ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಅಂತಿಮ ಹಂತ ತಲುಪಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದ್ದು, ಇಂದು ನಡೆಯಬಹುದಾದ ಸುದ್ದಿಗೋಷ್ಠಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೇ ಗುರುವಾರ ರಾಜೀನಾಮೆ ನೀಡಬಹುದು ಎಂಬ ಊಹಾಪೋಹಗಳು ಮತ್ತಷ್ಟು ಗಟ್ಟಿಯಾಗಿವೆ.

ಈ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಉಪಹಾರ ಕೂಟ ಏರ್ಪಡಿಸಿದ್ದು, ಬೆಳಗ್ಗೆ 9 ಗಂಟೆಗೆ ಸಭೆ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ ರಾತ್ರಿ ದೆಹಲಿಯಲ್ಲೇ ತಂಗಿದ್ದ ಡಿಕೆ ಶಿವಕುಮಾರ್ ಇಂದು ಬೆಳಗಿನ ಜಾವ ಬೆಂಗಳೂರಿಗೆ ಮರಳಲಿದ್ದು, ಬೆಳಗ್ಗೆ 8 ಗಂಟೆ ಸುಮಾರಿಗೆ ಆಗಮಿಸುವ ನಿರೀಕ್ಷೆ ಇದೆ. ಇದೇ ವೇಳೆ ಸಿದ್ದರಾಮಯ್ಯ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಬಂದಿದ್ದು, ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಎಚ್.ಕೆ. ಪಾಟೀಲ್ ಪೊನ್ನಣ್ಣ ಅವರೊಂದಿಗೆ ಒಂದೇ ವಾಹನದಲ್ಲಿ ಸಂಚರಿಸಿರುವುದು ರಾಜಕೀಯ ಕುತೂಹಲ ಹೆಚ್ಚಿಸಿದೆ.ಸಿದ್ದರಾಮಯ್ಯ ಆಪ್ತ ವಲಯದ ಕೆಲ ಸಚಿವರು ರಾಜೀನಾಮೆ ನೀಡಬಾರದೆಂದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ತಳ್ಳಿಹಾಕುವ ಮನಸ್ಥಿತಿಯಲ್ಲಿ ಸಿಎಂ ಇಲ್ಲ ಎಂಬ ಮಾಹಿತಿ ಹರಿದಾಡುತ್ತಿದೆ.

ಮಂಗಳವಾರ ದೆಹಲಿಯಲ್ಲಿ ಸುಮಾರು ಏಳು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯಲ್ಲಿ ರಾಜ್ಯ ರಾಜಕೀಯದ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಕಾಂಗ್ರೆಸ್ ನಾಯಕರು ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಸಚಿವರು ಮತ್ತು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.






