ನವದೆಹಲಿ: ಹೊಸ ಪಾಸ್ಪೋರ್ಟ್ ಪಡೆಯಲು ಅಥವಾ ಪಾಸ್ಪೋರ್ಟ್ ಸಂಬಂಧಿತ ಸೇವೆಗಳಿಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಜುಲೈ 1ರಿಂದ ಪಾಸ್ಪೋರ್ಟ್ ಅರ್ಜಿ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ವಿವಿಧ ಸೇವೆಗಳ ದರದಲ್ಲಿ ಗಮನಾರ್ಹ ಏರಿಕೆ ಮಾಡಲಾಗಿದೆ.
ಕೇಂದ್ರ ವಿದೇಶಾಂಗ ಸಚಿವಾಲಯ (MEA) ‘ಪಾಸ್ಪೋರ್ಟ್ (ತಿದ್ದುಪಡಿ) ನಿಯಮಗಳು–2026’ ಅಡಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ಶುಲ್ಕಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಇದರಿಂದ ಹೊಸ ಪಾಸ್ಪೋರ್ಟ್, ತತ್ಕಾಲ್ ಸೇವೆ, ಪಾಸ್ಪೋರ್ಟ್ ಮರುಪಡೆಯುವಿಕೆ ಸೇರಿದಂತೆ ಹಲವು ಸೇವೆಗಳಿಗೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ.18 ವರ್ಷ ಮೇಲ್ಪಟ್ಟವರ 36 ಪುಟಗಳ ಸಾಮಾನ್ಯ ಪಾಸ್ಪೋರ್ಟ್ಗೆ ರೂ.2,500 ಹಾಗೂ ತತ್ಕಾಲ್ ಸೇವೆಗೆ ರೂ.5,000 ಶುಲ್ಕ ನಿಗದಿಪಡಿಸಲಾಗಿದೆ.
ಹೆಚ್ಚು ವಿದೇಶ ಪ್ರಯಾಣ ಮಾಡುವವರಿಗಾಗಿ ನೀಡಲಾಗುವ 60 ಪುಟಗಳ ಜಂಬೋ ಪಾಸ್ಪೋರ್ಟ್ಗೆ ಸಾಮಾನ್ಯ ಸೇವೆಯಲ್ಲಿ ರೂ.3,500 ಮತ್ತು ತತ್ಕಾಲ್ ಯೋಜನೆಯಲ್ಲಿ ರೂ.6,000 ಶುಲ್ಕ ವಿಧಿಸಲಾಗುತ್ತದೆ.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ 36 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಸೇವೆಯಲ್ಲಿ ರೂ.1,750 ಹಾಗೂ ತತ್ಕಾಲ್ ಯೋಜನೆಯಲ್ಲಿ ರೂ.4,250 ಶುಲ್ಕ ನಿಗದಿಯಾಗಿದೆ.
ಪಾಸ್ಪೋರ್ಟ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ ಹೊಸ ಪಾಸ್ಪೋರ್ಟ್ ಪಡೆಯಲು ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ. 36 ಪುಟಗಳ ಬದಲಿ ಪಾಸ್ಪೋರ್ಟ್ಗೆ ಸಾಮಾನ್ಯ ಸೇವೆಯಲ್ಲಿ ರೂ.5,000 ಹಾಗೂ ತತ್ಕಾಲ್ನಲ್ಲಿ ರೂ.7,500 ಶುಲ್ಕ ನಿಗದಿಯಾಗಿದೆ. 60 ಪುಟಗಳ ಬದಲಿ ಪಾಸ್ಪೋರ್ಟ್ಗೆ ಕ್ರಮವಾಗಿ ರೂ.6,000 ಮತ್ತು ರೂ.8,500 ಶುಲ್ಕ ವಿಧಿಸಲಾಗುತ್ತದೆ.
ಇದೇ ವೇಳೆ, ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC), ಸರೆಂಡರ್ ಸರ್ಟಿಫಿಕೇಟ್, ತುರ್ತು ಪ್ರಮಾಣಪತ್ರ ಹಾಗೂ ಗುರುತಿನ ಪ್ರಮಾಣಪತ್ರ ಸೇರಿದಂತೆ ಇತರೆ ಸೇವೆಗಳ ಶುಲ್ಕದಲ್ಲೂ ಪರಿಷ್ಕರಣೆ ಮಾಡಲಾಗಿದೆ.ಇತ್ತೀಚೆಗೆ ನಡೆದ ‘ಪಾಸ್ಪೋರ್ಟ್ ಸೇವಾ ದಿವಸ್’ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವಾಲಯ ಮತ್ತೊಂದು ಮಹತ್ವದ ಸ್ಪಷ್ಟನೆ ನೀಡಿದೆ. ಪಾಸ್ಪೋರ್ಟ್ ಎಂಬುದು ಕೇವಲ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಬಳಸುವ ದಾಖಲೆಯಾಗಿದ್ದು, ಅದು ಭಾರತದ ಪೌರತ್ವವನ್ನು ಸಾಬೀತುಪಡಿಸುವ ಸ್ವತಂತ್ರ ದಾಖಲೆಯಲ್ಲ ಎಂದು ತಿಳಿಸಿದೆ.ಜುಲೈ 1ರಿಂದ ಹೊಸ ಶುಲ್ಕ ಜಾರಿಯಾಗಲಿರುವುದರಿಂದ, ಅರ್ಜಿ ಸಲ್ಲಿಸಲು ಸಿದ್ಧರಾಗಿರುವವರು ಅದಕ್ಕೂ ಮುನ್ನವೇ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ವೆಚ್ಚವನ್ನು ತಪ್ಪಿಸಿಕೊಳ್ಳಬಹುದು.






