ಚಿತ್ರದುರ್ಗ:
ಐತಿಹಾಸಿಕ ಹಾಗೂ ಧಾರ್ಮಿಕ ವೈಭವಕ್ಕೆ ಹೆಸರಾಗಿರುವ ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರಾದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ದೇವಿಯರ ಭೇಟಿ ಉತ್ಸವವು ಭಕ್ತಿಭಾವದಿಂದ, ಸಂಭ್ರಮ–ಸಡಗರದ ನಡುವೆ ವಿಜೃಂಭಣೆಯಿಂದ ನಡೆಯಿತು. ಕರುವಿನಕಟ್ಟೆ ವೃತ್ತದಲ್ಲಿ ನಡೆದ ಈ ಅಪರೂಪದ ಸಂಭ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ನವದುರ್ಗೆಯರಲ್ಲಿ ಹಿರಿಯಳಾದ ಶ್ರೀ ಏಕನಾಥೇಶ್ವರಿ ದೇವಿಯ ಸಮ್ಮುಖದಲ್ಲಿ ಅಕ್ಕ–ತಂಗಿಯರಾದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ದೇವತೆಗಳು ಎದುರುಬದುರು ಭೇಟಿ ಆದ ಕ್ಷಣ ಭಕ್ತರಲ್ಲಿ ಆನಂದದ ಅಲೆ ಮೂಡಿಸಿತು. ‘ಉಧೋ ಉಧೋ’ ಎಂಬ ಘೋಷಣೆಗಳ ನಡುವೆ ಭಕ್ತರು ಕೈಮುಗಿದು ದೇವಿಯರಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು.

ಈ ಅಕ್ಕ–ತಂಗಿಯರ ಭೇಟಿಗೆ ವಿಶಿಷ್ಟ ಪೌರಾಣಿಕ ಹಿನ್ನೆಲೆ ಇದೆ. ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಚೌಡಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ ಹಾಗೂ ಕಾಳಿ ದೇವಿಯರು ಸೇರಿ ನವದುರ್ಗೆಯರಾಗಿ ಆರಾಧಿಸಲ್ಪಡುತ್ತಾರೆ.ತಿಪ್ಪಿನಘಟ್ಟಮ್ಮ ದೇವಿಗೆ ಏಳು ಮಕ್ಕಳಿದ್ದರೆ, ಬರಗೇರಮ್ಮ ದೇವಿಗೆ ಸಂತಾನವಿರಲಿಲ್ಲ. ಆದರೂ ತಂಗಿಯ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಬರಗೇರಮ್ಮ, ಅವರೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಳು. ಈ ಅಕ್ಕ–ತಂಗಿಯರ ಪ್ರೀತಿ ನೋಡಿ ಅಸೂಯೆಗೊಂಡ ಮತ್ತೊಬ್ಬ ದೇವತೆ ತಿಪ್ಪಿನಘಟ್ಟಮ್ಮನ ಮನಸ್ಸಿನಲ್ಲಿ ಸಂಶಯ ಹುಟ್ಟಿಸಿದಳು.

ಅದರ ಪರಿಣಾಮವಾಗಿ, ತಿಪ್ಪಿನಘಟ್ಟಮ್ಮ ತನ್ನ ಮಕ್ಕಳನ್ನು ಅಕ್ಕನಿಂದ ದೂರ ಇಡಲು ಪ್ರಯತ್ನಿಸಿದಳು. ಇದರಿಂದ ಬೇಸರಗೊಂಡ ಬರಗೇರಮ್ಮ ಸಿಟ್ಟಿನಲ್ಲಿ ಶಾಪ ನೀಡಿ, ‘ನಿನ್ನ ಮಕ್ಕಳು ಕಲ್ಲಾಗಲಿ’ ಎಂದು ಹೇಳಿ ದೂರವಳಿದಳು. ಈ ಘಟನೆ ಅಕ್ಕ–ತಂಗಿಯರ ನಡುವಿನ ಬೇಸರಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಹಿರಿಯ ದೇವಿಯಾದ ಏಕನಾಥೇಶ್ವರಿ ಮಧ್ಯಪ್ರವೇಶಿಸಿ, ಊರಿನ ಒಳಿತಿಗಾಗಿ ವರ್ಷಕ್ಕೊಮ್ಮೆ ತಮ್ಮ ಸಮ್ಮುಖದಲ್ಲಿ ಅಕ್ಕ–ತಂಗಿಯರು ಭೇಟಿಯಾಗಬೇಕೆಂದು ಆದೇಶಿಸಿದ್ದಾಳೆ ಎಂಬ ನಂಬಿಕೆ ಇದೆ. ಅದರಂತೆ ಪ್ರತಿವರ್ಷ ಈ ಭೇಟಿ ಉತ್ಸವ ರಾಜಬೀದಿಯಲ್ಲಿ ನಡೆಯುತ್ತದೆ.
ಭಕ್ತರ ನಂಬಿಕೆಯಂತೆ, ಈ ಭೇಟಿಯ ಕ್ಷಣವನ್ನು ಮೇಲುದುರ್ಗದಿಂದ ಏಕನಾಥೇಶ್ವರಿ ದೇವಿ ವೀಕ್ಷಿಸುತ್ತಾಳೆ. ಈ ಸಮಯದಲ್ಲಿ ದೇವಿಯರ ದರ್ಶನ ಮಾಡಿದರೆ ಕುಟುಂಬದಲ್ಲಿ ಐಶ್ವರ್ಯ, ಸಂತಾನಭಾಗ್ಯ ಹಾಗೂ ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಉತ್ಸವದ ಅಂಗವಾಗಿ ದೇವಿಯರ ಮೆರವಣಿಗೆ ಭಕ್ತರನ್ನು ಆಕರ್ಷಿಸಿತು. ಸಾಂಪ್ರದಾಯಿಕ ವಾದ್ಯಗೋಷ್ಠಿ, ಡೊಳ್ಳು–ಕುಣಿತ, ಭಜನೆ ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಉತ್ಸವದ ಕಳೆ ಹೆಚ್ಚಿಸಿತು. ಮಹಿಳೆಯರು ಕಂಕಣ, ಹೂಮಾಲೆ ಹಾಗೂ ಕರ್ಪೂರಾರತಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.ನಗರಸಭೆಯಿಂದ ಕುಡಿಯುವ ನೀರು, ವೈದ್ಯಕೀಯ ಸಹಾಯ, ಭದ್ರತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿದ್ದರು.

ಈ ಅಕ್ಕ–ತಂಗಿಯರ ಭೇಟಿಯನ್ನು ಕಣ್ತುಂಬಿಕೊಳ್ಳುವುದು ಭಕ್ತರಿಗೆ ಒಂದು ಆಧ್ಯಾತ್ಮಿಕ ಅನುಭವವಾಗಿದ್ದು, ವರ್ಷಪೂರ್ತಿ ಕಾದು ನೋಡುವ ಉತ್ಸವವಾಗಿದೆ. ಕುಟುಂಬದ ಕಲಹ ನಿವಾರಣೆ, ಸಹೋದರ–ಸಹೋದರಿಯರ ಒಗ್ಗಟ್ಟು ಹಾಗೂ ಸೌಹಾರ್ದ ಹೆಚ್ಚಿಸಲು ಈ ಉತ್ಸವದ ಸಂದೇಶ ಮಹತ್ವದ್ದಾಗಿದೆ.
ಅಕ್ಕ–ತಂಗಿಯರ ಪ್ರೀತಿ, ಅಸೂಯೆ, ಬೇಸರ ಮತ್ತು ಪುನರ್ಮಿಲನದ ಕಥೆಯನ್ನು ಸಾರುವ ಈ ಉತ್ಸವ, ಭಕ್ತರಲ್ಲಿ ಮಾನವೀಯ ಮೌಲ್ಯಗಳನ್ನು ನೆನಪಿಸುವ ಮಹತ್ವದ ಆಚರಣೆಯಾಗಿ ಮುಂದುವರಿಯುತ್ತಿದೆ.






