ಕುಸಿತದ ಹಾದಿಯಲ್ಲಿ ಸಾಗಿರುವ ಷೇರುಪೇಟೆಯಲ್ಲಿ ಕರಡಿ ಹಿಡಿತ ಬಿಗಿಗೊಂಡಿದೆ. ಶುಕ್ರವಾರ ವಾರಾಂತ್ಯದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ತೀವ್ರ ವಾಗಿ ಕುಸಿದಿದ್ದು ಶೇ.3ರಷ್ಟು ಇಳಿಕೆ ದಾಖಲಿಸಿವೆ. ಕರೋನೋತ್ತರ ಅವಧಿಯಲ್ಲಿ ಇದು ಒಂದೇ ದಿನದ ಗರಿಷ್ಠ ಕುಸಿತವಾಗಿದೆ.
ಒಂದೇ ದಿನದಲ್ಲಿ ಹೋಡಿಕೆದಾರರ ಸುಮಾರು 6 ಲಕ್ಷ ಕೋಟಿ ರೂಪಾಯಿ ಮೌಲ್ಯದಷ್ಟು ಸಂಪತ್ತು ನಾಶವಾಗಿದೆ. ಅಕ್ಟೋಬರ್ 19 ರಂದು ಷೇರುಪೇಟೆ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗರಿಷ್ಠ ಮಟ್ಟಕ್ಕೆ ಏರಿ ಸಾರ್ವಕಾಲಿಕ ದಾಖಲೆ ಮಾಡಿದ್ದವು. ಅಂದಿನಿಂದಲೂ ಮಾರುಕಟ್ಟೆ ಇಳಿಜಾರಿನಲ್ಲಿ ಸಾಗುತ್ತಿದೆ.
ಶುಕ್ರವಾರದ ಕುಸಿತವೂ ಸೇರಿದಂತೆ ಒಟ್ಟು ಶೇ.8ರಷ್ಟು ಕುಸಿತ ದಾಖಲಿಸಿದ್ದು ಹೂಡಿಕೆದಾರರ 16 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ನಾಶವಾಗಿದೆ. ಬರುವ ದಿನಗಳಲ್ಲಿ ಪೇಟೆ ಮತ್ತಷ್ಟು ಕುಸಿತ ದಾಖಲಿಸಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1689 ಅಂಶಗಳು ಮತ್ತು ನಿಫ್ಟಿ 509 ಅಂಶಗಳಷ್ಟು ಕುಸಿದಿವೆ. ಬ್ಯಾಂಕ್ ನಿಫ್ಟಿ ಕೂಡ 1340 ಅಂಶ ಕುಸಿದಿದೆ.

ದಿನವಿಡೀ ಕುಸಿತದ ಹಾದಿಯಲ್ಲಿ ಪೇಟೆ ಸಾಗಿದ್ದರಿಂದ ಫಾರ್ಮ ವಲಯದ ಷೇರುಗಳ ಹೊರತುಪಡಿಸಿ ಎಲ್ಲಾ ಸೂಚ್ಯಂಕಗಳು ಶೇ. 1 ರಿಂದ5 ರಷ್ಟು ಕುಸಿತ ದಾಖಲಿಸಿದವು.
62,000 ಗಡಿದಾಟಿದ್ದ ಸೆನ್ಸೆಕ್ಸ್ 57,000 ಮಟ್ಟಕ್ಕೆ, 18,600ಮಟ್ಟಕ್ಕೆ ಏರಿದ್ದ ನಿಫ್ಟಿ 17,000 ಮಟ್ಟಕ್ಕೆ ಇಳಿದಿವೆ. ದಿನದ ವಹಿವಾಟಿನಲ್ಲಿ ಔಷಮೋದ್ಯಮ ಕಂಪನಿಗಳ ಷೇರುಗಳು ಶೇ.1ರಿಂದ 5ರಷ್ಟು ಏರಿಕೆ ದಾಖಲಿಸಿದವು. ಈ ನಡುವೆ ಕಚ್ಚಾ ತೈಲ ದರ ಶೇ.6ರಷ್ಟು ಕುಸಿದಿದೆ.
ಚೀನಿವಾರ ಪೇಟೆಯಲ್ಲಿ ಚಿನ್ನದ ದರ ಪ್ರತಿ10ಗ್ರಾಮ್ ಗೆ 750ರುಪಾಯಿಗಳಷ್ಟು ಏರಿಕೆ ದಾಖಲಿಸಿದೆ. ಡಾಲರ್ ವಿರುದ್ದ ರುಪಾಯಿ ಮೌಲ್ಯ 36 ಪೈಸೆಯಷ್ಟು ಕುಸಿದಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ 75ಕ್ಕೆ ಕುಸಿಯುವ ಹಾದಿಯಲ್ಲಿದೆ. ಶುಕ್ರವಾರದ ವಹಿವಾಟಿನಲ್ಲಿ ರುಪಾಯಿ 74.87ರ ಆಜುಬಾಜಿನಲ್ಲಿ ವಹಿವಾಟು ನಡೆಸಿದೆ.






