ಮುಂಬೈ ಎಪ್ರಿಲ್ 2:
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Chhatrapati Shivaji Maharaj International Airport) ನಲ್ಲಿ ಭದ್ರತಾ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಇಂಡಿಗೋ (IndiGo) ವಿಮಾನವೊಂದರೊಳಗೆ ಸಂಶಯಾಸ್ಪದ ‘ಡೇಂಜರ್’ ಎಂದು ಬರೆಯಲ್ಪಟ್ಟ ಚೀಟಿ ಪತ್ತೆಯಾದ ಹಿನ್ನೆಲೆ, ಅಹಮದಾಬಾದ್‌ಗೆ ತೆರಳಬೇಕಿದ್ದ ವಿಮಾನವು ಸುಮಾರು 8 ಗಂಟೆಗಳ ಕಾಲ ವಿಳಂಬಗೊಂಡಿತು.

ಮುಂಬೈನಿಂದ ಅಹಮದಾಬಾದ್‌ಗೆ ಹಾರಾಟಕ್ಕೆ ಸಜ್ಜಾಗಿದ್ದ ವಿಮಾನದ ಶೌಚಾಲಯದಲ್ಲಿ ಈ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ಸ್ಫೋಟಕ ಇರುವ ಸಾಧ್ಯತೆಯ ಸೂಚನೆ ಇದ್ದುದಾಗಿ ಹೇಳಲಾಗಿದೆ. ತಕ್ಷಣ ಎಚ್ಚರಗೊಂಡ ಭದ್ರತಾ ಸಿಬ್ಬಂದಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು.

ನಂತರ ವಿಮಾನವನ್ನು ಪ್ರತ್ಯೇಕ ಐಸೋಲೇಷನ್ ಪ್ರದೇಶಕ್ಕೆ ಕರೆದೊಯ್ದು, ಬಾಂಬ್ ಪತ್ತೆ ದಳ (BDS) ಹಾಗೂ ಶ್ವಾನ ದಳದ ಸಹಾಯದಿಂದ ಸಂಪೂರ್ಣ ತಪಾಸಣೆ ನಡೆಸಲಾಯಿತು. ಹಲವು ಗಂಟೆಗಳ ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದು ಕೇವಲ ಹುಸಿ ಬಾಂಬ್ ಬೆದರಿಕೆ ಎಂದು ದೃಢಪಟ್ಟಿದೆ.
ಈ ಭದ್ರತಾ ಕ್ರಮಗಳ ಪರಿಣಾಮವಾಗಿ ಬೆಳಗ್ಗೆ ಹೊರಡಬೇಕಿದ್ದ ವಿಮಾನವು ಮಧ್ಯಾಹ್ನದ ನಂತರವೇ ಹಾರಾಟ ನಡೆಸಿತು. ಪ್ರಯಾಣಿಕರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಯಿತು.ಇದೀಗ, ಈ ಚೀಟಿಯನ್ನು ಯಾರು ಇಟ್ಟಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಹಾಗೂ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಹುಸಿ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆ, ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸುವ ಅಗತ್ಯತೆ ವ್ಯಕ್ತವಾಗಿದೆ.






