ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಸೋಲನ್ನಪ್ಪಿದ್ದಾರೆ. ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯ ಡಾ ಮಂಜುನಾಥ್ ಎರಡೂವರೆ ಲಕ್ಷ ಮತಗಳಿಂದ ಗೆದ್ದು ಬೀಗಿದ್ದಾರೆ. ಈ ನಡುವೆ ಭಾನುವಾರ ಡಿ.ಕೆ ಶಿವಕುಮಾರ್ ಸೋಲಿನ ಆತ್ಮಾವಲೋಕನ ಸಭೆ ನಡೆಸಲು ಮುಂದಾಗಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವುದು ಬಿಟ್ಟರೆ, ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಡಾ ಮಂಜುನಾಥ್ಗೆ ಲೀಡ್ ಸಿಕ್ಕಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಈ ನಡುವೆ ಡಿ.ಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ ಎನ್ನುವ ಆರೋಪ ಬಿಜೆಪಿ ಪಾಳಯದಿಂದ ಹೊರ ಬಿದ್ದಿದೆ. ತುಮಕೂರಿನಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದು, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಕಂಟಿನ್ಯೂ ಆಗಬೇಕು ಅಂತಾ ಒಂದು ಅಹಿಂದ ಟೀಮ್ ಯಾವಾಗಲೂ ಕೆಲಸ ಮಾಡುತ್ತದೆ. ಆ ಅಹಿಂದ ಟೀಮ್ ಮತ್ತು ಸಿದ್ದರಾಮಯ್ಯ ಸೇರಿ ಡಿ.ಕೆ ಸುರೇಶ್ ಅವರನ್ನ ಸೋಲಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಈ ಹಿಂದೆಯೇ ಹೇಳಿದ್ದೆ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಸಿದ್ದರಾಮಯ್ಯ ಇಷ್ಟೂ ಜನರು ಸೇರಿ ಡಿ.ಕೆ ಸುರೇಶ್ ಅವರನ್ನ ಸೋಲಿಸ್ತಾರೆ ಎಂದು. ಲೋಕಸಭಾ ಚುನಾವಣೆಗೂ ಮೊದಲೇ ಹೇಳಿದೆ. ಒಂದು ತಿಂಗಳ ಹಿಂದೆಯೇ ಹೇಳಿದ್ದ ಮಾತು ಈಗ ಸತ್ಯವಾಗಿದೆ. ನಾನು ಹೇಳಿದ್ದೆ ಮಾತು ರಿಪೀಟ್ ಆಗಿದೆ. ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಅಂತಾ ಹೇಳಿದ್ದೆ. ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದು ರಾಜಕೀಯ ಸಂಚಿನ ಒಂದು ಭಾಗ ಅಷ್ಟೆ. ಡಿ.ಕೆ ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಆಗಬಾರದು. ಅವರ ನೈತಿಕತೆ ಕುಸಿಯಬೇಕು ಅಂತಾ ಈಗ ಮಾಡಿದ್ದಾರೆ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಉಳಿಯಲ್ಲ ಎಂದು ಹೊಸ ಭವಿಷ್ಯವನ್ನೂ ನುಡಿದಿದ್ದಾರೆ. ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭ ಆಗುತ್ತದೆ. ಕಾಂಗ್ರೆಸ್ನಲ್ಲಿ ಒಳಜಗಳ ಶುರುವಾಗುತ್ತದೆ. ಈಗಾಗಲೇ ಬೆಳಗಾವಿಯಲ್ಲಿ ಕಿತ್ತಾಟ ಶುರುವಾಗಿದೆ. ಇಲ್ಲಿ ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಇಲ್ಲಿಯೂ ಕೂಡ ಜಗಳ ಶುರುವಾಗಿದೆ. ಸರ್ಕಾರ ಪತನವಾಗುತ್ತದೆ ಅಂತಾನು ತಿಳಿಸಿದ್ದಾರೆ. ಆದರೆ ಇದು ರಾಜಕೀಯ ಕಾರಣಕ್ಕೂ ಈ ರೀತಿಯ ಸುದ್ದಿಯನ್ನು ಹಬ್ಬಿಸುತ್ತಿರಬಹುದು. ಅಥವಾ ಇದು ರಾಜಕೀಯ ಆಗಿರುವ ಕಾರಣಕ್ಕೆ ಎದುರಾಳಿ ತಂಡ ಕುತಂತ್ರ ರಾಜಕಾರಣ ಮಾಡಿದ್ದರೂ ಮಾಡಿರಬಹುದು. ಇದು ಸತ್ಯವೇ ಆಗಿದ್ದರೆ ಕಾಂಗ್ರೆಸ್ ಸರ್ಕಾರ ಪತನದ ದಿನಗಳು ಆರಂಭ ಅಂದರೆ ಸುಳ್ಳಲ್ಲ.
ಕೃಷ್ಣಮಣಿ