ದೇಶದಲ್ಲಿ ಭಾರೀ ಚರ್ಚೆಗೆ ಒಳಗಾಗಿರುವ ವಿಚಾರ ಎಂದರೆ ಎಲೆಕ್ಟ್ರಾಲ್ ಬಾಂಡ್ (Electoral Bonds) ಅಂದರೆ ಚುನಾವಣಾ ಫಂಡ್. ಈ ರೀತಿ ಹಣ ಸಂಗ್ರಹ ಮಾಡುವುದು ಕಾನೂನು ಬಾಹಿರ ಎಂದು ಇತ್ತೀಚಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರ ಬೆನ್ನಲ್ಲೇ ಯಾರೆಲ್ಲಾ ಚುನಾವಣಾ ಬಾಂಡ್ ಖರೀದಿ ಮಾಡಿದ್ದಾರೆ..? ಯಾವ ಪಾರ್ಟಿಗೆ ಕೊಟ್ಟಿದ್ದಾರೆ..? ಎಷ್ಟು ಮುಖಬೆಲೆಯ ಬಾಂಡ್ ಖರೀದಿ ಮಾಡಲಾಗಿದೆ..? ಯಾವ ದಿನಾಂಖ ಅನ್ನೋ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿತ್ತು. ಅಳೆದೂ ತೂಗಿ ಮಾಹಿತಿ ಹಂಚಿಕೊಂಡಿದ್ದ ಎಸ್ಬಿಐ,(SBI) ಮೊದಲಿಗೆ ಗೊಂದಲಕಾರಿ ಅಂಶಗಳನ್ನು ನೀಡಿತ್ತು. ಆ ಬಳಿಕ ಮತ್ತೆ ಕೋರ್ಟ್ ಚಾಟಿ ಬೀಸಿದ ಬಳಿಕ ಸೂಕ್ತ ಮಾಹಿತಿ ಹಂಚಿಕೊಂಡಿದೆ. ಆ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗ (Election Commission) ತನ್ನ ವೆಬ್ಸೈಟ್ನಲ್ಲೂ ಪ್ರಕಟಿಸಿದೆ.
ದೇಶದಲ್ಲಿ BJPಗೆ ಭಾರೀ ಪ್ರಮಾಣದ ಚುನಾವಣಾ ಬಾಂಡ್ ಬಂದಿದೆ. ಇಡೀ ದೇಶದಲ್ಲಿ ಶೇಕಡ 50ಕ್ಕಿಂತ ಹೆಚ್ಚು ಚುನಾವಣಾ ಬಾಂಡ್ ಮೂಲಕ ಪಕ್ಷಕ್ಕೆ ಫಂಡ್ ಹರಿದು ಬಂದಿದ್ದರೆ ಇನ್ನುಳಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ಅಲ್ಪಸ್ವಲ್ಪ ಹಣ ಬಂದಿದೆ ಎನ್ನುವುದು ಚುನಾವಣಾ ಆಯೋಗದಲ್ಲಿ ಬಿಡುಗಡೆ ಆಗಿರುವ ಮಾಹಿತಿಯನ್ನು ನೋಡಿದಾಗ ಕಂಡು ಬರುತ್ತದೆ. ಆದರೆ ಕರ್ನಾಟಕದಲ್ಲಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ಗೂ ಚುನಾವಣಾ ಬಾಂಡ್ (ECI) ಮೂಲಕ ಫಂಡ್ ಬಂದಿದೆ ಎನ್ನುವುದುನ್ನು ಸ್ವತಃ ಜನತಾ ದಳ(JDS) (ಪ್ರಾದೇಶಿಕ) ಪಕ್ಷವೇ ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಿಕೊಂಡಿದೆ. ಯಾವ ಸಂಸ್ಥೆ..? ಯಾವ ದಿನಾಂಕ..? ಎಷ್ಟು ಮೊತ್ತದ ಹಣವನ್ನು ನೀಡಿದೆ ಎನ್ನುವುದನ್ನು ಹಂಚಿಕೊಳ್ಳಲಾಗಿದೆ.
ಸೆಪ್ಟೆಂಬರ್ 30, 2023 ರ ತನಕ ಜೆಡಿಎಸ್ ಪಕ್ಷಕ್ಕೆ ಬಂದಿರುವ ಫಂಡ್ ಬಗ್ಗೆ ಮಾನ್ಯ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿದ್ದು, ಆ ಮಾಹಿತಿ ಪ್ರಕಾರ ಜೆಡಿಎಸ್ ಪಕ್ಷಕ್ಕೆ 89 ಕೋಟಿ 75 ಲಕ್ಷ ರೂಪಾಯಿ ಫಂಡ್ ಬಂದಿದೆ. ಅದರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಿಂದ ಇತ್ತೀಚಿಗೆ ವಿಧಾನಸಭಾ ಚುನಾವಣೆ ತನಕವೂ ಕೋಟಿ ಕೋಟಿ ಲೆಕ್ಕದಲ್ಲಿ ಪಾರ್ಟಿ ಫಂಡ್ ಹರಿದು ಬಂದಿದೆ. ಈ ಮಾಹಿತಿಯನ್ನು ಸ್ವತಃ ದೇವೇಗೌಡರೇ (HDDevegowda) ರವಾನೆ ಮಾಡಿದ್ದು, ಕೇಂದ್ರ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟ ಮಾಡಿದೆ.
ಅದರಲ್ಲಿ ಇನ್ಫೋಸಿಸ್ ಸಂಸ್ಥೆ, ಎಂಬೆಸ್ಸಿ ಗ್ರೂಪ್ಸ್ ಆಫ್ ಕಂಪನೀಸ್, ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್, ಶಾಹಿ ಎಕ್ಸ್ಪೋರ್ಟ್, ಮೇಘಾ ಎಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಸನ್ ಸಂಸ್ಥೆ, ಬೈಕಾನ್ ಲಿಮಿಟೆಡ್, ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಸಂಸ್ಥೆ, JSW ಸ್ಟೀಲ್ಸ್, ಅಮರ್ ರಾಜ್ ಗ್ರೂಪ್ಸ್, ಆದಿತ್ಯ ಬಿರ್ಲಾ ಸಂಸ್ಥೆ ಹೀಗೆ ಸುಮಾರು 25 ಬಾಂಡ್ಗಳು ಜೆಡಿಎಸ್ ಪಾರ್ಟಿ ಅಕೌಂಟ್ ಸೇರಿವೆ ಎಂದು ಬಹಿರಂಗ ಆಗಿದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ (JDS) ಕೂಡ ಚುನಾವಣಾ ಬಾಂಡ್ ಮೂಲಕ ಲಾಭ ಮಾಡಿಕೊಂಡಿದೆ ಎನ್ನುವುದು ಈ ಮೂಲಕ ಬಹಿರಂಗ ಆಗಿದೆ.
ಕೃಷ್ಣಮಣಿ