ಬೆಂಗಳೂರು: ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DCM DK Shivakumar )ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ ಎಂದರು.

ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ ತೆರಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ. ಸಿಎಂಗೆ ಆಹ್ವಾನ ನೀಡಿದ್ದಾರೆ ಎಂದು ನನಗೂ ಗೊತ್ತಿದೆ. ಡೆಪ್ಯುಟಿ ಸಿಎಂಗೆ ಕರೆದಿಲ್ಲ. ಸಮಿತಿಯ ವಿಸ್ತರಿತ ಸಭೆಗೆ ಕರೆಯುತ್ತಾರೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಭೇಟಿ ವೇಳೆ ನಾಯಕತ್ವ ಬದಲಾವಣೆ ಚರ್ಚೆ ನಡೆದಿದೆಯೇ ಎನ್ನುವುದರ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಅವರೊಂದಿಗೆ ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ ಎಂದರು.

ಶುಕ್ರವಾರದಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಿದೆ. ಈ ಸಭೆಯಲ್ಲಿ ಮನರೇಗಾ ಯೋಜನೆಯ ಹೆಸರು ಬದಲಾವಣೆ, ಅನುದಾನದಲ್ಲಿ ರಾಜ್ಯದ ಪಾಲನ್ನು ಶೇ.40ಕ್ಕೆ ಹೆಚ್ಚಿಸಿರುವುದು ಸೇರಿದಂತೆ ರೈತರಿಗೆ ಮಾರಕವಾದಂತಹ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವಾಗಿ ಒಂದು ರಾಜ್ಯದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಅವರ ಜೊತೆ ಯಾವ ರಾಜಕೀಯ ಮಾತುಕತೆಯೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.











