ಶಿವಮೊಗ್ಗ: ಕೇಂದ್ರ ಸರ್ಕಾರ ಅಡಿಗೆ ಅನಿಲ, ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಶಿವಮೊಗ್ಗ ಮಹಾನಗರ ಜಾತ್ಯತೀತ ಜನತಾದಳ ವತಿಯಿಂದ ಇಂದು ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಂಭಾಗ ರಸ್ತೆಯಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು.
ಪದೇಪದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಬಡವರು, ಕೂಲಿ ಕಾರ್ಮಿಕರು ಮತ್ತು ಅಸಹಾಯಕ ಜನರ ಗೋಳು ನಿತ್ಯವೂ ಹೇಳತೀರದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಆಡಳಿತ ಹದಗೆಟ್ಟಿದ್ದು ಶ್ರೀಸಾಮಾನ್ಯನ ಬದುಕಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಂದ ಶೇ.೪೦ರಷ್ಟು ಕಮಿಷನ್ನಿನ ಅವಾಂತರದಿಂದಾಗಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈಗಾಗಲೇ ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇತ್ತೀಚೆಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಪುತ್ತ ಕಮಿಷನ್ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆದು ಕೋಟಿ ಕೋಟಿ ಹಣ ಸಿಕ್ಕಿದ್ದು, ಪ್ರಕರಣದ ಎ-೧ಆರೋಪಿಯಾದ ಶಾಸಕರನ್ನು ಈವರೆಗೂ ಬಂಧಿಸಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿಯಿಂದಾಗಿ ಯಾವ ಕೆಲಸವೂ ಆಗುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ ಎಂದು ಆರೋಪಿಸಿದರು.
ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಭ್ರಷ್ಟಾಚಾರದ ನಿಯಂತ್ರಣದ ಬಗ್ಗೆ ಮತ್ತು ಅಗತ್ಯ ಬೆಲೆ ಕೂಡಲೇ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡುವುದರ ಮೂಲಕ ಸಂಪೂರ್ಣ ಅಧೋಗತಿಗೆ ತಲುಪಿರುವ ಶ್ರೀಸಾಮಾನ್ಯನ ಬದುಕಿಗೆ ನೆರವಾಗುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಾತ್ಯಾತೀತ ಜನತಾದಳ ಶಿವಮೊಗ್ಗದ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಸತೀಶ್ ಮಾತನಾಡಿ, ನಗರದಲ್ಲಿಂದು ಪಾದಯಾತ್ರೆ ಮಾಡಿಕೊಂಡು ಪ್ರತಿಭಟನೆ ಮಾಡಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸೌದೆ ಒಲೆ ಹಚ್ಚುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರದಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಇದೆ. ಡಬಲ್ ಎಂಜಿನ್ ಸರ್ಕಾರ ಎಂದು ಬೇರೆ ಹೇಳಿಕೊಳ್ಳುತ್ತಾರೆ. ಎರಡು ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಜನರ ಬಳಿ ಯಾವ ಮುಖ ಹೊತ್ತು ಓಟು ಕೇಳಲು ಹೋಗುತ್ತೀರಾ..? ಐದು ಹತ್ತು ವರ್ಷದಿಂದ ನೀವು ಏನು ಸಾಧನೆ ಮಾಡಿದ್ದೀರಾ..? ಪೆಟ್ರೋಲ್-ಡೀಸೆಲ್ ದರ ಏರಿದೆ. ರಸಗೊಬ್ಬರ ಮುಟ್ಟುವ ಹಾಗಿಲ್ಲ. ಸಿಲಿಂಡರ್ ಬೆಲೆ ವರ್ಷಕ್ಕೆ ನಾಲ್ಕು ಸಲ ಹೆಚ್ಚುತ್ತೆ ಅಂದರೆ ಏನು ಅರ್ಥ..? ಎಂದು ಪ್ರಶ್ನಿಸಿದರು.
ಹಾಗಾಗಿ ಜನ ಪ್ರಾದೇಶಿಕ ಪಕ್ಷಗಳತ್ತ ಒಲವು ನೀಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಭರವಸೆ ನೀಡಿದ್ದಾರೆ. ರೈತರು, ಕಾರ್ಮಿಕರು ಕುಮಾರಸ್ವಾಮಿ ಸಿಎಂ ಮಾಡಲು ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಜನ ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಬೇಕು. ಎಲ್ಲಾ ಕಡೆ ಮನವಿ ನೀಡುತ್ತೇವೆ ಆದರೆ ಅವರಿಗೆ ಮುಟ್ಟೋದೇ ಇಲ್ಲ ಎಂದು ಗೀತಾ ಹರಿಹಾಯ್ದರು.