ಥಿತಿಯಿಂದ ಪಾಠ ಕಲಿಯಲೇಬೇಕು.

 

ಅದರೆ ಯಾವ ಪಕ್ಷಗಳೂ ಪಾಠ ಕಲಿತಿಲ್ಲ ಎನ್ನುವುದೇ ವಿಪರ್ಯಾಸ. 1975ರಲ್ಲಿ ಇಂದಿರಾಗಾಂಧಿ ತಮ್ಮ ವಂಶಾಡಳಿತವನ್ನು ಕಾಪಾಡಲು ದೇಶವನ್ನು ಕರಾಳ ಕೂಪಕ್ಕೆ ದೂಡಿದರು ಎಂದು ದೂಷಿಸುವ ವರ್ತಮಾನ ಭಾರತದ ಅನೇಕ ನಾಯಕರು ತಮ್ಮ ಒಡಲಕುಡಿಗಳನ್ನು, ಒಡಹುಟ್ಟಿದವರನ್ನು, ನಿಕಟಸಂಬಂಧಿಗಳನ್ನು ಅಧಿಕಾರ ರಾಜಕಾರಣದ ಉತ್ತರಾಧಿಕಾರಿಗಳಾಗಿ ಬಳಸುತ್ತಲೇ ಬಂದಿರುವುದು ದುರಂತ ಸತ್ಯ. ಮತ್ತೊಂದೆಡೆ ತುರ್ತುಪರಿಸ್ಥಿತಿಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಚುನಾವಣಾ ಆಯೋಗ, ಸಿಬಿಐ ಮೊದಲಾದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಾದ ಬಗ್ಗೆ ಮಾತನಾಡುವ ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ಈ ಎಲ್ಲ ಸಂಸ್ಥೆಗಳನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಲೇ ಆಳ್ವಿಕೆ ನಡೆಸಿದೆ. 1974-75ರಲ್ಲಿ ಕರಾಳ ಮೀಸಾ ಕಾಯ್ದೆಯ ವಿರುದ್ಧ (Maintainance of Internal Security Act) ಹೋರಾಡಿದ ಪಕ್ಷಗಳಾವುದೂ ಇಂದು ಅದಕ್ಕಿಂತಲೂ ಹೆಚ್ಚು ಕರಾಳ ಯುಎಪಿಎ ಕಾಯ್ದೆಯನ್ನು ವಿರೋಧಿಸುತ್ತಿಲ್ಲ.

 

ಇಂದಿರಾಗಾಂಧಿ ತಮ್ಮ ವಿರೋಧಿಗಳನ್ನು ಮಣಿಸಲು , ರಾಜಕೀಯ ಪ್ರತಿರೋಧವನ್ನು ಹತ್ತಿಕ್ಕಲು ಜನತೆಯ ವಾಕ್‌ ಸ್ವಾತಂತ್ರ್ಯ-ನಾಗರಿಕ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದ್ದು ಅಕ್ಷಮ್ಯ. ಇತಿಹಾಸ ಇದನ್ನು ಕ್ಷಮಿಸಿಲ್ಲ ಭಾರತದ ಜನತೆ ಅದಕ್ಕೆ ತಕ್ಕ ಉತ್ತರ ನೀಡಿದ್ದೂ ಆಗಿದೆ. ಆದರೆ ವರ್ತಮಾನ ಭಾರತದ ರಾಜಕಾರಣವನ್ನು ಗಮನಿಸಿದಾಗ ಏನಾದರೂ ವ್ಯತ್ಯಾಸ ಕಾಣಲು ಸಾಧ್ಯವೇ ? ಅಂದು ಜಾರಿಯಲ್ಲಿದ್ದ ಶಾಸನಗಳು ಇಂದಿಗೂ ಬೇರೆ ರೂಪದಲ್ಲಿ ಜಾರಿಯಲ್ಲಿವೆ. ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳು ಗ್ರಾಂಥಿಕವಾಗಿ ಸುಸ್ಥಿತಿಯಲ್ಲಿವೆ. ಆದರೂ ಮೂರು ದಶಕಗಳ ಹಿಂದಿನ ಅಪರಾಧಕ್ಕಾಗಿ ಒಬ್ಬ ನಿಷ್ಠಾವಂತ ಪೊಲೀಸ್‌ ಅಧಿಕಾರಿ ಸೆರೆವಾಸ ಅನುಭವಿಸುತ್ತಾರೆ. 14 ವರ್ಷಗಳ ಹಿಂದೆ ಮಾಡಿದ ಭಾಷಣಕ್ಕಾಗಿ ಅರುಂಧತಿ ರಾಯ್‌ ಅವರಂತಹ ಸಾಮಾಜಿಕ ಕಾರ್ಯಕರ್ತರು ಯುಎಪಿಎ ಕಾಯ್ದೆಯಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿರುವುದು ಅಧಿಕಾರ ರಾಜಕಾರಣದ ಈ hypocracy.

 

1975ರ ಮೆಲುಕು-ವರ್ತಮಾನದ ಸ್ಥಿತಿ

 

ನೂತನ ಸಂಸತ್ತಿನಲ್ಲಿ ಮೊದಲ ಹೆಜ್ಜೆಯಾಗಿ ತುರ್ತುಪರಿಸ್ಥಿತಿಯನ್ನು ಖಂಡಿಸುವ ನಿರ್ಣಯ ಮಂಡಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಕೇವಲ ಆರು ತಿಂಗಳ ಹಿಂದೆ ವಿರೋಧ ಪಕ್ಷಗಳ 141 ಸಂಸದರನ್ನು ಅಮಾನತುಗೊಳಿಸಿ, ಸರ್ಕಾರಕ್ಕೆ ಒಂದು ಮಸೂದೆಯನ್ನು ಜಾರಿಗೊಳಿಸಲು ಅನುಕೂಲ ಮಾಡಿಕೊಟ್ಟ ಪ್ರಸಂಗವನ್ನು ನೆನಪಿಸಿಕೊಳ್ಳಬೇಕಿತ್ತಲ್ಲವೇ ? ಅಥವಾ ಕೋವಿದ್‌ ಸಂದರ್ಭದಲ್ಲಿ ಇಡೀ ದೇಶವೇ ಕಂಗಾಲಾಗಿದ್ದಾಗ ದೇಶದ ರೈತರಿಗೆ ಮಾರಕವಾದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದ್ದನ್ನು ಸ್ಮರಿಸಬೇಕಿತ್ತಲ್ಲವೇ ? ಕಳೆದ ಹತ್ತು ವರ್ಷಗಳಲ್ಲಿ ಕಾರ್ಮಿಕ ಕಾನೂನುಗಳನ್ನೂ ಸೇರಿದಂತೆ, ದೇಶದ ಬಹುಸಂಖ್ಯೆಯ ಜನರನ್ನು ಬಾಧಿಸುವ ಪ್ರಮುಖ ಕಾಯ್ದೆಗಳನ್ನು ಜಾರಿಗೊಳಿಸುವಾಗ ಚರ್ಚೆಗಳಿಗೇ ಅವಕಾಶವನ್ನು ನೀಡದೆ ಇದ್ದುದನ್ನು ನೆನೆಯಬೇಕಿತ್ತಲ್ಲವೇ ?
 
ಹೌದು 50 ವರ್ಷಗಳ ನಂತರವೂ ತುರ್ತುಪರಿಸ್ಥಿತಿ ನಮ್ಮ ಪ್ರಜ್ಞೆಯನ್ನು ಕಾಡುತ್ತದೆ. ಏಕೆಂದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಭಾರತದ-ಭಾರತೀಯರ ಉಸಿರು. ಈ ಉಸಿರನ್ನು ನಿರ್ಬಂಧಿಸುವ ಯಾವುದೇ ಕ್ರಮಗಳನ್ನು ಜನತೆ ಒಪ್ಪುವುದಿಲ್ಲ. 2024ರ ಚುನಾವಣೆಗಳಲ್ಲೂ ಮತದಾರರು ಇದನ್ನೇ ಪುನರುಚ್ಛರಿಸಿದ್ದಾರೆ. ಭಾವಾತಿರೇಕದ ಧಾರ್ಮಿಕ ವಿಚಾರಗಳಾಗಲೀ, ಜನಾಂಗೀಯ ದೂಷಣೆಗಳಾಗಲೀ ಭಾರತದ ಪ್ರಜಾತಂತ್ರದ ಬೇರುಗಳನ್ನು ಅಲುಗಾಡಿಸಲಾಗುವುದಿಲ್ಲ ಎನ್ನುವುದನ್ನು ಅಯೋಧ್ಯೆಯ ಮತದಾರರು ನಿರೂಪಿಸಿದ್ದಾರೆ. ಹಾಗೆಯೇ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯ ಮುಖಾಂತರ ಭಾರತವನ್ನು ವಿರೋಧಪಕ್ಷ ಮುಕ್ತವಾಗಿಸುವ ರಾಜಕೀಯ ತಂತ್ರಗಾರಿಕೆಯನ್ನು 2024ರ ಮತದಾರರು ತಿರಸ್ಕರಿಸಿದ್ದಾರೆ. ತಳಮಟ್ಟದ ಸಮಾಜದವರೆಗೂ ಜನಸಾಮಾನ್ಯರಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವ ಅರಿವಾಗಿದೆ.
 
ಈ ಅರಿವು ಮೂಡಬೇಕಿರುವುದು ರಾಜಕೀಯ ಪಕ್ಷಗಳಲ್ಲಿ. ಇಂದು ಎಡಪಕ್ಷಗಳನ್ನು ಹೊರತುಪಡಿಸಿ ಯಾವುದೇ ಪಕ್ಷದ ನಾಯಕರೂ ಸಹ ವಂಶಾಡಳಿತದ ಬಗ್ಗೆ ಆಕ್ಷೇಪಿಸುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಕುಟುಂಬ ರಾಜಕಾರಣದ ವಿರುದ್ಧ ಅಭಿಯಾನ ನಡೆಸುವ ನಾಯಕರ  ಇಡೀ ಕುಟುಂಬಗಳೇ ಇಂದು ಅಧಿಕಾರ ರಾಜಕಾರಣದ ಅಂಗಳದಲ್ಲಿ ರಾರಾಜಿಸುತ್ತಿವೆ. ಅಂಬೇಡ್ಕರ್‌ ಅವರನ್ನು ಆರಾಧಿಸುವ, ಸಂವಿಧಾನವನ್ನು ಎದೆಗವುಚಿಕೊಂಡು ಪ್ರಮಾಣೀಕರಿಸುವ ನಾಯಕರೂ ಸಹ, ಅಂಬೇಡ್ಕರ್‌ ಬಲವಾಗಿ ವಿರೋಧಿಸಿದ್ದ ಕುಟುಂಬ ರಾಜಕಾರಣವನ್ನು ಪೋಷಿಸುತ್ತಾ ಬಂದಿದ್ದಾರೆ. ಇದು ಭಾರತದ ರಾಜಕೀಯ ವಲಯವನ್ನು ಆವರಿಸಿರುವ ನೈತಿಕ ಭ್ರಷ್ಟತೆ ಹಾಗೂ ಬೌದ್ಧಿಕ ಅಪ್ರಾಮಾಣಿಕತೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.
 

1975ರ ಸಂದರ್ಭದ ವಾಸ್ತವಗಳು

 

1975ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದಾಗ ಜನರ ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಆದರೆ ಮತ್ತೊಂದು ಬದಿಯಿಂದ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿದ್ದ ಜನಸಾಮಾನ್ಯರ ಬದುಕನ್ನು ಹಸನಾಗಿಸುವ ಅನೇಕ ಜನಪರ ಯೋಜನೆಗಳನ್ನೂ ಜಾರಿಗೊಳಿಸಲಾಗಿತ್ತು. ಹಾಗಾಗಿಯೇ ಇಂದಿಗೂ ಸಹ ಈ ಕರಾಳ ಅವಧಿ ದೇಶದ ಬಡಜನತೆಯ ದೃಷ್ಟಿಯಿಂದ ಆಶಾದಾಯಕವಾಗಿತ್ತು ಎಂಬ ವಾದ ಕೇಳಿಬರುತ್ತದೆ. ಒಂದು ನೆಲೆಯಲ್ಲಿ ಇದು ಸತ್ಯ ಎನಿಸಿದರೂ, ನಾಗರಿಕ ಸ್ವಾತಂತ್ರ್ಯ-ಮುಕ್ತ ವಾಕ್‌ ಸ್ವಾತಂತ್ರ್ಯವೂ ಇಲ್ಲದೆ ಬಡತನವನ್ನು ಹೋಗಲಾಡಿಸುವುದು ವರ್ತಮಾನವನ್ನು ಬದುಕಿಸಿ ಭವಿಷ್ಯದ ಕತ್ತುಹಿಸುಕುವ ಕ್ರಮ ಎನ್ನುವ ಪರಿವೆ ನಮ್ಮಲ್ಲಿರಬೇಕು. ಇಷ್ಟಕ್ಕೂ 1975ರ ತುರ್ತುಪರಿಸ್ಥಿತಿಗೆ ಕಾರಣವಾದ ಅಂಶಗಳಲ್ಲಿ ಇಂದಿರಾಗಾಂಧಿಯ ಸರ್ವಾಧಿಕಾರದ ಆಕಾಂಕ್ಷೆಯೂ ಒಂದಾಗಿತ್ತೇ ಹೊರತು ಅದೊಂದೇ ಕಾರಣವಾಗಿರಲಿಲ್ಲ. ಮೂಲತಃ 1975ರ ಪ್ರಯೋಗ ಪ್ರಭುತ್ವವನ್ನು ಬಿಗಿಪಡಿಸುವ ಹಾಗೂ ಜನಾಂದೋಲನಗಳನ್ನು ಹತ್ತಿಕ್ಕಲು ಸಾಂವಿಧಾನಿಕ ವಿಧಾನಗಳನ್ನು ಅಧಿಕೃತವಾಗಿ ಅಳವಡಿಸುವ ಒಂದು ಪ್ರಯತ್ನವಾಗಿತ್ತು.
 
1960ರ ದಶಕದ ಉತ್ತರಾರ್ಧದಲ್ಲಿ ದೇಶಾದ್ಯಂತ ತಲೆದೋರಿದ ಆಹಾರದ ಕೊರತೆ, ಬೆಲೆ ಏರಿಕೆ, ಹಸಿವು, ಬಡತನ, ನಿರುದ್ಯೋಗ ಹಾಗೂ ತಳಸಮುದಾಯಗಳ ನಿತ್ಯ ಬದುಕಿನ ಸಂಕಷ್ಟಗಳು ದೇಶದ ವಿವಿಧೆಡೆಗಳಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿದ್ದವು. ಎರಡು ದಶಕಗಳ ಪ್ರಜಾಪ್ರಭುತ್ವೀಯ ಆಳ್ವಿಕೆಯು ತಳಮಟ್ಟದ ಸಮಾಜವನ್ನು ತಲುಪಿಲ್ಲ ಎನ್ನುವ ವಾಸ್ತವ ಸಾಮಾನ್ಯ ಜನತೆಗೆ ಅರಿವಾಗತೊಡಗಿತ್ತು. ಸ್ವಾತಂತ್ರ್ಯಾನಂತರ ದಲಿತ ಮತ್ತಿತರ ತಳಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ದೊರೆತ ಶಿಕ್ಷಣ ಅವರಲ್ಲಿ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಅರಿವನ್ನು ಮೂಡಿಸಿತ್ತು. ಗಾಂಧಿ, ಅಂಬೇಡ್ಕರ್‌, ಲೋಹಿಯಾ, ಮಾರ್ಕ್ಸ್‌ ಮುಂತಾದ ದಾರ್ಶನಿಕರ ಚಿಂತನಾವಾಹಿನಿಗಳು ತಳಮಟ್ಟದವರೆಗೂ ಪ್ರವಹಿಸಲಾರಂಭಿಸಿತ್ತು. ಸಂವಿಧಾನದ ಮೂಲ ಆಶಯಗಳೇನು ಎನ್ನುವುದನ್ನು ನಿರಕ್ಷರಿಗಳಿಗೂ ಅರ್ಥಮಾಡಿಸುವಂತಹ ಸಂಘಟನೆಗಳು ಎಲ್ಲೆಡೆ ಹುಟ್ಟಿಕೊಂಡವು.
 
ತತ್ಪರಿಣಾಮವಾಗಿ ಗ್ರಾಮೀಣ ಬದುಕಿನಲ್ಲಿ ಭೂ ಸಂಬಂಧಗಳು, ನಗರಗಳಲ್ಲಿ ಉದ್ಯೋಗಾವಕಾಶಗಳು, ಮಹಿಳೆಯರ ಹಾಗೂ ಅವಕಾಶವಂಚಿತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳು ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕ ರೂಪಗಳಲ್ಲಿ ಪ್ರತಿಧ್ವನಿಸತೊಡಗಿದವು. ಸಾಕ್ಷರತೆ ಹೆಚ್ಚಾಗುತ್ತಿರುವಂತೆಯೇ ಜನಸಾಮಾನ್ಯರಲ್ಲಿ ಸಾರ್ವಜನಿಕ ಪ್ರಜ್ಞೆಯೂ ಬಲವಾಗತೊಡಗಿತ್ತು. ಭಾರತದ ಹಳ್ಳಿಗಾಡುಗಳಲ್ಲಿ ಜೀವಂತವಾಗಿದ್ದ ಊಳಿಗಮಾನ್ಯ ವ್ಯವಸ್ಥೆಯ ಪರಿಣಾಮ ಭೂಮಾಲೀಕರಿಂದ ಹಕ್ಕು ವಂಚಿತರಾಗಿದ್ದ ಸಾಮಾನ್ಯ ಜನತೆ ಭೂಮಿಗಾಗಿ ಹೋರಾಡತೊಡಗಿದ್ದರು. ಇದರ ಒಂದು ಆಯಾಮವನ್ನು 1967ರ ನಕ್ಸಲ್‌ಬಾರಿಯಲ್ಲಿ ಗುರುತಿಸಬಹುದು. ಭಾರತದಂತಹ ಕೃಷಿ ಆಧಾರಿತ ದೇಶದಲ್ಲಿ ಭೂಮಿಯೇ ಕಟ್ಟಕಡೆಯ ವ್ಯಕ್ತಿಯ ಜೀವನ ಮತ್ತು ಜೀವನೋಪಾಯದ ಸುಭದ್ರ ನೆಲೆ ಎಂಬ ಅಂಬೇಡ್ಕರ್‌ ಅವರ ಆಶಯವೂ ಮುನ್ನೆಲೆಗೆ ಬಂದಿದ್ದು ಈ ಅವಧಿಯಲ್ಲೇ. ಹಾಗಾಗಿಯೇ 1970ರ ಆಸುಪಾಸಿನ ವರ್ಷಗಳಲ್ಲಿ ಭೂಹೋರಾಟಗಳು ತೀವ್ರವಾದವು.
 

ಆರ್ಥಿಕತೆ ಮತ್ತು ಸಾಮಾಜಿಕ ಕ್ಷೋಭೆ

 

ಮತ್ತೊಂದು ನೆಲೆಯಲ್ಲಿ ಭಾರತವನ್ನು ಆಧುನಿಕ ಕೈಗಾರಿಕಾ ರಾಷ್ಟ್ರವನ್ನಾಗಿ ಮಾಡುವ ಸರ್ಕಾರಗಳ ಆರ್ಥಿಕ ನೀತಿಗಳ ಪರಿಣಾಮ ನಗರೀಕರಣ ಪ್ರಕ್ರಿಯೆಯೂ ತೀವ್ರವಾಗತೊಡಗಿತ್ತು. ಸಹಜವಾಗಿಯೇ ನಗರಕೇಂದ್ರಿತ ಕೈಗಾರಿಕೋದ್ಯಮ-ವಾಣಿಜ್ಯೋದ್ಯಮಗಳಿಗೆ ಶ್ರಮಿಕರನ್ನು ಪೂರೈಸಿದ್ದು ಅದೇ ಗ್ರಾಮೀಣ ಸಮಾಜವೇ ಆಗಿತ್ತು. ನಗರೀಕರಣಕ್ಕೊಳಗಾದ ಜನತೆಗೆ ಸೂಕ್ತ ವಸತಿ, ಉದ್ಯೋಗ, ಮೂಲ ಸೌಕರ್ಯಗಳು ಹಾಗೂ ಉತ್ತಮ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರಗಳ ಮೇಲಿತ್ತು. ಕೃಷಿಯನ್ನು ತೊರೆದು ನಗರಕ್ಕೆ ವಲಸೆ ಬಂದ ಅಗಾಧ ಜನಸಮೂಹ ಉದ್ಯೋಗಾವಕಾಶಗಳಿಲ್ಲದೆ ಪರದಾಡುವಂತಾದಾಗ ಉದ್ಯೋಗಕ್ಕಾಗಿ ಕೂಗು ಬಲವಾಗುತ್ತಾ ಹೋಗಿತ್ತು. 1970ರ ದಶಕದ ಆರಂಭದಲ್ಲಿ ಈಗಾಗಲೇ ಸ್ಥಾಪನೆಯಾಗಿದ್ದ ಆಧುನಿಕ ಭಾರತದ ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರು ಉತ್ತಮ ವೇತನ ಮತ್ತು ಸೌಲಭ್ಯಗಳಿಗಾಗಿ ಹೋರಾಟಗಳನ್ನು ಆರಂಭಿಸಿದ್ದರು. ಒಂದೆಡೆ ಉದ್ಯೋಗಕ್ಕಾಗಿ ಹೋರಾಟಗಳು ನಡೆಯುತ್ತಿದ್ದಂತೆಯೇ ಮತ್ತೊಂದು ಬದಿಯಲ್ಲಿ ಸುಭದ್ರ ನೌಕರಿಗಾಗಿಯೂ ಹೋರಾಟಗಳು ಆರಂಭವಾದವು. ಇದೇ ಸಮಯದಲ್ಲಿ ಸಾರ್ವತ್ರಿಕ ಶಿಕ್ಷಣದ ಫಲಾನುಭವಿ ಮಹಿಳಾ ಸಮುದಾಯ, ದಲಿತ ಸಮುದಾಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಲಾರಂಭಿಸಿದ್ದವು.

 

70ರ ದಶಕದಲ್ಲಿ ಉಗಮಿಸಿದ ಈ ಹೋರಾಟಗಳೇ ಇಂದಿಗೂ ಜೀವಂತವಾಗಿರುವ ದಲಿತ-ಮಹಿಳಾ-ಅಲ್ಪಸಂಖ್ಯಾತ-ಕೃಷಿ ಕಾರ್ಮಿಕ-ರೈತ-ಕೈಗಾರಿಕಾ ಕಾರ್ಮಿಕ ಹೋರಾಟಗಳಿಗೆ ಅಡಿಪಾಯವಾಗಿರುವುದು ಚಾರಿತ್ರಿಕ ಸತ್ಯ. ಈ ಹೋರಾಟಗಳು ತೀವ್ರತೆ ಪಡೆದುಕೊಂಡಿದ್ದರಿಂದಲೇ, ಭೂಹೋರಾಟಗಳನ್ನು ನಿಯಂತ್ರಿಸುವ ಒಂದು ಮಾರ್ಗವಾಗಿ, ಜನಸಾಮಾನ್ಯರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ಹಸಿರು ಕ್ರಾಂತಿ ಮುಂತಾದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಯಿತು. ಬ್ಯಾಂಕ್‌ ರಾಷ್ಟ್ರೀಕರಣ, 20 ಅಂಶದ ಕಾರ್ಯಕ್ರಮಗಳು, ಗರೀಬಿ ಹಟಾವೋ, ಶಿಕ್ಷಣದ ಸಾರ್ವತ್ರೀಕರಣ, ಹಣಕಾಸು ವಲಯದ ರಾಷ್ಟ್ರೀಕರಣ ಮೊದಲಾದ ಕ್ರಾಂತಿಕಾರಕ ಎನ್ನಬಹುದಾದ ಆಡಳಿತ ಕ್ರಮಗಳನ್ನು ಇಂದಿರಾಗಾಂಧಿಯ ಆಳ್ವಿಕೆಯಲ್ಲಿ ಜಾರಿಗೊಳಿಸಲಾಯಿತು. ಆದರೆ ಈ ಕ್ರಮಗಳು ಸಮಾಜದ ಕೆಳವರ್ಗಗಳನ್ನು ತಲುಪಲಿಲ್ಲ ಎನ್ನುವುದೂ ಚಾರಿತ್ರಿಕ ಸತ್ಯ.

 

ಈ ಚಾರಿತ್ರಿಕ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ ಜನಾಂದೋಲನಗಳು, ದಲಿತರ ಹಕ್ಕೊತ್ತಾಯಗಳ ಹೋರಾಟಗಳು, ಕಾರ್ಮಿಕ ಮುಷ್ಕರಗಳು, ಮಹಿಳಾ ಹೋರಾಟಗಳು ಸರ್ಕಾರದ ಪಾಲಿಗೆ ಪ್ರಧಾನ ಸವಾಲಾಗಿ ಪರಿಣಮಿಸಿತ್ತು. ದಲಿತರ ಮತ್ತು ಮಹಿಳೆಯರ ಸ್ವಾಭಿಮಾನದ ಹೋರಾಟಗಳು ಹಾಗೂ ಅದಕ್ಕೆ ಪೂರಕವಾದ ಸಾಹಿತ್ಯ ತಳಮಟ್ಟದ ಸಮಾಜದಲ್ಲೂ ಸಾಮಾಜಿಕ ಜಾಗೃತಿಯನ್ನುಂಟುಮಾಡಿತ್ತು. ಈ ಸನ್ನಿವೇಶವು ಸ್ವತಂತ್ರ ಭಾರತದ ಇತಿಹಾಸದಲ್ಲಿ ನಿರ್ಲಕ್ಷಿತ ಸಮಾಜವೊಂದು ಆಳುವ ವರ್ಗಗಳ ವಿರುದ್ಧ ಪ್ರಬಲವಾಗಿ ದನಿ ಎತ್ತಿದ ಒಂದು ಅವಧಿಯಾಗಿತ್ತು. ಈ ಹೋರಾಟಗಳನ್ನು ನಿಭಾಯಿಸಲು ಇಂದಿರಾಗಾಂಧಿ ಸರ್ಕಾರ ಅನುಸರಿಸಿದ ಜನೋಪಯೋಗಿ-ಜನಕಲ್ಯಾಣ ನೀತಿಗಳು ಕೆಳವರ್ಗಗಳಿಗೆ ಸಾಂತ್ವನ ನೀಡಿದ್ದವೇ ಹೊರತು, ಬಹುಸಂಖ್ಯಾತ ಜನತೆಯ ಜೀವನೋಪಾಯವನ್ನು ಸುಸ್ಥಿರಗೊಳಿಸುವ ಭರವಸೆಯನ್ನು ನೀಡಿರಲಿಲ್ಲ.  ಈ ಜನಕಲ್ಯಾಣ ನೀತಿಗಳನ್ನೇ ಸಮಾಜವಾದ ಎಂದು ಬಿಂಬಿಸುವ ಅಂದಿನ ಪ್ರಯತ್ನಗಳು ಇಂದಿಗೂ ಅದೇ ಧ್ವನಿಯಲ್ಲಿ ಕೇಳಿಬರುತ್ತಿವೆ. ಆದರೆ ಅದು ಬಂಡವಾಳಶಾಹಿ ಆರ್ಥಿಕತೆಯನ್ನು ರಕ್ಷಿಸಲು ಅನುಸರಿಸಿದ ಶಮನಕಾರಕ ಜನಕಲ್ಯಾಣ ಯೋಜನೆಗಳೇ ಹೊರತು ಸಮಾಜವಾದ ಅಲ್ಲ ಎನ್ನುವುದು ವಾಸ್ತವ.

 

ಇಂತಹ ಸನ್ನಿವೇಶದಲ್ಲಿ ಇಂದಿರಾಗಾಂಧಿಗೆ ಎದುರಾಗಿದ್ದು ಆಂತರಿಕವಾಗಿ ತಮ್ಮ ಸರ್ಕಾರವನ್ನು ಪಲ್ಲಟಗೊಳಿಸಬಹುದಾದ ರಾಜಕೀಯ ಬೆಳವಣಿಗೆಗಳು ಹಾಗೂ ಬಾಹ್ಯ ಸಮಾಜದಲ್ಲಿ ಪ್ರಭುತ್ವವನ್ನು ಪ್ರಶ್ನಿಸುವಂತಹ ಜನಾಂದೋಲನಗಳು. 1970ರ ದಶಕದಲ್ಲಿ ಉಗಮಿಸಿದ ಯಾವುದೇ ಜನಾಂದೋಲನ-ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಣುವ ಒಂದು ಸಮಾನ ಎಳೆ ಎಂದರೆ ಪ್ರಜಾಪ್ರಭುತ್ವದ ಆಶಯ-ಸಾಂವಿಧಾನಿಕ ಹಕ್ಕುಗಳ ಹಕ್ಕೊತ್ತಾಯ-ತಳಮಟ್ಟದವರೆಗೂ ವಿಸ್ತರಿಸಿದ್ದ ಸಾಮಾಜಿಕ-ರಾಜಕೀಯ ಅರಿವು ಹಾಗೂ ಇವೆಲ್ಲವನ್ನೂ ಜಾಗೃತಾವಸ್ಥೆಯಲ್ಲಿರಿಸುವ ಸಾಹಿತ್ಯ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳು. ಈ ಚಟುವಟಿಕೆಗಳನ್ನು ಹತ್ತಿಕ್ಕುವುದು ಸುಲಭವಾಗಿರಲಿಲ್ಲ. ಏಕೆಂದರೆ ರಾಜಕೀಯ ವಲಯದಲ್ಲೂ ಈ ಜನತೆಯೊಡನೆ ನಿಲ್ಲುವ ಶಕ್ತಿಗಳು ಉದಯಿಸಿದ್ದವು. ಭಾರತದ ಸಂವಿಧಾನ ಅಪೇಕ್ಷಿಸುವ ಸಮ ಸಮಾಜದ ನಿರ್ಮಾಣಕ್ಕೆ ಹೆಗಲು ಕೊಟ್ಟು ನಿಲ್ಲುವ ರಾಜಕೀಯ ಪ್ರಜ್ಞೆ ಸಾಂಸ್ಕೃತಿಕವಾಗಿಯೂ ನೆಲೆ ಕಂಡುಕೊಂಡಿತ್ತು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದ್ದರು. ಪ್ರಭುತ್ವದ ಬಲವನ್ನು ಸಾಂವಿಧಾನಿಕ ಮಾರ್ಗದಲ್ಲೇ ಹೆಚ್ಚಿಸುವ ಸಾಧ್ಯತೆಗಳನ್ನು ಮನಗಾಣದೆ ಅಂದಿನ ಕಾಂಗ್ರೆಸ್‌ ಸರ್ಕಾರ ಅಸಾಂವಿಧಾನಿಕ ʼತುರ್ತುಪರಿಸ್ಥಿತಿʼಯ ಮಾರ್ಗವನ್ನು ಅನುಸರಿಸಿತ್ತು. 1977ರಲ್ಲಿ ಭಾರತ ಮತ್ತೊಮ್ಮೆ ಪ್ರಜಾತಂತ್ರದ ಹಾದಿಗೆ ಮರಳಿದರೂ, 21 ತಿಂಗಳ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಆಡಳಿತ ವ್ಯವಸ್ಥೆಯು, ಆಳ್ವಿಕೆಯ ಕೇಂದ್ರಗಳು ಕಂಡುಕೊಂಡ ದಮನಕಾರಿ ಮಾರ್ಗಗಳು ಇಂದಿಗೂ ಜೀವಂತವಾಗಿರುವುದು ಇತಿಹಾಸದ ವಿಡಂಬನೆ ಎಂದೇ ಹೇಳಬಹುದು. 1980ರ ಆನಂತರ ಭಾರತದಲ್ಲಿ ಯಾವುದೇ ಜನಾಂದೋಲನಗಳೂ 1970 ದಶಕದ ಹೋರಾಟಗಳಂತೆ ಯಶಸ್ಸು ಸಾಧಿಸದಿರುವುದು ಈ ಬದಲಾದ ಭಾರತದ ಸೂಚನೆಯಾಗಿದೆ. ಈ ಕಾಲಘಟ್ಟದಲ್ಲಿ ಉಂಟಾದ ಮಂಡಲ್‌—ಮಂದಿರ ಬೆಳವಣಿಗೆಗಳು ಹಾಗೂ ಬಲಗೊಂಡ ಪ್ರಾದೇಶಿಕ ಅಸ್ಮಿತೆಯ ರಾಜಕಾರಣ ಭಾರತದ ಜನಾಂದೋಲನಗಳ ಪರಂಪರೆಯ ದಿಕ್ಕನ್ನೇ ಬದಲಿಸಿರುವುದು ವಾಸ್ತವ.

 

ವರ್ತಮಾನದ ಸುಡುವಾಸ್ತವಗಳು

 

CREATOR: gd-jpeg v1.0 (using IJG JPEG v62), quality = 75
ವರ್ತಮಾನದ ಸಂದರ್ಭದಲ್ಲಿ ನಿಂತು ತುರ್ತುಪರಿಸ್ಥಿತಿಯತ್ತ ನೋಡುವುದೇ ಆದರೆ ಈ ದೃಷ್ಟಿಯಿಂದ ನೋಡಬೇಕಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕುವ, ವಿರೋಧಿ ನಾಯಕರನ್ನು ಮಣಿಸುವ, ಜನಾಂದೋಲನಗಳನ್ನು ದಮನಿಸುವ ಮಾರ್ಗ ಬದಲಾಗಿದ್ದರೂ ಫಲಿತಾಂಶವೇನೂ ಬದಲಾಗಿಲ್ಲ. 1975ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ದನಿಎತ್ತಿದ್ದ ರಾಜಕೀಯ ಪಕ್ಷಗಳು, ನಾಯಕರೇ ಇಂದು ಜನರ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ, ಹತ್ತಿಕ್ಕುವ ಕರಾಳ ಕಾಯ್ದೆಗಳನ್ನು ಅನುಮೋದಿಸಿ ಅನುಸರಿಸುತ್ತಿರುವುನ್ನು ಗಮನಿಸಬಹುದು. ರೈತ ಮುಷ್ಕರ ಈ ನಿಟ್ಟಿನಲ್ಲಿ ಒಂದು ಜ್ವಲಂತ ನಿದರ್ಶನ. 1977ರಲ್ಲಾದಂತೆಯೇ  2024ರಲ್ಲೂ ದೇಶದ  ಮತದಾರರು, ಸಾಮಾನ್ಯ ಜನತೆ ತಮ್ಮ ಸಾಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವ ದೃಢ ನಿಶ್ಚಯವನ್ನು ಚುನಾವಣೆಗಳ ಮೂಲಕ ವ್ಯಕ್ತಪಡಿಸಿದ್ದಾರೆ.

 

ಇದರಿಂದ ಪಾಠ ಕಲಿಯಬೇಕಿರುವುದು ನಮ್ಮ ಸರ್ಕಾರಗಳು, ರಾಜಕೀಯ ಪಕ್ಷಗಳು ಹಾಗೂ ನೇತಾರರು. ತುರ್ತುಪರಿಸ್ಥಿತಿಯಿಂದ ತಾವು ಕಲಿತಿರುವ ಪಾಠವನ್ನು ಭಾರತದ ಸಾಮಾನ್ಯ ಜನತೆ ಇಂದಿಗೂ ಚುನಾವಣೆಗಳ ಮೂಲಕ, ಹೋರಾಟಗಳ ಮೂಲಕ ಆಳುವ ವರ್ಗಗಳ ಮುಂದೆ ಒಪ್ಪಿಸುತ್ತಲೇ ಇದ್ದಾರೆ. ಆದರೆ ರಾಜಕೀಯ ಪಕ್ಷಗಳು ಆ ಕರಾಳ ದಿನಗಳನ್ನು ತಪ್ಪು-ಸರಿಗಳ ನೆಲೆಯಲ್ಲೇ ನಿಷ್ಕರ್ಷೆ ಮಾಡುತ್ತಾ ಕಾಲ ಹರಣ ಮಾಡುತ್ತಿವೆ. 1975ರ ಕರಾಳ ದಿನಗಳನ್ನು ಖಂಡಿಸುವ, ಆ ಹೋರಾಟದ ಕ್ಷಣಗಳನ್ನು ಹೆಮ್ಮೆಯಿಂದ ನೆನೆಯುವ ಪ್ರತಿ ವ್ಯಕ್ತಿಯೂ ಭಾರತದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ, ಭಾರತೀಯ ಸಂವಿಧಾನವನ್ನು ಪ್ರಾಮಾಣಿಕವಾಗಿ ಅನುಸರಿಸುವ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಆಡಳಿತ ನಡೆಸುವ, ಉತ್ತರದಾಯಿತ್ವದೊಂದಿಗೆ ಜನಸೇವೆ ಮಾಡುವ ಹಾಗೂ ಭಾರತದ ಸಂವಿಧಾನದ ಮೂಲ ಆಶಯಗಳನ್ನು ಸಾಕಾರಗೊಳಿಸುವ  ಪ್ರಮಾಣ ಸ್ವೀಕರಿಸಬೇಕಿದೆ. ಆದರೆ ನಮ್ಮ ರಾಜಕೀಯ ವ್ಯವಸ್ಥೆ, ಸಾಂಸ್ಕೃತಿಕ ಜಗತ್ತು, ಹಿತವಲಯದ ಫಲಾನುಭವಿ ಸಮಾಜ ಈ ನೈತಿಕತೆಯನ್ನು ಉಳಿಸಿಕೊಂಡಿದೆಯೇ ? ನಮಗೆ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ ಇದು !!
-೦-೦-೦-೦-

ADVERTISEMENT
Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮುಖ್ಯ ಮಂತ್ರಿಗಳ ದೆಹಲಿ ಪ್ರವಾಸ ಜೂ.29 ಕ್ಕೆ ಪ್ರಧಾನಿಗಳೊಂದಿಗೆ ಸಿಎಂ ಭೇಟಿ…

Next Post

ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಶುಕ್ರವಾರ ಕಾಶ್ಮೀರಕ್ಕೆ

Related Posts

ಷೇರು ಮಾರುಕಟ್ಟೆ ಹೂಡಿಕೆ  ಲಾಭದ ಆಸೆ ತೋರಿಸಿ  5 ತಿಂಗಳಿನಲ್ಲಿ  ಒಟ್ಟು 1420 ಕೋಟಿ ರೂ ವಂಚನೆ
Uncategorized

ಯುದ್ಧ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ; ಇಂದು ಇಷ್ಟು ಲಕ್ಷ ಕೋಟಿ ನಷ್ಟ!

by ಪ್ರತಿಧ್ವನಿ
March 4, 2026
0

ಆರಂಭವಾದ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ, ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಿದೆ.ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಿಂದ ಕುಸಿತದಲ್ಲೇ ಇದೆ. https://youtu.be/T_9ShsZfbLQ?si=U5AQgH1ySRkDVowt ಯುಎಸ್-ಇರಾನ್...

Read moreDetails
“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

March 4, 2026
ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

March 3, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Breaking: ಇರಾನ್ ನಾಯಕ ಅಲಿ ಖಮೇನಿ ಸಾವನ್ನು ದೃಢಪಡಿಸಿದ ಡೊನಾಲ್ಡ್ ಟ್ರಂಪ್! 

Breaking: ಇರಾನ್ ನಾಯಕ ಅಲಿ ಖಮೇನಿ ಸಾವನ್ನು ದೃಢಪಡಿಸಿದ ಡೊನಾಲ್ಡ್ ಟ್ರಂಪ್! 

March 1, 2026
Next Post
ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಶುಕ್ರವಾರ ಕಾಶ್ಮೀರಕ್ಕೆ

ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಶುಕ್ರವಾರ ಕಾಶ್ಮೀರಕ್ಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada