• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಅರ್ಥ ಕಳೆದುಕೊಂಡಿರುವ ಬಜೆಟ್‌ ಪ್ರಕ್ರಿಯೆಗಳು

ವಾರ್ಷಿಕ ಬಜೆಟ್‌ ರಾಜಕೀಯ ಹಿತಾಸಕ್ತಿಗಳ ಚೌಕಟ್ಟಿನಲ್ಲಿ ಸಿದ್ಧವಾಗುವ ಒಂದು ಕಡತ

ಪ್ರತಿಧ್ವನಿ by ಪ್ರತಿಧ್ವನಿ
April 8, 2026
in Uncategorized
0
ಅರ್ಥ ಕಳೆದುಕೊಂಡಿರುವ ಬಜೆಟ್‌ ಪ್ರಕ್ರಿಯೆಗಳು
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಏಪ್ರಿಲ್‌ 2026)

ಅರ್ಥಶಾಸ್ತ್ರದ ಮೂಲ ಕಲ್ಪನೆಯಲ್ಲಿ ಆಡಳಿತಾರೂಢ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳು ಪ್ರತಿವರ್ಷ ಮಂಡಿಸುವ ಆಯವ್ಯಯ ಪತ್ರ ಅಥವಾ ಬಜೆಟ್‌ ಎನ್ನುವುದು ಆ ವರ್ಷದ ಖರ್ಚು ವೆಚ್ಚಗಳ ಒಂದು ದಸ್ತಾವೇಜು. ಆರ್ಥಿಕ ಅಭಿವೃದ್ಧಿಯ ಒಂದು ಭಾಗವಾಗಿ ರೂಪುಗೊಳ್ಳುವ ಈ ಕಡತ ಸರ್ಕಾರಗಳ ಆದ್ಯತೆ, ಆಯ್ಕೆ ಮತ್ತು ಪ್ರಗತಿಯ ಆಶಯಗಳನ್ನು ಅಂಕಿ ಸಂಖ್ಯೆಗಳ ಮೂಲಕ ವ್ಯಕ್ತಪಡಿಸುವ ಒಂದು ಪ್ರಹಸನವಾಗಿ ಸಹ ಕಾಣುತ್ತದೆ. ವಿಕಸಿತವಾಗಲು ಹೊರಟಿರುವ ಭಾರತ ಪಂಚವಾರ್ಷಿಕ ಯೋಜನೆಗಳಿಗೆ ತಿಲಾಂಜಲಿ ನೀಡಿದ್ದರೂ ಸಹ , ಆರ್ಥಿಕ ವಿಕಾಸದ ಹಾದಿಯಲ್ಲಿ ಭವಿಷ್ಯದ ಹೆಜ್ಜೆಗಳನ್ನು ನಿರ್ಧರಿಸುವ ಒಂದು ಕಾರ್ಯತಂತ್ರವಂತೂ ಇದ್ದೇ ಇರುತ್ತದೆ. ಈಗ ನೀತಿ ಆಯೋಗ ಇದನ್ನು ನಿರ್ವಹಿಸುತ್ತಿದೆ.

ಚುನಾಯಿತ ಸರ್ಕಾರ ತನ್ನ ಪೂರ್ಣಾವಧಿಯ ಆಳ್ವಿಕೆಯಲ್ಲಿ ಅನುಸರಿಸುವ ಆರ್ಥಿಕ ಮಾರ್ಗ, ಅಭಿವೃದ್ಧಿಯ ಮಾದರಿ ಹಾಗೂ ಇಲ್ಲಿ ಗುರುತಿಸಬಹುದಾದ ದೂರಗಾಮಿ ದೃಷ್ಟಿಕೋನ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಪ್ರತಿವರ್ಷ ತನ್ನ ಬಜೆಟ್‌ ಮಂಡಿಸುತ್ತದೆ. ಘೋಷಿತ ಅಥವಾ ಘೋಷಿಸಲ್ಪಡುವ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಆಯಾ ಹಣಕಾಸು ವರ್ಷದಲ್ಲಿ ಎಷ್ಟು ಹಣವನ್ನು ನಿಯೋಜಿಸಿದೆ/ನಿಯೋಜಿಸುತ್ತದೆ ಎಂದು ಖಚಿತಪಡಿಸುವುದಷ್ಟೇ ಅಲ್ಲದೆ, ನಿಯೋಜಿತ ಹಣದಲ್ಲಿ ಎಷ್ಟು ವ್ಯಯವಾಗಿದೆ ಎಂದೂ ನಿಷ್ಕರ್ಷೆ ಮಾಡುತ್ತದೆ. ಹೊಸ ಯೋಜನೆಗಳನ್ನೂ ಸೇರಿದಂತೆ, ಸರ್ಕಾರಕ್ಕೆ ತಗಲುವ ವೆಚ್ಚವನ್ನು ಭರಿಸಲು ಯಾವ ಆದಾಯ ಮೂಲಗಳನ್ನು ಅವಲಂಬಿಸುತ್ತದೆ ಎನ್ನುವುದನ್ನೂ ಬಜೆಟ್‌ ಸ್ಪಷ್ಟಪಡಿಸುತ್ತದೆ.

ಆದ್ಯತೆ ಆಯ್ಕೆ ಮತ್ತು ಹೊಸತನ !
ಈ ವಾರ್ಷಿಕ ಪ್ರಹಸನದಲ್ಲಿ ಜನಸಾಮಾನ್ಯರಿಗೆ ಕಾಣುವುದು ಸರ್ಕಾರದ ಆದ್ಯತೆಗಳು, ಆಯ್ಕೆಗಳು ಮತ್ತು ಉದ್ದೇಶಿತ ಜನಸಮುದಾಯಗಳು. ಭಾರತದಂತಹ ಬಹುಧಾರ್ಮಿಕ, ಬಹುಜಾತೀಯ ದೇಶದಲ್ಲಿ ಪ್ರಾದೇಶಿಕ ವೈವಿಧ್ಯತೆಗಳೂ ಸಹ ಈ ಆಯ್ಕೆಯ ಪ್ರಶ್ನೆಯನ್ನು ಜಟಿಲಗೊಳಿಸುತ್ತವೆ. 1990ರವರೆಗೂ ಸರ್ಕಾರಗಳು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ಗಳನ್ನು ರೂಪಿಸುತ್ತಿದ್ದವು. ಹಾಗಾಗಿ ಈ ದಸ್ತಾವೇಜು ಒಂದು ಆಂತರಿಕ ಮೌಲ್ಯವನ್ನು (Intrinsic Value) ಪಡೆದುಕೊಳ್ಳುತ್ತಿತ್ತು.

ತಳಸ್ತರದ ಜನಸಮುದಾಯಗಳ ನಿರೀಕ್ಷೆ, ಮಾರುಕಟ್ಟೆಯ ಹಂಬಲ ಹಾಗೂ ರಾಜಕೀಯ ಪಕ್ಷಗಳ ಲಾಭ-ನಷ್ಟಗಳ ಮುಂಗಾಣ್ಕೆ ಇವೆಲ್ಲವನ್ನೂ ಬಜೆಟ್‌ಗಳಲ್ಲಿ ಗುರುತಿಸಬಹುದಾಗಿತ್ತು.
ಹಾಗಾಗಿ ಪ್ರತಿಯೊಂದ ಬಜೆಟ್‌ನಲ್ಲೂ ನವೀನತೆಯನ್ನು ಕಾಣಬಹುದಾಗಿತ್ತು. ಸರ್ಕಾರಗಳು ಸಂಗ್ರಹಿಸುವ ತೆರಿಗೆ ಪ್ರಧಾನವಾಗಿ ಸಾಮಾಜಿಕ ವೆಚ್ಚಗಳಿಗಾಗಿ, ತಳಮಟ್ಟದ ಸಮಾಜದಲ್ಲಿರುವ ಅಸಮಾನತೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಖರ್ಚು ಮಾಡುವ ಒಂದು ಔದಾತ್ಯ ಕೊಂಚಮಟ್ಟಿಗಾದರೂ ಕಾಣಬಹುದಾಗಿತ್ತು. ಈ ಪರಂಪರೆಗೆ 1990ರ ಜಾಗತೀಕರಣದ ನಂತರ ಇತಿಶ್ರೀ ಹಾಡಲಾಯಿತು. ಇಂದು ಅಧಿಕಾರ ರಾಜಕಾರಣವನ್ನು ಪ್ರತಿನಿಧಿಸುವ ಎಲ್ಲ ಬಂಡವಾಳಿಗ ಪಕ್ಷಗಳೂ (Bourgeous) ಇದನ್ನು ಅನುಮೋದಿಸಿ, ಅನುಸರಿಸುತ್ತಿರುವುದನ್ನು ಗಮನಿಸಬೇಕು. ಈಗ ಡಿಜಿಟಲ್‌ ಬಂಡವಾಳಶಾಹಿಯು ಕಾರ್ಪೋರೇಟ್‌ ಮಾರುಕಟ್ಟೆ ಆಧಾರಿತ ಆರ್ಥಿಕ ಮಾದರಿಯನ್ನು ಸರ್ಕಾರಗಳ ಮೇಲೆ ಹೇರುತ್ತಿದೆ. ಈ ಆರ್ಥಿಕ ಶಕ್ತಿಗಳ ಹಿತಾಸಕ್ತಿಗಳನ್ನು ಕಾಯುವುದು ಚುನಾಯಿತ ಸರ್ಕಾರಗಳ ಪ್ರಥಮ ಆದ್ಯತೆಯಾಗುತ್ತದೆ.

ಕಾರ್ಪೋರೇಟ್‌ ತೆರಿಗೆಯ ದರವನ್ನು ಕಡಿಮೆ ಮಾಡಿರುವುದು, ಸಂಪತ್ತಿನ ಮೇಲೆ ತೆರಿಗೆಯನ್ನು ರದ್ದುಪಡಿಸಿರುವುದು, ವೈಯುಕ್ತಿಕ ಆದಾಯ ತೆರಿಗೆಗಳಿಗಿಂತಲೂ ಕಾರ್ಪೊರೇಟ್‌ ತೆರಿಗೆ ಸಂಗ್ರಹ ಕಡಿಮೆಯಾಗಿರುವುದು ಈ ಹೊಸ ಆದ್ಯತೆಗಳ ಪರಿಣಾಮ (ದುಷ್ಪರಿಣಾಮ). ಹಾಗಾಗಿಯೇ ಜನಸಾಮಾನ್ಯರಿಗೆ ವೈಯುಕ್ತಿಕವಾಗಿ ನೀಡಲಾಗುವ ವಿನಾಯಿತಿ, ರಿಯಾಯಿತಿಗಳಿಗಿಂತಲೂ ಕಾರ್ಪೋರೇಟ್‌ ಮಾರುಕಟ್ಟೆ ಉದ್ಯಮಗಳಿಗೆ, ಬಂಡವಾಳ ಹೂಡಿಕೆದಾರರಿಗೆ ನೀಡುವ ಸವಲತ್ತು, ಸೌಕರ್ಯಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ತಳಸಮಾಜದ ಆರ್ಥಿಕ ಅಸಮಾನತೆಗಳನ್ನು ಸ್ವಾಗತಿಸುವ ಚಿಂತನಾ ಮಾದರಿಯನ್ನು ಇಲ್ಲಿ ಗುರುತಿಸಬಹುದು.

ಭಾರತದ ಸಾಮಾಜಿಕ ವೈವಿಧ್ಯತೆಯೂ ರಾಜಕೀಯವಾಗಿ ನಿರ್ಣಾಯಕವಾಗುವುದರಿಂದ, ಅವಕಾಶವಂಚಿತ ಅಥವಾ ಹಿಂದುಳಿದ ವರ್ಗಗಳನ್ನು ಗುರುತಿಸಿ, ನಿರ್ದಿಷ್ಟ ಯೋಜನೆಗಳನ್ನು ಜಾರಿಗೊಳಿಸುವ ಒಂದು ಪದ್ಧತಿಯನ್ನು ಈ ವ್ಯವಸ್ಥೆಯಲ್ಲೂ ಅಂತರ್ಗತಗೊಳಿಸಲಾಗಿದೆ. ಆದರೆ ಇಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದಕ್ಕಿಂತಲೂ ಹೆಚ್ಚಿನ ಆದ್ಯತೆ ನೀಡುವುದು, ಸಾಮುದಾಯಿಕ ಅಸ್ಮಿತೆಗಳನ್ನು ರಕ್ಷಿಸುವ ಮೂಲಕ ರಾಜಕೀಯವಾಗಿ ಮತಬ್ಯಾಂಕುಗಳನ್ನು ಸೃಷ್ಟಿಸಿ, ಕಾಪಾಡುವ ಒಂದು ವಿಕೃತ ಆಯ್ಕೆ. ತತ್ಫಲವಾಗಿ ಬಜೆಟ್‌ ಮಂಡನೆಯಾದ ಕೂಡಲೇ ಯಾವ ಸಮುದಾಯ-ವರ್ಗ-ಜಾತಿ-ಧಾರ್ಮಿಕ ಗುಂಪುಗಳಿಗೆ ಎಷ್ಟು ಪ್ರಯೋಜನಗಳು ಲಭ್ಯವಾಗುತ್ತವೆ ಎಂಬ ಪ್ರಶ್ನೆಯೇ ಸಾರ್ವಜನಿಕ ಸಂಕಥನದ ಮುಖ್ಯ ಭಾಗವಾಗುತ್ತದೆ.
ನವ ಉದಾರವಾದಿ ಮಾರುಕಟ್ಟೆ

ಇಲ್ಲಿ ನಮಗೆ ʼವಿಕಸಿತ ಭಾರತʼ ಮತ್ತು ʼಎ ಐ ಕ್ರಾಂತಿ ʼ ಹಾಗೂ ʼ ಆತ್ಮನಿರ್ಭರತೆ ʼ ಮುಖ್ಯವಾಗುತ್ತದೆ. ಈ ಮೂರರ ಪೈಕಿ ʼ ಎಐ ಕ್ರಾಂತಿ ʼಮಾತ್ರ ಹೊಸತು. ಉಳಿದೆರಡು ಸ್ವಾತಂತ್ರ್ಯದ ದಿನದಿಂದಲೂ ದೇಶ ಕಟ್ಟಲು ಅನುಸರಿಸಿದ ಅಭಿವೃದ್ಧಿ ಮಾರ್ಗಗಳ ಮೂಲ ಮಂತ್ರಗಳು. ದುರಂತ ಎಂದರೆ ಕೇಂದ್ರ ಬಿಜೆಪಿ ಸರ್ಕಾರ, ಈ ಏಳು ದಶಕಗಳಲ್ಲಿ ಭಾರತ ವಿಕಾಸವನ್ನೇ ಕಂಡಿಲ್ಲ, ಸ್ವಾವಲಂಬನೆಯನ್ನು ಸಾಧಿಸಿಯೇ ಇಲ್ಲ ಎಂಬ ಮಿಥ್ಯೆಯನ್ನು ಸಾರ್ವತ್ರೀಕರಿಸುತ್ತಿದೆ. ವರ್ತಮಾನದ ಸಂದರ್ಭದಲ್ಲಿ ಈ ಎರಡೂ ಪದಗಳು ರೂಪಾಂತರಗೊಂಡಿದ್ದು, ವಿಕಾಸ ಯಾರಿಗಾಗಿ ? ಸ್ವಾವಲಂಬನೆ ಯಾರದು ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇಡೀ ಸಮಾಜವನ್ನು ತಾತ್ವಿಕವಾಗಿ ವಿಭಜಿಸಿ ನೋಡಿದಾಗ ಉಳ್ಳವರು ಮತ್ತು ಇಲ್ಲದವರು ಎರಡು ವರ್ಗಗಳಾಗಿ ಕಾಣುತ್ತಾರೆ. ಈ ಎರಡೂ ಆದ್ಯತೆಗಳು ಮೊದಲನೆಯ ವರ್ಗಕ್ಕೆ ಮಾತ್ರ ಸಂಬಂಧಿಸಿರುವುದು ಸ್ಪಷ್ಟವಾಗುತ್ತದೆ.

ವಿಕಸಿತ ಭಾರತದ ಕಲ್ಪನೆಯೊಂದಿಗೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಆರ್ಥಿಕಾಭಿವೃದ್ಧಿಯ ಮಾದರಿ, ಬೃಹದಾರ್ಥಿಕತೆಯ (Macro Economics) ನೆಲೆಯಲ್ಲಿ ಸಂಪೂರ್ಣವಾಗಿ ನವ ಉದಾರವಾದವನ್ನೇ ಅನುಸರಿಸುತ್ತಿದೆ. ತಳಸ್ತರದ ಆರ್ಥಿಕ ನೀತಿಗಳಲ್ಲಿ ಕಲ್ಯಾಣ ಯೋಜನೆಗಳನ್ನು ಮತ್ತು ಆಳ್ವಿಕೆಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾಗದ ಸಾಮಾಜಿಕ ಯೋಜನೆಗಳನ್ನು ಚಾಲ್ತಿಯಲ್ಲಿಟ್ಟಿದೆ. ಹಾಗಾಗಿಯೇ ರೈಲು ಮಾರ್ಗಗಳ ವಿಸ್ತರಣೆ ಮತ್ತು ಹೊಸ ರೈಲು ಮಾರ್ಗಗಳಿಗಿಂತಲೂ ಅತ್ಯಾಧುನಿಕ ಸೌಲಭ್ಯಗಳ ರೈಲುಗಳು ಸರ್ಕಾರದ ಆದ್ಯತೆಯಾಗಿದೆ. ರೈಲ್ವೆ ಸಚಿವಾಲಯ ಪ್ರತ್ಯೇಕವಾಗಿದ್ದರೂ ರೈಲ್ವೆ ಬಜೆಟ್‌ ಪ್ರಕ್ರಿಯೆಯನ್ನು ಹಣಕಾಸು ಬಜೆಟ್‌ನೊಳಗೆ ಸಮೀಕರಿಸುವ ಮೂಲಕ, ಅದನ್ನೂ ಸಹ ರಸ್ತೆ-ವಾಯು ಸಾರಿಗೆಯ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಗ್ರಾಮೀಣ ಭಾರತದ ದೃಷ್ಟಿಯಿಂದ ರೈಲ್ವೆ ಬಜೆಟ್‌ ಮುಂದುವರೆಸುವುದು ಅತ್ಯವಶ್ಯವಾಗಿತ್ತು.

ಇಲ್ಲಿ ನಮಗೆ ಅಭಿವೃದ್ಧಿಯ ಫಲಾನುಭವಿಗಳು ಯಾರು ಮತ್ತು ಸರ್ಕಾರದ ವೆಚ್ಚಗಳ ಬಾಧ್ಯತೆಯನ್ನು ಹೊರುವವರು ಯಾರು ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಸಾಮಾನ್ಯ ಜನರು ಪಾವತಿಸುವ ತೆರಿಗೆ ಹಣದಿಂದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡುವ ಒಂದು ಯೋಜನೆಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಪಿಂಚಣಿ ನಿಧಿ, ಭವಿಷ್ಯ ನಿಧಿ, ವಿಮೆಯನ್ನೂ ಸೇರಿದಂತೆ ಎಲ್ಲ ಸಂಚಿತ ಹಣಕಾಸು ಮೂಲಗಳನ್ನೂ ಆಧುನಿಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಳಸುವ ಮೂಲಕ, ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿಗಳ ರಕ್ಷಣೆಗೆ ಸರ್ಕಾರಗಳು ಬದ್ಧವಾಗಿವೆ. ಇದಕ್ಕೆ ಕರ್ನಾಟಕ ಸರ್ಕಾರವೂ ಅಪವಾದವಲ್ಲ. ಆದ್ದರಿಂದ ವಿಕಸಿತ ಭಾರತ ಶ್ರೀಮಂತ-ಕಾರ್ಪೋರೇಟ್‌ ಬಂಡವಾಳಿಗರ ಆಡುಂಬೊಲವಾಗುತ್ತದೆ. ದುಡಿಯುವ ವರ್ಗಗಳು, ತಳಸ್ತರದ ಸಾಮಾನ್ಯ ಜನತೆ ಶಾಶ್ವತವಾಗಿ ಹಿಂದುಳಿಯುವಂತಾಗುತ್ತದೆ.

ಸಮಾಜವಾದದ ಅಪಭ್ರಂಶ
ಈ ನವ ಉದಾರವಾದಿ ನೀತಿಗಳ ಸಂಕೋಲೆಯಲ್ಲಿ ಸಿಲುಕಿರುವ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಹೊಸ ಮಾದರಿಯನ್ನು ಅನುಸರಿಸಲು ಸಾಧ್ಯವೇ ಇಲ್ಲ. ಸಮಾಜವಾದದ ಹೆಸರಿನಲ್ಲಿ ಸರ್ಕಾರ ಒದಗಿಸುತ್ತಿರುವ ಐದು ಗ್ಯಾರಂಟಿಗಳು ಮೂಲತಃ ಮಾರುಕಟ್ಟೆ ಪ್ರಹಾರಕ್ಕೊಳಗಾಗುವ ತಳಮಟ್ಟದ ಸಮಾಜವನ್ನು ಸಂತೃಪ್ತಿಪಡಿಸುವ ಒಂದು ವಿಧಾನವಷ್ಟೇ ಆಗಿದೆ. ಪ್ರಾಥಮಿಕ ಶಿಕ್ಷಣ, ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ, ಕಾರ್ಮಿಕರ ಕನಿಷ್ಠ ವೇತನ ಮತ್ತು ಸೇವಾ ಸೌಲಭ್ಯಗಳು, ರೈತರ ಬೇಡಿಕೆಗಳು, ಕೃಷಿ ಭೂಮಿಯ ರಕ್ಷಣೆ, ಕೈಗೆಟುಕುವ ವಿದ್ಯಾರ್ಜನೆಯ ಸಾಂಸ್ಥಿಕ ಸವಲತ್ತುಗಳು ಇದಾವುದನ್ನೂ ಕೇಂದ್ರೀಕರಿಸದ ಸಿದ್ದರಾಮಯ್ಯ ಸರ್ಕಾರವನ್ನು ʼ ಸಮಾಜವಾದಿ ʼ ಎಂದು ಬಣ್ಣಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.

ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವ ಸಲುವಾಗಿ ಇನ್ನೂ ಹೆಚ್ಚಿನ ಸಾಲ ಮಾಡಲು ಸಿದ್ಧವಾಗಿರುವ ಸರ್ಕಾರ, ಶ್ರೀಮಂತರ ಐಷಾರಾಮಿ ವಸ್ತುಗಳ ಮೇಲೆ, ಸ್ಥಿರಾಸ್ತಿಗಳ ಮೇಲೆ ಮತ್ತು ಇತರ ಉಪಕರಣಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಸಾಹಸ ಮಾಡುವುದಿಲ್ಲ. ಕರ್ನಾಟಕದಲ್ಲಿ ಅಸಮಾನತೆಯ ಸೂಚ್ಯಂಕ ರಾಷ್ಟ್ರಮಟ್ಟಕ್ಕೆ ಹೋಲಿಸಿದರೆ ಕಡಿಮೆ ಇದ್ದರೂ, ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳು ಈಗಲೂ ಸಹ ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಸರ್ಕಾರವಷ್ಟೇ ಅಲ್ಲ, ಕರ್ನಾಟಕದ ಯಾವ ಸರ್ಕಾರಗಳೂ ಉತ್ತರ-ದಕ್ಷಿಣ-ಕರಾವಳಿ ಕರ್ನಾಟಕದ ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವ, ಸಮಾನ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿಲ್ಲ. ಸಿದ್ದರಾಮಯ್ಯನವರ 17ನೆ ಬಜೆಟ್‌ನಲ್ಲೂ ಸಹ ಉದ್ಯೋಗ ಸೃಷ್ಟಿಯ ಸೂಚನೆಗಳು ಕಾಣುವುದಿಲ್ಲ.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಲಾಗಿದೆ. ಅದೂ ಶೇಕಡಾ 25ರಷ್ಟು ಖಾಲಿ ಹುದ್ದೆಗಳು ಮಾತ್ರ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು, ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು, ಗುತ್ತಿಗೆ ಕಾರ್ಮಿಕರು, ಗಿಗ್ ವಲಯದ ಕಾರ್ಮಿಕರು ಈ ಲಕ್ಷಾಂತರ ಜನರ ದೃಷ್ಟಿಯಿಂದ ನೋಡಿದಾಗ ಭವಿಷ್ಯದ ಭರವಸೆ ಮೂಡಿಸುವ ಯಾವುದೇ ಉಪಕ್ರಮಗಳನ್ನು ಬಜೆಟ್‌ನಲ್ಲಿ ಗುರುತಿಸಲಾಗುವುದಿಲ್ಲ. ಮತ್ತೊಂದೆಡೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳಿಂದ ತೊಂದರೆಗೀಡಾಗುವ ಕಾರ್ಮಿಕರಿಗೆ ಸಾಂತ್ವನ ನೀಡುವ ಸೂಚನೆಗಳಿಲ್ಲ. ರೈತರ ದೃಷ್ಟಿಯಿಂದ ಮೂರು ಕರಾಳ ಕೃಷಿಕಾಯ್ದೆಗಳು ಮತ್ತು ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯುವ ಸೂಚನೆಯನ್ನೂ ಸರ್ಕಾರ ನೀಡಿಲ್ಲ. ಗ್ರೇಟರ್‌ ಬೆಂಗಳೂರು, ಗ್ರೇಟರ್ ಮೈಸೂರು ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮ ಜಗತ್ತನ್ನು ಮತ್ತಷ್ಟು ಸಮೃದ್ಧಗೊಳಿಸುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಕಾರಣ ಕರ್ನಾಟಕದ ಬಹುತೇಕ ಶಾಸಕರು ಇದೇ ಔದ್ಯಮಿಕ ವಲಯದ ವಾರಸುದಾರರು.

ಈ ದೃಷ್ಟಿಯಿಂದ ನೋಡಿದಾಗ ಸಿದ್ದರಾಮಯ್ಯ ಅವರ ಬಜೆಟ್‌ನ್ನು ಕ್ರಾಂತಿಕಾರಿ, ಸುಧಾರಕ ಅಥವಾ ಜನಪರ ಎಂದು ಬಣ್ಣಿಸುವುದು ಅತಿರೇಕದ ಉತ್ಪ್ರೇಕ್ಷೆಯಾಗುತ್ತದೆ. ಜೆಡಿಎಸ್‌ ಮತ್ತು ಬಿಜೆಪಿ ತಮ್ಮ ರಾಜಕೀಯ ಪ್ರತಿರೋಧ ವ್ಯಕ್ತಪಡಿಸಲು ನೀಡುವ ಹೇಳಿಕೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ ಕೇಂದ್ರದ ನಿರ್ಮಲ ಸೀತಾರಾಮನ್‌ ಮಂಡಿಸುವ ಬಜೆಟ್‌ಗೂ ಕರ್ನಾಟಕದ ಬಜೆಟ್‌ಗೂ ತಾತ್ವಿಕ ವ್ಯತ್ಯಾಸವೇನೂ ಇರುವುದಿಲ್ಲ. ಅಲ್ಲಿಯೂ ಸಹ ಸೌಲಭ್ಯವಂಚಿತ ತಳಸಮಾಜದ ಸಾಮಾನ್ಯ ಜನರನ್ನು ಓಲೈಸುವ ಯೋಜನೆಗಳೇ ತುಂಬಿವೆ. ಮನ್ರೇಗಾದಂತಹ (MNREGA) ಕ್ರಾಂತಿಕಾರಿ, ಜನೋಪಯೋಗಿ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ಮಾರುಕಟ್ಟೆ ನೀತಿಗಳನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

ದೃಷ್ಟಿಹೀನ ನೀತಿ ನಿರೂಪಣೆಗಳು
ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಈ ತೀರ್ಮಾನವನ್ನು ವಿರೋಧಿಸಿ ಜನಾಂದೋಲನ ನಡೆಸಿದರೂ, ಪರ್ಯಾಯವಾಗಿ ರಾಜ್ಯ ಸರ್ಕಾರ ಇಲ್ಲಿ ನಷ್ಟವಾಗುವ ಗ್ರಾಮೀಣ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅಥವಾ ಉಳಿಸಿಕೊಳ್ಳಲು ಯಾವ ಯೋಜನೆಗಳನ್ನು ಹಮ್ಮಿಕೊಂಡಿದೆ ? ಸಾಮಾನ್ಯ ಪರಿಭಾಷೆಯಲ್ಲಿ ನೋಡುವುದಾದರೆ, ಈ ಬಜೆಟ್‌ನಲ್ಲಿ ಸರ್ಕಾರ ಖರ್ಚು ಮಾಡುವ ಹಣಕಾಸು, ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ತಳಸಮಾಜದ ಜನಸಾಮಾನ್ಯರ ಬದುಕನ್ನು ಸುಗಮವಾಗಿಸುವ ಅಡಿಪಾಯಕ್ಕೆ ಕಾರಣವಾಗಬೇಕು. ತಳಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು, ಕೃಷಿ ಮತ್ತು ಬೇಸಾಯ ವಲಯ ಸಮೃದ್ಧವಾಗಬೇಕು, ಕೈಗಾರಿಕೆಗಳು ಹೆಚ್ಚಿನ ಬಂಡವಾಳ ಹೂಡಿಕೆಯೊಂದಿಗೆ ಆರ್ಥಿಕತೆಯನ್ನು ಬಲಪಡಿಸಬೇಕು, ಜನಸಾಮಾನ್ಯರ ಆರೋಗ್ಯವನ್ನು ಸುಸ್ಥಿರವಾಗಿರಿಸುವಂತಹ ಮೂಲ ಭೌತಿಕ ಸೌಕರ್ಯಗಳು ನಿರ್ಮಾಣವಾಗಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ, ನೈತಿಕ ಮೌಲ್ಯವರ್ಧಿತ ಕಲಿಕೆಯ ಅವಕಾಶಗಳು ಹೆಚ್ಚಾಗಬೇಕು, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳು ಸರ್ಕಾರದ ಆದ್ಯತೆಯಾಗಬೇಕು, ಈ ಸ್ತರದಲ್ಲಿ ದುಡಿಯುವ ಅಂಗನವಾಡಿ, ಆಶಾ , ಬಿಸಿಯೂಟ ಕಾರ್ಮಿಕರ ಬದುಕು ಹಸನಾಗಬೇಕು, ನಗರ-ಗ್ರಾಮಗಳ ಮಾಲಿನ್ಯವನ್ನು ತೊಡೆದುಹಾಕುವ ನೈರ್ಮಲ್ಯ ಕಾರ್ಮಿಕರ ಮತ್ತು ಪೌರ ಕಾರ್ಮಿಕರ ಜೀವನೋಪಾಯದ ದಾರಿಗಳು ಸುಗಮವಾಗಬೇಕು.

ಇವುಗಳನ್ನೇ ದೂರದೃಷ್ಟಿ ಎನ್ನುವುದಾದರೆ ಕಳೆದ ಮೂರು ದಶಕಗಳಲ್ಲಿ ಭಾರತದ ಯಾವುದೇ ಬಜೆಟ್‌ ಪ್ರಹಸನವೂ ನಿಲುಕುವುದಿಲ್ಲ.ಏಕೆಂದರೆ ಬಜೆಟ್‌ ರೂಪಿಸುವುದೇ ಸಮೀಪ ದೃಷ್ಟಿಕೋನದ (Myopic Viewpoint) ಚೌಕಟ್ಟಿನಲ್ಲಿ. ಹಾಗಾಗಿಯೇ ಬಜೆಟ್‌ ಎಂಬ ಪ್ರಹಸನ ಸಾಮಾನ್ಯ ಜನರ ದೃಷ್ಟಿಯಲ್ಲೂ ಒಂದು ಸಾಧಾರಣ ವಾರ್ಷಿಕ ಪ್ರಕ್ರಿಯೆಯಾಗಿ ಮಾತ್ರ ಕಾಣುತ್ತದೆ. ಸರ್ವತೋಮುಖ ಪ್ರಗತಿ, ಸರ್ವಾಂಗೀಣ ಅಭಿವೃದ್ಧಿಯ ಕಲ್ಪನೆಗಳನ್ನೇ ಕಾಣದ ಈ ಬಜೆಟ್‌ಗಳನ್ನು ರಾಜಕೀಯ ಬೂಟಾಟಿಕೆಯ ಒಂದು ಭಾಗ ಎಂದಷ್ಟೇ ಹೇಳಬಹುದು.

-೦-೦-೦-೦-

 

 

 

 

 

 

 

 

 

 

 

 

 

 

 

 

 

 

Tags: BudgetAnalysisCorporateEconomyDevelopmentDebateEconomicPolicyFiscalPolicygovernanceIndianEconomyinequalityKannadaArticleKarnatakaBudgetNeoLiberalismPoliticalEconomypratidavaniPublicFinanceSocialJusticeWelfareSchemes
Previous Post

ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

Next Post

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

Related Posts

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?
Uncategorized

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

by ಪ್ರತಿಧ್ವನಿ
April 8, 2026
0

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ. ಫೆಬ್ರವರಿ...

Read moreDetails
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

April 8, 2026
ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

April 8, 2026
ಅಮೆರಿಕ–ಇರಾನ್ ಕದನ ತಾತ್ಕಾಲಿಕ ವಿರಾಮ: 10 ಷರತ್ತುಗಳು ಇಲ್ಲಿವೆ 

ಅಮೆರಿಕ–ಇರಾನ್ ಕದನ ತಾತ್ಕಾಲಿಕ ವಿರಾಮ: 10 ಷರತ್ತುಗಳು ಇಲ್ಲಿವೆ 

April 8, 2026
ಅನುಶ್ರೀ ಪ್ರೇಮಕಥೆ ಬಹಿರಂಗ: ಎರಡು ವರ್ಷಗಳ ಡೇಟಿಂಗ್ ಗುಟ್ಟು-ರಟ್ಟು

ಅನುಶ್ರೀ ಪ್ರೇಮಕಥೆ ಬಹಿರಂಗ: ಎರಡು ವರ್ಷಗಳ ಡೇಟಿಂಗ್ ಗುಟ್ಟು-ರಟ್ಟು

April 8, 2026
Next Post
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada