ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರನ್ನು ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ಕುರಿತು ಕುಟುಂಬದವರು ಅಥವಾ ಆಸ್ಪತ್ರೆ ಮೂಲಗಳಿಂದ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಅವರ ನಿಧನದ ಸುದ್ದಿಯ ನಿಜಾಸ್ತಿತ್ವ ಕುರಿತು ಸ್ಪಷ್ಟನೆ ನಿರೀಕ್ಷೆಯಲ್ಲಿದೆ.ದಿಲೀಪ್ ರಾಜ್ ಸಾವಿನ ಸುದ್ದಿ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಆಘಾತ ಮೂಡಿಸಿದ್ದು, ಸ್ನೇಹಿತರು ಹಾಗೂ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಮಾಹಿತಿ ಲಭ್ಯವಾಗಿದೆ.
1978ರ ಸೆಪ್ಟೆಂಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದ್ದ ದಿಲೀಪ್ ರಾಜ್, ಕಾಲೇಜು ದಿನಗಳಲ್ಲಿಯೇ ನೃತ್ಯ ಮತ್ತು ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಬಳಿಕ ಕಿರುತೆರೆ ಮೂಲಕ ಅಭಿನಯ ಜೀವನ ಆರಂಭಿಸಿ, ‘ಕಂಬದ ಮನೆ’, ‘ಜನನಿ’, ‘ಅರ್ಧ ಸತ್ಯ’, ‘ರಂಗೋಲಿ’, ‘ಕುಂಕುಮ ಭಾಗ್ಯ’, ‘ಮಾಂಗಲ್ಯ’, ‘ಪ್ರೀತಿಗಾಗಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದರು.

2005ರಲ್ಲಿ ಬಿಡುಗಡೆಯಾದ ‘ಭಾಯ್ ಫ್ರೆಂಡ್’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಅವರು, ‘ಮಿಲನ’ ಸಿನಿಮಾದ ಖಳನಾಯಕ ಪಾತ್ರದ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ‘7 ಓ ಕ್ಲಾಕ್’, ‘ಕ್ಷಣ ಕ್ಷಣ’ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದರು.
‘ರಥಸಪ್ತಮಿ’ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದ ದಿಲೀಪ್ ರಾಜ್, ನಿರೂಪಕರಾಗಿಯೂ ಕೆಲಸ ಮಾಡಿದ್ದರು. ಜೀ ಕನ್ನಡ ವಾಹಿನಿಯ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದರ ಜೊತೆಗೆ ಅದನ್ನು ನಿರ್ಮಾಣವೂ ಮಾಡಿದ್ದರು. ಇತ್ತೀಚೆಗೆ ಪ್ರಸಾರವಾಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.





