ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕುರಿತು ಮತ್ತೆ ಭಾರೀ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಜೊತೆ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳು ಮತ್ತಷ್ಟು ಗಟ್ಟಿಯಾಗಿವೆ.ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಕೆಲವು ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹಕ್ಕುಪತ್ರಕ್ಕೆ ಒಲವು ತೋರಿದೆ ಎನ್ನಲಾಗುತ್ತಿದೆ.

ಎನ್ಡಿಟಿವಿ ವರದಿ ಪ್ರಕಾರ, ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸ್ಥಾನ ಹಾಗೂ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನೀಡುವ ಪ್ರಸ್ತಾಪವೂ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳಲಾಗಿದೆ. ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ರಾಜೀನಾಮೆ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬಂದಿವೆ.ಆದರೆ ಈ ಎಲ್ಲ ಊಹಾಪೋಹಗಳನ್ನು ಕಾಂಗ್ರೆಸ್ ನಾಯಕರು ಅಧಿಕೃತವಾಗಿ ತಳ್ಳಿಹಾಕಿದ್ದಾರೆ. ದೆಹಲಿ ಸಭೆ ಕೇವಲ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳ ಕುರಿತು ನಡೆದದ್ದು ಮಾತ್ರ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ “ನಾಯಕತ್ವ ಬದಲಾವಣೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಯಾವುದೇ ವಾಸ್ತವಿಕತೆ ಇಲ್ಲ” ಎಂದು ಹೇಳಿದ್ದಾರೆ. ಇದಾದರೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ನಡೆಯುತ್ತಿರುವ ಒಳರಾಜಕೀಯ ಪೈಪೋಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ, ನಾಯಕತ್ವ ಬದಲಾವಣೆ ಸಾಧ್ಯತೆ ಕುರಿತ ಚರ್ಚೆಗಳು ಇನ್ನಷ್ಟು ವೇಗ ಪಡೆದಿವೆ.






