ಜುಲೈ 30, 2000ರಂದು ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ದೊಡ್ಡಗಾಜನೂರಿನ ಫಾರ್ಮ್‌ಹೌಸ್‌ನಲ್ಲಿದ್ದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ತಂಡ ಅಪಹರಿಸಿತ್ತು. ಸತತ 108 ದಿನಗಳ ಕಾಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿದ್ದ ಈ ಘಟನೆ ಅಂದು ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಈ ಪ್ರಕರಣದಲ್ಲಿ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. 2004ರಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್ ಸೇರಿದಂತೆ ನಾಲ್ವರು ಪೊಲೀಸ್ ಕಾರ್ಯಾಚರಣೆಯಲ್ಲಿ ಹತರಾಗಿದ್ದರು.ಉಳಿದ 9 ಮಂದಿ ಆರೋಪಿಗಳ ವಿರುದ್ಧ 18 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿತ್ತು. 2018ರಲ್ಲಿ ಗೋಪಿಶೆಟ್ಟಿಪಾಳ್ಯದ ಸೆಷನ್ಸ್ ನ್ಯಾಯಾಲಯವು ‘ಸಾಕ್ಷ್ಯಾಧಾರಗಳ ಕೊರತೆ’ಯಿಂದಾಗಿ ಎಲ್ಲರನ್ನೂ ಖುಲಾಸೆಗೊಳಿಸಿ ತೀರ್ಪು ನೀಡಿತ್ತು.

ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಕಾಡುಗಳ್ಳ ವೀರಪ್ಪನ್‌ನ ಒಂಬತ್ತು ಮಂದಿ ಸಹಚರರನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

ಕೆಳ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ 2019ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸುಮಾರು ಐದು ವರ್ಷಗಳ ಕಾಲ ನಡೆದ ಈ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಆಲಿಸಿತು. ಅಂತಿಮವಾಗಿ, ಸರ್ಕಾರದ ಅರ್ಜಿಯಲ್ಲಿ ಯಾವುದೇ ಬಲವಾದ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟ ಪೀಠವು, ಮೇಲ್ಮನವಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.ಇದರೊಂದಿಗೆ, ದಶಕಗಳ ಕಾಲ ನಡೆದ ಡಾ. ರಾಜ್ ಅಪಹರಣ ಪ್ರಕರಣದ ಕಾನೂನು ಪ್ರಕ್ರಿಯೆಗಳಿಗೆ ಬಹುತೇಕ ಅಂತಿಮ ತೆರೆ ಬಿದ್ದಂತಾಗಿದೆ.






