ಕನ್ನಡ ಚಿತ್ರರಂಗದಲ್ಲಿ ‘ಬಾವ’ ಪಾತ್ರದ ಮೂಲಕ ಜನರನ್ನು ನಗೆಗಡಲಿನಲ್ಲಿ ತೇಲಿಸಿದ್ದ ಪುಪ್ಪರಾಜ್ ತಮ್ಮ ವೈವಾಹಿಕ ಜೀವನದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿಧವೆಯನ್ನು ವಿವಾಹವಾದ ಹಿನ್ನೆಲೆ ಮತ್ತು ಅದರ ಹಿಂದಿರುವ ಉದ್ದೇಶವನ್ನು ಅವರು ವಿವರಿಸಿದ್ದಾರೆ.ಒಂದು ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮಗೆ ಮದುವೆಯಾಗುವ ಆಸಕ್ತಿ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಬಂಧಿಕರ ಒತ್ತಾಯದಿಂದ ಮದುವೆ ಬಗ್ಗೆ ಯೋಚನೆ ಶುರು ಮಾಡಿದ ಅವರು, ಅನಾಥಾಶ್ರಮದ ಹುಡುಗಿಯನ್ನು ಮದುವೆಯಾಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಆದರೆ ಹಲವು ಅನಾಥಾಶ್ರಮಗಳನ್ನು ಸಂಪರ್ಕಿಸಿದರೂ ಸೂಕ್ತ ವ್ಯಕ್ತಿ ದೊರಕಲಿಲ್ಲ ಎಂದು ತಿಳಿಸಿದ್ದಾರೆ.

ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆ ಹೆಚ್ಚುತ್ತಿರುವುದು ನೋವು ತಂದಿದ್ದು, ಅನಾಥಾಶ್ರಮಗಳಲ್ಲಿ ಹೆಣ್ಣುಮಕ್ಕಳ ಕೊರತೆ ಉಂಟಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ನಂತರ, ಗಂಡನನ್ನು ಕಳೆದುಕೊಂಡ ಮಹಿಳೆಯನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.“ಗಂಡ ಸತ್ತ ಮಹಿಳೆಗೆ ಹೊಸ ಜೀವನ ಕೊಡಬಾರದೇ?” ಎಂಬ ಪ್ರಶ್ನೆಯನ್ನು ತಾವು ಕೇಳಿಕೊಂಡು ಈ ನಿರ್ಧಾರ ತೆಗೆದುಕೊಂಡೆ ಎಂದು ಪುಷ್ಪರಾಜ್ ತಿಳಿಸಿದ್ದಾರೆ.

ಒಂದು ನಾಲ್ಕು ವರ್ಷದ ಮಗುವಿನೊಂದಿಗೆ ಇದ್ದ ಮಹಿಳೆಯನ್ನು ವಿವಾಹವಾದ ಬಳಿಕ ಇದೀಗ ಸಂತೋಷಕರ ಕುಟುಂಬ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.“ಸಮಾಜ ಏನು ಹೇಳುತ್ತದೆ ಎನ್ನುವುದಕ್ಕಿಂತ ನನ್ನ ನಿರ್ಧಾರ ಮುಖ್ಯ. ಇದು ನನ್ನ ಜೀವನ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಅವರ ಮಗ ಪಿಯುಸಿ ಓದುತ್ತಿದ್ದು, ಮಗಳು ಎಲ್ಕೆಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.






