ಕರ್ನಾಟಕ ಸರ್ಕಾರ ಅರಣ್ಯ ಭೂಮಿ ಒತ್ತುವರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 2015ರ ನಂತರ ನಡೆದ ಎಲ್ಲಾ ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸುವಂತೆ ಅವರು ಆದೇಶಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಡೆದ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿಗಳ ವಿರುದ್ಧ “ಶೂನ್ಯ ಸಹಿಷ್ಣುತೆ” ನೀತಿ ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. ಹೊಸದಾಗಿ ಯಾವುದೇ ಅರಣ್ಯ ಒತ್ತುವರಿ ನಡೆಯದಂತೆ ತಡೆಯುವ ಜೊತೆಗೆ, ಇತ್ತೀಚಿನ ಅತಿಕ್ರಮಣಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ 2015ರ ಮೊದಲು ಸುಮಾರು 2 ಲಕ್ಷ ಏಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವ ಮಾಹಿತಿ ಲಭ್ಯವಿದೆ ಎಂದು ಖಂಡ್ರೆ ಹೇಳಿದರು. ಜೀವನೋಪಾಯಕ್ಕಾಗಿ ಮೂರು ಏಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿಕೊಂಡಿರುವ ಕುಟುಂಬಗಳನ್ನು ಪರ್ಯಾಯ ವ್ಯವಸ್ಥೆ ಮಾಡುವವರೆಗೆ ತೆರವುಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ. ಆದರೆ ಮೂರು ಏಕರೆಗಿಂತ ಹೆಚ್ಚು ಅರಣ್ಯ ಭೂಮಿ ಅತಿಕ್ರಮಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಮುಂಚೂಣಿ ಸಿಬ್ಬಂದಿಗೆ ಹೆಚ್ಚಿನ ಭದ್ರತಾ ಸೌಲಭ್ಯ ಕಲ್ಪಿಸುವುದಕ್ಕೂ ಸಚಿವರು ಆದ್ಯತೆ ನೀಡಿದರು. ವಿದ್ಯುತ್ ಶಾಕ್ ಸ್ಟಿಕ್, ಮಳೆ ರಕ್ಷಣಾ ಜಾಕೆಟ್ ಹಾಗೂ ಸೂಕ್ತ ಪಾದರಕ್ಷೆಗಳನ್ನು ಒದಗಿಸಲು ಸೂಚಿಸಿದರು. ಆನೆ ಕಾರ್ಯಪಡೆ, ಅಕ್ರಮ ಬೇಟೆ ತಡೆ ತಂಡ ಸೇರಿದಂತೆ ಅಪಾಯಕಾರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ರಿಸ್ಕ್ ಅಲವಾನ್ಸ್ ಹಾಗೂ ಕಲ್ಯಾಣ ಸೌಲಭ್ಯಗಳನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ, ಪುತ್ತೂರು, ಹೆಬ್ರಿ, ಸುಳ್ಯ, ಬೆಳ್ತಂಗಡಿ, ಕಾರ್ಕಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪರಿಸರ ಮಾಲಿನ್ಯ ಉಂಟುಮಾಡುತ್ತಿರುವ ಮೀನು ಕಾರ್ಖಾನೆಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚಿಸಿ, ನದಿಗಳ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.






