ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ವಿಚಾರ ರಾಜ್ಯಾದ್ಯಂತ ಈಗ ಚರ್ಚೆಗೆ ಕಾರಣವಾಗಿದೆ. ಎರಡು ಮಕ್ಕಳ ತಾಯಿ ಸುಚಿತ್ರಾ ಜೊತೆಗಿನ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ಹೊಂದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನ ಕೊಲೆ ಮಾಡಲು ಹೋಗಿ ಆತನ ವಸಂತ ನಾಯ್ಕ್ ಬಲಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ. ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಿದ್ಧಾಪುರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಯೋತಿಷಿ ಕಮಲಾಕರ್ ಭಟ್‌ನನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರೋತ್ಸಾಹಿಸಿ ಬೆಳೆಸಿದ್ದು ಈ ಪ್ರಕರಣದಲ್ಲಿ ಅವರ ಪಾತ್ರವು ಮುಖ್ಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ಕಮಲಾಕರ ಭಟ್ ಎಂಬ ಜೋತಿಷಿ ಭಾಗಿಯಾದ ಕೊಲೆ ಕೇಸ್ ನಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರಂತವರ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ “ಗುರೂಜಿ” ಕಮಲಾಕರ ಭಟ್ಟನನ್ನು ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಒರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಇದಕ್ಕೆ ಸುರೇಶ್ ಕುಮಾರ್ ಉತ್ತರಿಸಿದ್ದು,ನಾನು ಜ್ಯೋತಿಷ್ಯವನ್ನಾಗಲಿ ತುಂಬಾ ನಂಬುವನೂ ಅಲ್ಲ, ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ ನೈತಿಕ ಹೊಣೆ ಹೊರಬೇಕು ಎಂಬ ನಿಮ್ಮ ವಾದ ತಮಾಷೆದಾಯಕ.ಇನ್ನಾದರೂ ಆಧಾರರಹಿತ ಆರೋಪಗಳನ್ನು ನಿಲ್ಲಿಸಿ, ಘನತೆಯುತ ರಾಜಕಾರಣ ಮಾಡಿ ಎಂದಿದ್ದಾರೆ.

