ಧಾರವಾಡ ಜಿಲ್ಲೆಯ ರಾಜಕೀಯ ವಲಯವನ್ನು ಕದಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಕೊನೆಗೂ ತೀರ್ಪು ಹೊರಬಿದ್ದಿದೆ. ದೀರ್ಘಕಾಲದ ಕಾನೂನು ಹೋರಾಟದ ಬಳಿಕ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ರನ್ನು ದೋಷಿ ಎಂದು ಘೋಷಿಸಿದೆ.

ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ನೀಡಿದ ತೀರ್ಪಿನಲ್ಲಿ, ವಿನಯ್ ಕುಲಕರ್ಣಿ ವಿರುದ್ಧ ಕ್ರಿಮಿನಲ್ ಸಂಚು ಆರೋಪ ಸಾಬೀತಾಗಿದೆ ಎಂದು ಹೇಳಲಾಗಿದೆ. ಜೊತೆಗೆ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ವಾಸುದೇವ ರಾಮ ನಿಲೇಕಣಿ ಹಾಗೂ ಸೋಮಶೇಖರ್ ಬಸಪ್ಪ ನ್ಯಾಮಗೌಡ ಅವರನ್ನು ನಿರ್ದೋಷಿಗಳೆಂದು ನ್ಯಾಯಾಲಯ ಬಿಡುಗಡೆ ಮಾಡಿದೆ.ಈ ಪ್ರಕರಣವನ್ನು ತನಿಖೆ ನಡೆಸಿದ್ದ CBI ಅಧಿಕಾರಿಗಳಿಗೆ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯ ಸೂಚನೆ ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಯೋಗೇಶ್ ಗೌಡ ಅವರನ್ನು 2016ರಲ್ಲಿ ಧಾರವಾಡದಲ್ಲಿ ಹತ್ಯೆ ಮಾಡಲಾಗಿದ್ದು, ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ತನಿಖೆಯನ್ನು ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು.ಇನ್ನೊಂದೆಡೆ, ತೀರ್ಪು ಪ್ರಕಟವಾಗುತ್ತಿದ್ದಂತೆಯೇ ವಿನಯ್ ಕುಲಕರ್ಣಿ ಅವರ ಕುಟುಂಬಸ್ಥರು ಭಾವುಕರಾಗಿ ಕಣ್ಣೀರು ಹಾಕಿದ್ದು, ಕುಟುಂಬದವರಿಂದ ಅವರನ್ನು ಸಮಾಧಾನಪಡಿಸಲಾಯಿತು.ಬಹು ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಮುಂದಿನ ಶಿಕ್ಷೆ ಘೋಷಣೆಯ ಮೇಲೆ ಎಲ್ಲರ ಕಣ್ಣಿದೆ.






