ಬೆಂಗಳೂರು :
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದರೂ, ಈ ತೀರ್ಪು ಮುಂದಿನ ದಿನಗಳಲ್ಲಿ ದರ್ಶನ್ ಪರವಾಗಿಯೇ ಕೆಲಸ ಮಾಡುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆ ಇದೀಗ ಕಾನೂನು ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ಆದೇಶದಲ್ಲಿ, ಪ್ರಕರಣದ 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಜೊತೆಗೆ, ಒಂದು ವರ್ಷದೊಳಗೆ ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಂಡುಬರದಿದ್ದರೆ ದರ್ಶನ್ ಅವರು ಮರುಬಾರಿಯೂ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ತೀರ್ಪಿನ ಬೆನ್ನಲ್ಲೇ ಪ್ರತಿಧ್ವನಿ ಜೊತೆ ಮಾತನಾಡಿದ ವಕೀಲ ಬಾಲನ್, “ಹೊರಗೆ ನೋಡಲು ಇದು ದರ್ಶನ್‌ಗೆ ಹಿನ್ನಡೆಯಂತೆ ಕಾಣಬಹುದು. ಆದರೆ ಕಾನೂನು ದೃಷ್ಟಿಯಿಂದ ನೋಡಿದರೆ ಸುಪ್ರೀಂ ಕೋರ್ಟ್ ನೀಡಿರುವ ಅವಕಾಶ ದರ್ಶನ್ ಪರವಾಗಿಯೇ ಇದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.“ಪ್ರಕರಣದಲ್ಲಿ ಒಟ್ಟು ನೂರಾರು ಸಾಕ್ಷಿಗಳಿದ್ದಾರೆ. ಇದರಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನೇ ಒಂದು ವರ್ಷದೊಳಗೆ ಪೂರ್ಣಗೊಳಿಸುವುದು ಅಷ್ಟು ಸುಲಭವಲ್ಲ. ಈಗಾಗಲೇ ಏಳು ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಹೀಗಾಗಿ ನ್ಯಾಯಾಲಯ ನಿಗದಿಪಡಿಸಿದ ಗಡುವಿನೊಳಗೆ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ” ಎಂದು ಅವರು ವಿಶ್ಲೇಷಿಸಿದ್ದಾರೆ.

ವಿಚಾರಣೆ ವಿಳಂಬವಾಗುತ್ತಿರುವುದರ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ಪ್ರಗತಿ ನಿಧಾನಗತಿಯಲ್ಲಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠ, ಅಗತ್ಯವಿದ್ದರೆ ದಿನನಿತ್ಯದ ವಿಚಾರಣೆ ನಡೆಸುವಂತೆ ಟ್ರಯಲ್ ಕೋರ್ಟ್‌ಗೆ ಸೂಚನೆ ನೀಡಿದೆ. ಇದಲ್ಲದೆ, ಪ್ರಕರಣದ ವಿಚಾರಣೆ ನಡೆಯುತ್ತಿರುವ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಖಾಯಂ ನ್ಯಾಯಾಧೀಶರಿಲ್ಲದಿರುವುದರಿಂದ ವಿಳಂಬವಾಗುತ್ತಿದೆ ಎಂಬ ಅಂಶವೂ ವಿಚಾರಣೆಯಲ್ಲಿ ಪ್ರಸ್ತಾಪವಾಗಿತ್ತು. ಈ ಹಿನ್ನೆಲೆ ಖಾಲಿ ಇರುವ ನ್ಯಾಯಾಧೀಶರ ಹುದ್ದೆಯನ್ನು ತಕ್ಷಣ ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಸೂಚಿಸಿದೆ.

ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ, “ಏಳು ತಿಂಗಳಾದರೂ ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿಲ್ಲ. ಪ್ರಕರಣದ ವೇಗ ತುಂಬಾ ನಿಧಾನವಾಗಿದೆ” ಎಂದು ವಾದ ಮಂಡಿಸಿದ್ದರು. ಆದರೆ, ಸಾಕ್ಷ್ಯ ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿತು. ಈ ಬೆಳವಣಿಗೆಗಳ ಮಧ್ಯೆ, “ಒಂದು ವರ್ಷದ ಬಳಿಕ ವಿಚಾರಣೆಯ ಪ್ರಗತಿಯನ್ನು ಆಧರಿಸಿ ದರ್ಶನ್ ಮತ್ತೆ ಜಾಮೀನು ಪಡೆಯುವ ಅವಕಾಶ ಹೆಚ್ಚಿದೆ” ಎಂಬ ಅಭಿಪ್ರಾಯವನ್ನು ಹಲವು ಕಾನೂನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.






