ಸಿನಿಮಾಗಳು ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ ಎಂದು ಹೇಳಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತ್ತೀಚಿನ ಚಿತ್ರಗಳಲ್ಲಿ ಕೆಡುಕಿನ ವೈಭವೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರರಂಗಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಹಿಂದಿನ ಕಾಲದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಿನಿಮಾಗಳು ನಿರ್ಮಾಣವಾಗುತ್ತಿದೆಯಾದರೂ, ಇತ್ತೀಚಿನ ಚಿತ್ರಗಳಲ್ಲಿ ಕೆಡುಕನ್ನೇ ಮೆರೆದಿಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
‘ಸಿನಿಮಾಗಳಲ್ಲಿ ಅಪರಾಧ ಮಾಡುವ ಖಳನಾಯಕರನ್ನು ಹೀರೋಗಳಂತೆ ಬಿಂಬಿಸುವುದು ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅವರು ಒಳಿತು-ಕೆಡುಕಿನ ವ್ಯತ್ಯಾಸವನ್ನು ಮರೆತು ತಪ್ಪು ದಾರಿಯಲ್ಲಿ ನಡೆಯುವ ಸಾಧ್ಯತೆ ಇದೆ’ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು.

ಕಲೆ ಮತ್ತು ಸೃಜನಶೀಲತೆಯ ಹೆಸರಿನಲ್ಲಿ ಸಮಾಜದ ಮೌಲ್ಯಗಳನ್ನು ಹಾಳು ಮಾಡಬಾರದು ಎಂದು ಸೂಚಿಸಿದ ಅವರು, ಚಲನಚಿತ್ರಗಳು ಮನರಂಜನೆಯ ಜೊತೆಗೆ ಉತ್ತಮ ಸಂದೇಶವನ್ನೂ ನೀಡಬೇಕು ಎಂದು ಹೇಳಿದರು. ಚಿತ್ರ ನಿರ್ಮಾಪಕರು ರಾಷ್ಟ್ರೀಯ ಹಿತಾಸಕ್ತಿ, ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರಭಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.ಸಮಾಜದ ಮೇಲೆ ಸಿನಿಮಾಗಳ ಪ್ರಭಾವ ದೊಡ್ಡದಾಗಿರುವುದರಿಂದ, ಸೃಜನಶೀಲರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ತಪ್ಪು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.






