ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಟ್ರಂಪ್ ಅವರು ಸಾವಿನ ಸುದ್ದಿ ದೃಢಪಡಿಸಿದ ಕೆಲವೇ ನಿಮಿಷಗಳಲ್ಲಿ, ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಿಂದ ಪರ್ಷಿಯನ್ ಭಾಷೆಯಲ್ಲಿ ಪೋಸ್ಟ್ ಒಂದು ಹೊರಬಿದ್ದು ಜನರೀಗ ಗೊಂದಲಕ್ಕೊಳಗಾಗಿದ್ದಾರೆ.

ಸೋಶಿಯಲ್ ಖಾತೆಯಲ್ಲಿ ಸಂದೇಶ ಬರೆದಿರುವ ಡೊನಾಲ್ಡ್ ಟ್ರಂಪ್, ಖಮೇನಿ ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಅಂತ್ಯವಾಗಿದೆ,” ಎಂದು ಟ್ರಂಪ್ ಹೇಳಿದ್ದಾರೆ.ಇದು ಕೇವಲ ಇರಾನ್ ಜನರಿಗೆ ಸಂದ ಜಯವಲ್ಲ, ಬದಲಾಗಿ ಖಮೇನಿ ಮತ್ತು ಅವರ ಗೂಂಡಾ ಪಡೆಯಿಂದ ಹತ್ಯೆಗೀಡಾದ ಅಮೆರಿಕನ್ನರು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ಜನರಿಗೆ ಸಿಕ್ಕ ನ್ಯಾಯವಾಗಿದೆ. ಇಸ್ರೇಲ್ ಜೊತೆಗೂಡಿ ನಡೆಸಿದ ಈ ಅತ್ಯಂತ ಅತ್ಯಾಧುನಿಕ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಖಮೇನಿಗೆ ಸಾಧ್ಯವಾಗಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ಈವರೆಗೆ ಇರಾನ್ ಸರ್ಕಾರವು ಖಮೇನಿ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ನನಗೆ ತಿಳಿದಿರುವಂತೆ” ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಜೀವಂತವಾಗಿದ್ದಾರೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರು ಸ್ಪಷ್ಟಪಡಿಸಿದ್ದಾರೆ. ಅವರನ್ನು ‘ಸುರಕ್ಷಿತ ಸ್ಥಳಕ್ಕೆ’ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.






