ಕೊಪ್ಪಳ : ಹನುಮ ಜನ್ಮಸ್ಥಳ ಅಂಜನಾದ್ರಿ ಹೆಸರಲ್ಲಿ ಬಿಜೆಪಿ ನಾಯಕರು ಈ ಬಾರಿ ಚುನಾವಣೆ ಎದುರಿಸಿದ್ದರು. ಬಿಜೆಪಿ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ 120 ಕೋಟಿ ಅನುದಾನ ನೀಡಿದೆ. ಕಾಂಗ್ರೆಸ್ ಕೂಡ ಇದಕ್ಕೆ ಹೊರತಾಗಿಲ್ಲ ಕಾಂಗ್ರೆಸ್ ನಲ್ಲೂ ಕೆಲವರು ಅಂಜನಾದ್ರಿ ಜಪ ಮಾಡಿ ಗೆಲುವು ಸಾಧಿಸಿದ್ದಾರೆ. ಹರಕೆ ಹೊತ್ತಿದ್ದಾರೆ. ಇದೀಗ ಹರಕೆ ತೀರಿಸಲು ಮುಂದಾಗಿದ್ದಾರೆ. ಇಲ್ಲೊಬ್ಬ ಕಾಂಗ್ರೆಸ್ ಶಾಸಕನ ಗೆಲುವಿನ ಹಿನ್ನೆಲೆ ಶಾಸಕನ ಬೆಂಬಲಿಗರು 200 ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ಅಂಜನಾದ್ರಿಗೆ ಹರಕೆ ತೀರಿಸಿದ್ದಾರೆ.

ಯಾವ ಅಂಜನಾದ್ರಿ ಹನುಮನ ಅಸ್ತ್ರ ಬಳಿಸಿಕೊಂಡು ಬಿಜೆಪಿ ನಾಯಕರು ಚುನಾವಣೆ ಗೆಲುವಿಗೆ ತಂತ್ರ ರೂಪಿಸಿದ್ರೋ ಅದೇ ಅಸ್ತ್ರವನ್ನು ಬಳಸಿಕೊಂಡ ಕೆಲ ಕಾಂಗ್ರೆಸ್ ನಾಯಕರು ಅಂಜನಾದ್ರಿ ಹನುಮನ ಜಪ ಮಾಡಿ ಗೆಲುವು ಸಾಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರನ ಕಾಂಗ್ರೆಸ್ ಶಾಸಕ ರಾಜಾವೆಂಕಟಪ್ಪ ನಾಯಕ ಗೆಲುವಿಗೆ ಅಂಜನಾದ್ರಿಗೆ ಹರಕೆ ಹೊತ್ತಿದ್ದ ಬೆಂಬಲಿಗರು ಹನುಮಪ್ಪನಿಗೆ ಹರಕೆ ತೀರಿಸಿದ್ದಾರೆ.
ಬಿಜೆಪಿಯ ಪ್ರಬಲ ರಾಜುಗೌಡ ನಾಯಕ ಅವರನ್ನು ರಾಜಾವೆಂಕಟಪ್ಪ ನಾಯಕ ಭರ್ಜರಿ ಅಂತರದಿಂದ ಸೋಲಿಸಿದ್ದಾರೆ. ರಾಜುಗೌಡ ಸೋತ್ರೆ, ಸುರಪುರದಿಂದ ಅಂಜನಾದ್ರಿಗೆ ಪಾದಯಾತ್ರೆ ಬರುವುದಾಗಿ ಹರಕೆ ಹೊತ್ತಿದ್ದ ಬೆಂಬಲಿಗರು ಕಳೆದ ಐದು ದಿನಗಳಿಂದ ಪಾದಯಾತ್ರೆ ಮಾಡಿ ಅಂಜನಾದ್ರಿಗೆ ತಲುಪಿ ಹರಕೆ ತೀರಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಇನ್ನಿತರ ಪ್ರಮುಖ ನಾಯಕರ ಫೋಟೊ ಹಿಡಿದು 200 ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಅಂಜನಾದ್ರಿ ಬೆಟ್ಟವೇರಿ ಹನುಮನ ದರ್ಶನ ಪಡೆದು ಹರಕೆ ತೀರಿಸಿದ್ದಾರೆ.