ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು. ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ ಎಂದರು.

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ ಎಂದು ತಿಳಿಸಿದರು.

ಹೀಗೆ ಆದರೆ 2028ರ ಚುನಾವಣೆ ಪಕ್ಷಕ್ಕೆ ಕಷ್ಟವಾಗಲಿದೆ ಎನ್ನುವುದರ ಬಗ್ಗೆ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವವರಿಗೆ ಕಷ್ಟವಾಗಬಹುದು. ನನಗೆ ಕಷ್ಟ ಆಗುವುದಿಲ್ಲ. ಈ ಬಗ್ಗೆ ನಾನೇಗೆ ಹೇಳಲಿ ಎನ್ನುವ ಮೂಲಕ 2028ರ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎನ್ನುವುದನ್ನು ತಿಳಿಸಿದರು.

ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಸಿಎಂ ಮಾಡಬೇಕು ಎಂಬ ಹೆಚ್.ಸಿ ಮಹದೇವಪ್ಪ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳಿಗೆ 1.20 ಲಕ್ಷ ಕೋಟಿ ಖರ್ಚಾಗಿದೆ ಎನ್ನುವ ಮಾಹಿತಿ ಬಗ್ಗೆ ಮಾತನಾಡಿದ ಅವರು, ಗ್ಯಾರಂಟಿಯು ರಾಜ್ಯದ ಜನತೆಗೆ ಕೊಟ್ಟ ನಮ್ಮ ವಾಗ್ದಾನ. ನಾವು ಅದರಂತೆ ನಡೆಯಬೇಕು. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಚುನಾವಣೆ ಎದುರಿಸಿದ ಎಲ್ಲರೂ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಹೊರೆಯಾದರೂ ಆಗಲಿ, ಬೇರೆಯಾದರೂ ಆಗಲಿ. ಮಾತು ಕೊಡುವ ಮುನ್ನ ಚಿಂತನೆ ಮಾಡಬೇಕಿತ್ತು. ಮಾತು ಕೊಟ್ಟಾಗಿದೆ. ಅದರಂತೆ ನಡೆಯಬೇಕು. ಐದು ವರ್ಷಗಳ ಕಾಲ ಎಷ್ಟೇ ಕಷ್ಟ ಆದರೂ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಡಬೇಕು. ಅದು ನಮ್ಮ ನಂಬಿಕೆ. ಸಿರಿವಂತರು ಇದನ್ನು ಪಡೆಯುತ್ತಿದ್ದರೆ ಅದು ತಪ್ಪು. ಬಡವರಿಗಾಗಿ ಗ್ಯಾರಂಟಿ ಯೋಜನೆ ತರಲಾಗಿದೆ. ಈ ಯೋಜನೆ ಎಲ್ಲರೂ ಬಳಸುತ್ತಿರುವ ಬಗ್ಗೆ ಕೆಲವರು ಮಾತನಾಡಿರಬಹುದು. ನಾವು ಕೊಟ್ಟಿರುವ ವಾಗ್ದಾನವನ್ನು ಅನುಷ್ಠಾನ ಮಾಡಲಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹಿಂದೆ ಸರಿದರೆ ಮಾತಿಗೆ ತಪ್ಪಿದಂತೆ ಆಗುತ್ತದೆ ಎಂದು ಹೇಳಿದರು.






