ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆ ವರುಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆಯಷ್ಟೇ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದರು. ಇನ್ನು ಇವತ್ತಿಂದ ಐದು ದಿನಗಳ ಕಾಲ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ, ಸಚಿವ ವಿ ಸೋಮಣ್ಣಗೆ ಮೊದಲ ದಿನವೇ ಪ್ರತಿಭಟನೆಯ ಬಿಸಿ ತಟ್ಟಿದೆ. ವಿ.ಸೋಮಣ್ಣ ಇಂದಿನಿಂದ 5 ದಿನಗಳ ಕಾಲ ವರುಣಾ ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಆದ್ರೆ, ಇಂದು ಪ್ರಚಾರಕ್ಕೆ ಬಂದ ವಿ.ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಘಟನೆ ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ನಡೆದಿದೆ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ವೇಳೆ ಯುವಕನೋರ್ವ, ಸಚಿವ ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಮನವಿ ಮಾಡಿದ್ದಾರೆ. ಬಳಿಕ ಸೋಮಣ್ಣ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಮತ್ತೊಂದು ಯುವಕರ ಗುಂಪು ಸೋಮಣ್ಣ, ಬಿಜೆಪಿ ಪರ ಘೋಷಣೆ ಕೂಗಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಸೋಮಣ್ಣ ಭುಗತಗಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುವುದನ್ನು ಬಿಟ್ಟು ಅಲ್ಲಿಂದ ಬೇರೆ ಗ್ರಾಮಕ್ಕೆ ತೆರಳಿದರು.