-ನಾ ದಿವಾಕರ
( ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟಗಳು ಮೂರು ಕವಲುಗಳಾಗಿ ಹರಿಯುತ್ತಿದ್ದು , ಈ ಹೋರಾಟಗಳಲ್ಲಿ ಮುನ್ನಲೆಗೆ ಬಾರದ ತಾತ್ವಿಕ ಅಂಶಗಳನ್ನು ಮೂರು ಭಾಗದ ಲೇಖನದಲ್ಲಿ ಚರ್ಚಿಸಲಾಗಿದೆ. ಅನುಪಾತ, ಶೇಕಡಾವಾರು ಹಂಚಿಕೆ ಇತ್ಯಾದಿ ಅಂಕಿ ಸಂಖ್ಯೆಗಳನ್ನು ಹೊರಗಿಟ್ಟು ಸಮಾಜದ ವಾಸ್ತವ ನೆಲೆಗಟ್ಟಿನಲ್ಲಿ ವಿಷಯ ಮಂಡಿಸಲಾಗಿದೆ. )
ಈ ಸರಣಿಯ ಎರಡನೆಯ ಭಾಗ ಇಲ್ಲಿದೆ.
ಭಾಗ 2
ಡಾ. ಬಿ.ಆರ್. ಅಂಬೇಡ್ಕರ್ ಅವರ ಇಡೀ ಹೋರಾಟದ ಪಯಣದಲ್ಲಿ ಗುರುತಿಸಬೇಕಾದ ಸಮಾನ ತಾತ್ವಿಕ ಎಳೆ ಎಂದರೆ “ ಒಳಗೊಳ್ಳುವ ” (Inclusive) ರಾಜಕಾರಣ. ಭಾರತದ ಸಂವಿಧಾನವೂ ಇದನ್ನೇ ವಿಭಿನ್ನ ಆಯಾಮಗಳಲ್ಲಿ ಮರುಧ್ವನಿಸುತ್ತದೆ. ಬಿಜೆಪಿಯ ಹಿಂದುತ್ವ ರಾಜಕಾರಣ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ, ಅಂದರೆ ಹೊರಗಿಡುವ ( Exclusionary) ಮಾದರಿಯನ್ನು ಅನುಸರಿಸುತ್ತಿದೆ. ಹಾಗಾಗಿಯೇ ಮುಸ್ಲಿಂ ಕ್ರೈಸ್ತ ಅಲ್ಪಸಂಖ್ಯಾತರನ್ನು ʼ ಅನ್ಯ ʼ ಎಂದೇ ನಿರ್ವಚಿಸಲಾಗುತ್ತಿದೆ. ಆದಿವಾಸಿ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಅಸಮಾನತೆ, ದಬ್ಬಾಳಿಕೆಗಳನ್ನು ನಿರಾಕರಿಸಿ, ಹಿಂದೂ ಅಸ್ಮಿತೆಯ ಮೂಲಕ, ಯಥಾಸ್ಥಿತಿಯಲ್ಲಿರಿಸಲು ಪ್ರಯತ್ನಿಸಲಾಗುತ್ತಿದೆ. ಈ ಅನ್ಯೀಕರಣ (Othering) ಮತ್ತು ವಾಸ್ತವದ ನಿರಾಕರಣೆ ಬಹುಸಂಖ್ಯಾವಾದಿ ಬಲಪಂಥೀಯ (Majoritarian Rightwing) ರಾಜಕಾರಣದ ಆಧಾರ ಸ್ತಂಭವೂ ಹೌದು.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ʼ ಬಲಗೈ ʼ ಸಮುದಾಯಗಳ ಹೋರಾಟದ ಸಂಕಥನಗಳಲ್ಲಿ , ಮತ್ತೊಂದು ಬದಿಯ ಅಲೆಮಾರಿ ಸಮಾಜಗಳ ಹೋರಾಟವನ್ನು ಹಾಗೂ ಎಡಗೈ ಸಮುದಾಯಗಳ ಒಳಮೀಸಲಾತಿ ಹೋರಾಟವನ್ನು ಇದೇ ಅನ್ಯೀಕರಣ ಮತ್ತ ಬಹುಸಂಖ್ಯಾವಾದದ ನೆಲೆಯಲ್ಲಿ ವ್ಯಾಖ್ಯಾನಿಸುತ್ತಿರುವುದನ್ನು ಗಮನಿಸಬಹುದು. ದಲಿತ ಚಳುವಳಿಯ ಐವತ್ತು ವರ್ಷಗಳ ಪಯಣದ ನಂತರ ಉದ್ಭವಿಸಿದ ಸಾಂವಿಧಾನಿಕ ಸಮಸ್ಯೆಗಳಿಗೆ ಪರಿಹಾರ ದಲಿತರಿಂದಲೇ ಬರಬೇಕಿಲ್ಲ. ಇತರ ಪ್ರಗತಿಪರ ಸಂಘಟನೆಗಳೂ ಈ ಪ್ರಯತ್ನದಲ್ಲಿರುವುದು ಶ್ಲಾಘನೀಯ ಬೆಳವಣಿಗೆ. ಆದರೆ ಈ ಪ್ರಯತ್ನಗಳ ಉದ್ದೇಶ ಕೇವಲ ಭಿನ್ನ ಕವಲುಗಳಾಗಿ ಒಡೆದಿರುವ ದಲಿತ ಚಳುವಳಿಯನ್ನು ಒಂದುಗೂಡಿಸುವುದಕ್ಕೇ ಸೀಮಿತವಾಗಕೂಡದು. ಈಗ ಛಿದ್ರವಾಗುತ್ತಿರುವುದು ಸಂಘಟನೆಯ ನೆಲೆಯಲ್ಲಿ ಅಲ್ಲ ಸಾಂವಿಧಾನಿಕ ಹಕ್ಕುಗಳ ನೆಲೆಯಲ್ಲಿ ದಲಿತ ಚಳುವಳಿಯೇ ಛಿದ್ರವಾಗುತ್ತಿದೆ.
ಬದುಕು ಭವಿಷ್ಯದ ಪ್ರಶ್ನೆಗಳು
ಇದು ಬದುಕಿನ ಪ್ರಶ್ನೆಯಾಗಿರುವುದರಿಂದ ತಳಸಮಾಜದಲ್ಲಿ ಸಂವಿಧಾನವನ್ನೇ ಅವಲಂಬಿಸಿರುವ ಸಮುದಾಯಗಳಿಗೆ ತಮ್ಮದೇ ಆದ ಗುರಿ ಇರುತ್ತದೆ. ಬಲಗೈ ಮತ್ತು ಎಡಗೈ ಹೋರಾಟಗಳಿಂದ ಭಿನ್ನವಾಗಿ ಅಲೆಮಾರಿ ಸಮುದಾಯಗಳು ಪ್ರತ್ಯೇಕವಾಗಿ ಹೋರಾಡುತ್ತಿರುವುದು ಏನನ್ನು ಸೂಚಿಸುತ್ತದೆ ? ಅವಕಾಶವಂಚಿತ ಎಡಗೈ ಸಮುದಾಯಗಳಿಗಿಂತಲೂ ಹೀನ ಸ್ಥಿತಿಯಲ್ಲಿರುವ ಅಲೆಮಾರಿಗಳು ಕೇವಲ ಅವಕಾಶಕ್ಕಾಗಿ ಹೋರಾಡುತ್ತಿಲ್ಲ, ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಇಲ್ಲಿ ಜಾತಿ ವ್ಯವಸ್ಥೆಯ ಹಾಗೂ ಶೋಷಿತ ಜನರ ಹೋರಾಟಗಳ ನೆಲೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ಒಳಬಿರುಕುಗಳನ್ನು (Fault lines) ಅರ್ಥಮಾಡಿಕೊಳ್ಳಬೇಕಿದೆ. ಈ ಹಕ್ಕೊತ್ತಾಯ ಹೋರಾಟಗಳಿಗೆ ಕಾರಣವಾಗುತ್ತಿರುವ ರಾಜಕೀಯ ಅರ್ಥಶಾಸ್ತ್ರದ (Political Economy) ಒಳಸುಳಿಗಳನ್ನೂ ಗ್ರಹಿಸಬೇಕಿದೆ.
ಸದಾಶಿವ ಆಯೋಗ ಮತ್ತು ನಾಗಮೋಹನ್ ದಾಸ್ ಆಯೋಗದ ವರದಿಗಳು ಬರದೆ ಹೋಗಿದ್ದರೆ, ಬಾಹ್ಯ ಸಮಾಜಕ್ಕೆ ಈ ಸಮುದಾಯಗಳ ಹೀನ ಸ್ಥಿತಿ ಗಮನಕ್ಕೆ ಬರುತ್ತಲೇ ಇರಲಿಲ್ಲ. ಅಥವಾ ಗಮನಿಸಿದ್ದರೂ ಗಂಭೀರವಾಗಿ ಪರಿಗಣಿಸುವ ಆಲೋಚನೆ ಇರುತ್ತಿರಲಿಲ್ಲ. ಹೌದಲ್ಲವೇ ? ಇದು ಪ್ರಪ್ರಥಮವಾಗಿ ಯಾರ ಗಮನಕ್ಕೆ ಬರಬೇಕಿತ್ತು. ನಮ್ಮ ನಡುವೆಯೇ, ನಮ್ಮ ಕಣ್ಣೆದುರಿನಲ್ಲೇ ಹೀನ ಬದುಕು ಸವೆಸುತ್ತಿರುವ ಲಕ್ಷಾಂತರ ಜನರ ಸಂಕಷ್ಟಗಳು, ಸಂವಿಧಾನದ ಫಲಾನುಭವಿ ಸಮಾಜಗಳ ಅರಿವಿಗೆ ಬರಬೇಕಿತ್ತಲ್ಲವೇ ? ಸಂಘಟನಾತ್ಮಕವಾಗಿ ನೋಡಿದಾಗ, ಐವತ್ತಾರು ಬಣಗಳಲ್ಲಿ ಛಿದ್ರವಾಗಿರುವ ದಲಿತ ಚಳುವಳಿಗಳ ಮತ್ತು ಕಮ್ಯುನಿಸ್ಟ್ ಪಕ್ಷಗಳ ಅರಿವಿಗೆ ಬರಬೇಕಿತ್ತಲ್ಲವೇ ? ಹಾಗೊಮ್ಮೆ ಬಂದಿರುವುದೇ ಆದರೆ, ಇಂದು ಅಲೆಮಾರಿ ಜನರು ಮಂಡಿಸುತ್ತಿರುವ ಹಕ್ಕೊತ್ತಾಯಗಳು, ಎಡಪಕ್ಷಗಳ, ದಲಿತ ಚಳುವಳಿಗಳ ಮುಖ್ಯ ಪ್ರಣಾಳಿಕೆಯಾಗಬೇಕಿತ್ತಲ್ಲವೇ ? ಏಕೆ ಆಗಿಲ್ಲ ? ಇದು ಆತ್ಮಾವಲೋಕನದ ಪ್ರಶ್ನೆ.
ಸಂಘಟನಾತ್ಮಕ ಸವಾಲುಗಳು
ಈಗ ನಡೆಯುತ್ತಿರುವ ಮೂರು ಹೋರಾಟಗಳು ದಲಿತ ಸಮುದಾಯದ ( ಈ ಸಮಗ್ರ ಕಲ್ಪನೆ ಇನ್ನೂ ಉಳಿದಿದ್ದರೆ !) ಸಂಪೂರ್ಣ ಸಾಂವಿಧಾನಿಕ ಹಕ್ಕುಗಳಿಗಾಗಿ ಅಲ್ಲ. ಅಥವಾ ಈ ಸಮಾಜಗಳಲ್ಲಿ ಇಂದಿಗೂ ವ್ಯವಸ್ಥಿತವಾಗಿ ಜಾರಿಯಲ್ಲಿರುವ ಶೋಷಣೆಯ ಮಾದರಿಗಳು, ದೌರ್ಜನ್ಯಗಳ ವಿಧಾನಗಳು ಮತ್ತು ಪ್ರತ್ಯೇಕತೆಯ ಹಾದಿಗಳ ವಿರುದ್ಧ ಅಲ್ಲ. ಕ್ರಾಂತಿಕವಿ ಸಿದ್ದಲಿಂಗಯ್ಯ ಅವರು ಬರೆದಿದ್ದು “ ದಲಿತರು ಬರುವರು ದಾರಿ ಬಿಡಿ,,,,,,, ” ಎಂದಲ್ಲವೇ ? ಈಗ ಕೇಳಿಬರುತ್ತಿರುವುದೇನು ʼ ದಲಿತರು ʼ ಜಾಗದಲ್ಲಿ ಹೊಲೆಯರು, ಮಾದಿಗರು, ಅಲೆಮಾರಿಗಳು, ಚಲವಾದಿಗಳು ಇತ್ಯಾದಿ ……. ವಿಪರ್ಯಾಸವೋ ವರ್ತಮಾನದ ದುರಂತವೋ ? ಈ ಮೂರನ್ನು ಒಟ್ಟುಗೂಡಿಸಬೇಕಾದರೆ ನಿರ್ಣಾಯಕವಾಗುವುದು ಸಂಘಟನೆಗಳ ನಾಯಕತ್ವದ ನಿಲುವು/ನಿರ್ಧಾರ ಅಲ್ಲ.
ಈ ನಾಯಕರ ಹಿಂಬಾಲಕ ಪಡೆಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಇದು ಅವಕಾಶ ವಂಚಿತ ತಳಸಮಾಜದ ಬದುಕಿನ, ಭವಿಷ್ಯದ ಪ್ರಶ್ನೆಯಾಗಿರುವುದರಿಂದ, ನಾಯಕರ ನಿಲುವುಗಳೂ ಸಹ ತಳಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಸಾಂವಿಧಾನಿಕವಾಗಿ ತಮಗೆ ದಕ್ಕಬೇಕಾದ ಸೌಲಭ್ಯಗಳು ಈವರೆಗೂ ದಕ್ಕಿಲ್ಲ ಎಂಬ ಹತಾಶೆಯೊಂದಿಗೆ ಹೋರಾಡುತ್ತಿರುವ ಈ ಸಮುದಾಯಗಳಿಗೆ ಅಂತಿಮ ನ್ಯಾಯ ಎಂದರೆ ಬೇಡಿಕೆಗಳನ್ನು ಈಡೇರಿಸುವುದು. ಇದು ಹೇಗೆ ಸಾಧ್ಯ ? ಇವರಲ್ಲಿ ಕೆಲವರನ್ನು ಮೀಸಲಾತಿಯಿಂದ ಹೊರಗಿಡುವುದೇ, ಬಲಾಢ್ಯ ಸಮಾಜದ ಫಲಾನುಭವಿಗಳ ಒತ್ತಡಗಳಿಗೆ ಮಣಿದು ಒಳಮೀಸಲಾತಿಯನ್ನೇ ನಿರಾಕರಿಸುವುದೇ ? ಲಭ್ಯವಿರುವ ಅವಕಾಶಗಳನ್ನು ಜನಸಂಖ್ಯಾ ಪ್ರಮಾಣಾನುಗುಣವಾಗಿ ಹಂಚುವ ವೈಜ್ಞಾನಿಕ ನೀತಿಯನ್ನು ಅಳವಡಿಸುವುದೇ ?
ಈ ಪ್ರಶ್ನೆಗಳಿಗೆ ಮೊದಲು ದಲಿತ ಚಳುವಳಿಗಳಲ್ಲಿ ಸ್ಪಷ್ಟ, ನಿಷ್ಪಕ್ಷಪಾತ, ವಿಶಾಲ ದೃಷ್ಟಿಯ ಅರಿವು ಇರಬೇಕಾಗುತ್ತದೆ. ತಮ್ಮ ಹಿಂಬಾಲಕ ಪಡೆಗಳನ್ನು ತೃಪ್ತಿಪಡಿಸಲು ಅಥವಾ ಸಂಘಟನಾತ್ಮಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ದಲಿತ ಚಳುವಳಿಯ ನಾಯಕರು ಯಥಾಸ್ಥಿತಿಯನ್ನೇ ಬಯಸುವುದಾದರೆ ಅಥವಾ ದಲಿತ ಚಳುವಳಿ ಚೂರಾದರೂ ಚಿಂತೆಯಿಲ್ಲ ತಾವು ಪ್ರತಿನಿಧಿಸುವ ಸಾಮುದಾಯಿಕ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸುವ ಅಚಲ ನಿಲುವು ಹೊಂದುವುದಾರೆ, ಎಂತಹ ವೈಜ್ಞಾನಿಕ ಸೂತ್ರವಾದರೂ ಯಶಸ್ವಿಯಾಗುವುದಿಲ್ಲ. ಏಕೆಂದರೆ ಈ ಹೋರಾಟಗಳು ನಡೆಯುತ್ತಿರುವುದು ತಾತ್ವಿಕ ನೆಲೆಯಲ್ಲಿ ಅಲ್ಲ, ವರ್ತಮಾನದ ಅಗತ್ಯತೆ ಮತ್ತು ಭವಿಷ್ಯದ ನಿರೀಕ್ಷೆಗಳ ಚೌಕಟ್ಟಿನಲ್ಲಿ. ಈ ಸಮೀಪದೃಷ್ಟಿಯ (Myopic) ಧೋರಣೆಯಿಂದ ಹೊರಬಂದು, ವಿಶಾಲ ದೂರಗಾಮಿ ದೃಷ್ಟಿಯಿಂದ ಸಮಸ್ತ ದಲಿತ ಸಮುದಾಯಗಳ ಹಿತಾಸಕ್ತಿಗಾಗಿ ಯೋಚನೆ ಮಾಡುವ ಒಂದು ಯುವ ಕಾರ್ಯಪಡೆಯನ್ನು ದಲಿತ ಚಳುವಳಿಗಳು ಸೃಷ್ಟಿಸಿಯೇ ಇಲ್ಲ. ಈ ಕೊರತೆ ಇಂದು ಎದ್ದು ಕಾಣುತ್ತಿದೆ. ಮೂರೂ ಹೋರಾಟಗಳಲ್ಲಿ ಯುವದನಿ ಅತ್ಯಂತ ಕ್ಷೀಣವಾಗಿದೆ.
ಸಾಂಸ್ಥಿಕ ದನಿಗಳ ಕೊರತೆ
ಆದರೆ ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ ಒಂದು ಧ್ವನಿ ಎಲ್ಲೂ ಸಹ ಕೇಳಿಬರುತ್ತಿಲ್ಲ. ಅದು ನವ ಬೌದ್ಧರ ಅಥವಾ ಬುದ್ಧಸಮಿತಿಗಳ ಸಾಂಸ್ಥಿಕ ಧ್ವನಿ. ಬೌದ್ಧ ಧಮ್ಮ ಸ್ವೀಕರಿಸುವುದೆಂದರೆ, ವ್ಯಕ್ತಿಗತವಾಗಿ-ಸಾಮುದಾಯಿಕವಾಗಿ ತಮ್ಮೊಳಗಿನ ಜಾತಿ ಕವಚವನ್ನು ತೊಡೆದುಹಾಕುವುದು. ಇದು ತಾತ್ವಿಕ ನೆಲೆಯಲ್ಲಿ ಒಪ್ಪುವಂತಹುದೇ. ಬೌದ್ಧ ಚಿಂತನೆ ಎಂಬ ಸಾಗರದಲ್ಲಿ ಲೀನವಾದ ಭಿನ್ನ ಜಾತಿ ಸಮುದಾಯಗಳು ತಮ್ಮ ಮೂಲ ಅಸ್ಮಿತೆಯನ್ನು ಕಳಚಿಕೊಳ್ಳಬೇಕು ಎಂದು ಎಲ್ಲ ಸಾಂಸ್ಥಿಕ ಮತಗಳಂತೆ ವರ್ತಮಾನದ ಬೌದ್ಧ ಧಮ್ಮವೂ ಬಯಸುತ್ತದೆ. ಆದರೆ ಹೀಗೆ ಲೀನವಾದ ಸಮುದಾಯಗಳು ಧರ್ಮಸಂಹಿತೆಗಳಿಂದ ಹೊರತಾಗಿ ನಿತ್ಯ ಬದುಕಿನ ಸವಾಲುಗಳಿಗೂ ಮುಖಾಮುಖಿಯಾಗುತ್ತವೆ. ಸಾಂವಿಧಾನಿಕ ಹಕ್ಕು ಮತ್ತು ಸೌಲಭ್ಯಗಳು ಈ ಸವಾಲುಗಳಲ್ಲೊಂದು.
ಈ ಮೂರೂ ಹೋರಾಟಗಳಲ್ಲಿ ಬೌದ್ಧ ಧಮ್ಮವನ್ನು ಸ್ವೀಕರಿಸಿರುವ ಮತ್ತು ಹಿಂದೂ ಧರ್ಮದಲ್ಲೇ ಉಳಿದಿರುವ ಸಮುದಾಯಗಳು ಭಾಗಿಯಾಗುತ್ತಿವೆ. ಯಾವುದೇ ಹಿಂದೂ ಧಾರ್ಮಿಕ ನೇತಾರರೂ, ಹಿಂದೂ ಸಂಘಟನೆಗಳೂ ದಲಿತರ ಈ ಹೋರಾಟಗಳಿಗೆ ಎದೆಯಾಳದಿಂದ ಸ್ಪಂದಿಸುವುದೂ ಇಲ್ಲ. ಏಕೆಂದರೆ ಶೋಷಿತರ ವಿಘಟನೆ, ಅವರ ಸಾಂಸ್ಥಿಕ ಆಧಿಪತ್ಯಕ್ಕೆ ಹಾಸುಗಲ್ಲಾಗುತ್ತದೆ. ಧಾರ್ಮಿಕವಾಗಿ ಬೌದ್ಧರಾದರೂ ಸಾಂವಿಧಾನಿಕ ನೆಲೆಯಲ್ಲಿ ಮೀಸಲಾತಿ ಫಲಾನುಭವಿಗಳಾಗಿರುವುದು ಅಥವಾ ವಂಚಿತರಾಗಿರುವುದು ವಾಸ್ತವ. ಹೀಗಿರುವಾಗ ಈ ಜನಸಂಖ್ಯೆಯನ್ನು ಪ್ರತಿನಿಧಿಸುವ ಬುದ್ಧ ಸಮಿತಿಗಳು ಕಣ್ತೆರೆದು ನೋಡಬೇಕಲ್ಲವೇ ? ಈ ಸಂದರ್ಭದಲ್ಲಿ ಬುದ್ಧನಲ್ಲಿ ಪರಿಹಾರಗಳು ಕಾಣುತ್ತವೆಯೇ ? ಕಾಣಿಸುವುದೇ ಆದರೆ ಬುದ್ಧನನ್ನು ಎಲ್ಲಿ ನಿಲ್ಲಿಸಬೇಕು ?
ಬೌದ್ಧ ಮಂದಿರಗಳಲ್ಲಿ ಕೂರಿಸಿ, ಧ್ಯಾನ ಮಾಡಬೇಕೋ ಅಥವಾ ನಡುಮನೆಗೆ ಕರೆತಂದು ಆತ್ಯಂತಿಕ ಗುರಿಯನ್ನು ತಲುಪುವ ಮಾರ್ಗವನ್ನು ಹುಡುಕಬೇಕೋ ? ಇದಕ್ಕೆ ಉತ್ತರ ಅಂಬೇಡ್ಕರರ ʼಬುದ್ಧ ಮತ್ತು ಆತನ ಧಮ್ಮʼ ಪುಸ್ತಕದಲ್ಲಿ ಸಿಗುವುದಿಲ್ಲ. ನಾವು ಹುಡುಕಿಕೊಳ್ಳಬೇಕು. ಏಕೆಂದರೆ 70 ವರ್ಷಗಳಲ್ಲಿ ಸಮಾಜ ಬದಲಾಗಿದೆ, ಜನರೂ ಬದಲಾಗಿದ್ದಾರೆ, ಭಾರತದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳೂ ಬದಲಾಗಿವೆ. ರಾಜಕೀಯ ಮಾರ್ಗವೂ ಬದಲಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯವನ್ನು ಪ್ರತಿನಿಧಿಸುವ, ಪ್ರಗತಿಪರ ಖಾವಿ ಧಾರಿಗಳು ಬಲಗೈ ಸಮುದಾಯದ ಹೋರಾಟದ ಮುಂಚೂಣಿ ನಾಯಕತ್ವ ವಹಿಸಿದ್ದಾರೆ, ಆದರೆ ಬೌದ್ಧ ಧಮ್ಮದ ಪ್ರತಿನಿಧಿಗಳಾದ ಬಂತೇಜಿಗಳು ಏಕೆ ಮೌನವಾಗಿದ್ದಾರೆ ? ಸ್ಥಿತಪ್ರಜ್ಞ ಮನಸ್ಥಿತಿ ವ್ಯಕ್ತಿಗತವಾಗಿರಬೇಕೇ ಹೊರತು ಸಾಂಸ್ಥಿಕ ಸಂಹಿತೆ ಆಗಕೂಡದು ಅಲ್ಲವೇ ?
ಬೌದ್ಧ ಧಮ್ಮ ಎಂಬ ಸಾಗರದಲ್ಲಿ ಕೆಳಸ್ತರದ ಜಾತಿ ಸಮುದಾಯಗಳು ತಾತ್ವಿಕವಾಗಿ ಲೀನವಾದರೂ ಲೌಕಿಕ ಜೀವನದಲ್ಲಿ ಎದುರಿಸುವ ಸವಾಲುಗಳು ಹಾಗೆ ಲೀನವಾಗುವುದಿಲ್ಲ. ಅದನ್ನು ಎದುರಿಸಲು ಅಲೌಕಿಕ ಮಾರ್ಗಗಳನ್ನು ಹುಡುಕಲಾಗುವುದಿಲ್ಲ. ಅಥವಾ ಅಮೂರ್ತ ಶಕ್ತಿ ಸಂಚಯದ ಮೂಲಕ ಪರಿಹರಿಸಲೂ ಸಾಧ್ಯವಿಲ್ಲ. ಬುದ್ಧನನ್ನು ಸ್ಥಾವರಬಂಧಿಯನ್ನಾಗಿ ಮಾಡುವ ಮೂಲಕ ನಾವು ಈ ರೀತಿ ಯೋಚಿಸುತ್ತಿದ್ದೇವೆ ಎನಿಸುತ್ತದೆ. ಮುಂಜಾನೆ ಬುದ್ಧನ ಧ್ಯಾನ ಮಾಡಿ ಮಧ್ಯಾಹ್ನ ಹೊಲೆಯ, ಚಲವಾದಿಯಾಗಿ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವುದಾದರೂ ಹೇಗೆ ? ಈ ಇಬ್ಬಗೆಯ ನಡೆಯನ್ನು ಪರಿಹರಿಸಿಕೊಳ್ಳುವುದು ವರ್ತಮಾನದ ತುರ್ತು ಎನಿಸುವುದಿಲ್ಲವೇ ? ಈ ಕುರಿತು ದಲಿತ ಚಳುವಳಿಗಳಲ್ಲಿ ಗಂಭೀರ ಚರ್ಚೆ ಆಗಬೇಕಿದೆ.
ಯುವ ಜನರ ದನಿ ಎಲ್ಲಿದೆ ?
ದಲಿತ ಚಳುವಳಿಯ ವಿಭಿನ್ನ ಬಣಗಳ ಆಂತರಿಕ ಚರ್ಚೆಗಳನ್ನು ಗಮನಿಸಿದಾಗ ಚಳುವಳಿಗಳ ನೆಲ ಹಂತದ (Ground level) ನಾಯಕತ್ವದಲ್ಲಿ ಗೊಂದಲವೇ ಹೆಚ್ಚು ಕಾಣುತ್ತದೆ. ಈ ಗೊಂದಲಕ್ಕೆ ಪರಿಹಾರ ಕಾಣದಾದಾಗ ಹತಾಶೆ ಮೂಡಿ, ಅದು ಆಕ್ರೋಶಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿಯೇ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವಹೇಳನಕ್ಕೆ ಗುರಿಯಾಗುತ್ತಾರೆ. 1970ರ ದಶಕದ ಮುಂಚೂಣಿ ನಾಯಕರು, ಸಾಹಿತಿಗಳೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕ್ಕೊಳಗಾಗುತ್ತಾರೆ. ಇಲ್ಲಿ ʼ ನೀವು ಯಾರ ಪರ ? ʼ ಎಂಬ ಪ್ರಶ್ನೆ, ಎಡಗೈ-ಬಲಗೈ ನಡುವಿನ ಸಂಘರ್ಷದ ನಡುವೆ ನಿಲ್ಲುತ್ತದೆ. ದಲಿತ ಚಳುವಳಿಯಲ್ಲಿ ಐದು ದಶಕಗಳಿಗೂ ಮೀರಿ ಜೀವಂತವಾಗಿದ್ದ ʼನಾವುʼ ಎಂಬ ಪದ ಮರೆಯಾಗುತ್ತಿದ್ದು, ʼನಾವು ಮತ್ತು ಅವರುʼ ಚಾಲ್ತಿಗೆ ಬರುತ್ತಿದೆ. ಇಲ್ಲಿ ಹಿಂದುತ್ವ ರಾಜಕಾರಣದ ಧ್ವನಿ ಕೇಳಿದಂತಾಗುವುದಿಲ್ಲವೇ ?
ನಮ್ಮ ಶಕ್ತಿ ತೋರಿಸುತ್ತೇವೆ ಎಂಬ ವೀರಾವೇಶದ ಮಾತುಗಳೂ ಎಡ-ಬಲದಿಂದ ಕೇಳಿಬರುತ್ತಿವೆ. ಯಾರ ಶಕ್ತಿಯನ್ನು ಯಾರಿಗೆ ತೋರಿಸುವುದು ? ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವವರಿಗೆ ಎಂದು ಅರ್ಥೈಸಬಹುದೇ ? ಈ ಕಸಿದುಕೊಳ್ಳುವವರನ್ನು ಬಾಹ್ಯ ಸಮಾಜದ ಆರ್ಥಿಕತೆ ಮತ್ತು ರಾಜಕೀಯ ನೀತಿಗಳಲ್ಲಿ ಕಾಣದೆ, ಸಮುದಾಯಗಳಲ್ಲಿ ಕಾಣುವುದಾದರೆ, ಈಗಿರುವ ಒಳಬಿರುಕುಗಳು ದೊಡ್ಡ ಕಂದರಗಳಾಬಿಡುತ್ತವೆ. ಈ ಶಕ್ತಿ ಸಂಚಯವನ್ನು ನೋಡುವುದು ಅಥವಾ ಅಳೆಯುವುದು ಹೇಗೆ ? ಇಲ್ಲಿ ಬಲಾಢ್ಯ ಸಮಾಜದ ಬಹುಸಂಖ್ಯಾವಾದ (Majoritarianism) ಪ್ರಭಾವಶಾಲಿಯಾಗುತ್ತದೆ. ಬಹುಸಂಖ್ಯಾವಾದ ಎನ್ನುವುದು ಕೇವಲ ಜನಸಂಖ್ಯೆಯ ಪ್ರಮಾಣವಲ್ಲ. ಸಾಮಾಜಿಕ ಪ್ರಾಬಲ್ಯ, ಆರ್ಥಿಕ ಸಾಮರ್ಥ್ಯ, ಸಾಂಸ್ಕೃತಿಕ ಆಧಿಪತ್ಯ, ರಾಜಕೀಯ ಪ್ರಾತಿನಿಧಿಕ ಬಲ ಮತ್ತು ಸಂಘಟನಾತ್ಮಕ ಶಕ್ತಿ ಇವೆಲ್ಲವೂ ಸೇರಿಕೊಳ್ಳುತ್ತವೆ.
ಒಳಮೀಸಲಾತಿ ಕಲ್ಪನೆಯೇ ಆಳುವವರ ಅಥವಾ ಮನುವಾದಿಗಳ ಪಿತೂರಿ ಎಂಬ ಆರೋಪವೂ ಯುವ ಜನಾಂಗದ ನಡುವೆಯೇ ಕೇಳಿಬರುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರ ʼ ತುಕಡೆ ತುಕಡೆ ಗ್ಯಾಂಗ್ ʼ ಎಂಬ, ವಿವೇಕಯುತ ವ್ಯಾಖ್ಯಾನಕ್ಕೆ ನಿಲುಕದ ಪದವನ್ನು ಬಳಸುವ ಹಾಗೆ ಪ್ರಗತಿಪರ-ಎಡಪಂಥೀಯರು ʼಮನುವಾದಿʼ ಪದವನ್ನು ಬಳಸುತ್ತಿರುವುದು ವಿಪರ್ಯಾಸ. ಇಂದು ದಲಿತ-ಶೋಷಿತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಮೂಲ ಮಾರುಕಟ್ಟೆ ಆರ್ಥಿಕತೆಯಲ್ಲಿರುವಾಗ, ಈ ಆರ್ಥಿಕತೆಯನ್ನು ಬಿಎಸ್ಪಿ ಒಳಗೊಂಡಂತೆ ಎಲ್ಲ ಮುಖ್ಯವಾಹಿನಿ ಪಕ್ಷಗಳೂ ಒಪ್ಪಿಕೊಂಡಿರುವಾಗ, ಯಾರನ್ನು ಮನುವಾದಿ ಎಂದು ಗುರುತಿಸುವುದು ? Non-ಮನುವಾದಿ ದಲಿತ ರಾಜಕಾರಣಿಗಳೂ ಈ ಆರ್ಥಿಕ ನೀತಿಯನ್ನೇ ಅನುಮೋದಿಸುತ್ತಿದ್ದಾರೆ ಅಲ್ಲವೇ ?
ರಾಜಕೀಯ ವಲಯದ ನಿರ್ಲಿಪ್ತತೆ
ಒಳಮೀಸಲಾತಿಯನ್ನು ಮಾಯಾವತಿ, ಪಾಸ್ವಾನ್, ಮೀರಾಕುಮಾರ್, ಪ್ರಕಾಶ್ ಅಂಬೇಡ್ಕರ್ ಇನ್ನೂ ಮೊದಲಾದ ಉತ್ತರ ಭಾರತದ ದಲಿತ ವಾರಸುದಾರರ ಪಕ್ಷಗಳು ವಿರೋಧಿಸಿವೆ ಎಂದು ಹೇಳುವ ಮುನ್ನ, ಈ ಮಹಾನ್ ನಾಯಕರು ಯಾರೊಡನೆ ಸಂವಾದ ನಡೆಸಿದ್ದಾರೆ ಎಂದೂ ಯೋಚಿಸಬೇಕಲ್ಲವೇ ? ರಾಜಕೀಯ ಪಕ್ಷಗಳ/ನಾಯಕತ್ವದ ತೀರ್ಮಾನ ತಳಮಟ್ಟದ ಸಮಾಜದ ಅಭಿವ್ಯಕ್ತಿ ಆಗಿರುವುದಿಲ್ಲ. ನಾಯಕತ್ವದ ದನಿಗೆ ದನಿಗೂಡಿಸುವ ಒಂದು ಹಿಂಬಾಲಕ ಪಡೆಯನ್ನು ಎಲ್ಲ ಪಕ್ಷಗಳೂ ಹೊಂದಿರುತ್ತವೆ. ಈ ಪಡೆಯಲ್ಲಿ ನಾವು ಭವಿಷ್ಯದ ಭಾಗೀದಾರರನ್ನು (Stakeholders) ಗುರುತಿಸಿ, ಅದರೊಳಗಿನ ಯುವ ಜನಾಂಗದೊಡನೆ ಕುಳಿತು , ಅವರ ಅಭಿಪ್ರಾಯಗಳನ್ನು ಆತಂಕಗಳನ್ನು ಸಂಗ್ರಹಿಸಿ, ಪರಿಹಾರೋಪಾಯಗಳ ಬಗ್ಗೆ ಯೋಚನೆ ಮಾಡಬೇಕಲ್ಲವೇ ? ಮೇಲಿನ ನಾಯಕರು ಈ ರೀತಿಯ ಸಂವಾದವನ್ನು ನಡೆಸಿರಲು ಸಾಧ್ಯವೇ ?
ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟಗಳು ತೀವ್ರವಾಗುತ್ತಿದ್ದರೂ, ಈ ರೀತಿಯ ಪ್ರಯತ್ನಗಳು ನಡೆದಿವೆಯೇ ? ನಾವು ಯುವ ಜನಾಂಗದ ಅಂತರಂಗದ ತಳಮಳಗಳಿಗೆ, ಆತಂಕಗಳಿಗೆ ಕಿವಿ ತೆರೆದಿದ್ದೇವೆಯೇ ? ಬದಲಾಗಿ ಈ ಯುವ ಸಮಾಜದಲ್ಲೂ ಬಲಗೈ-ಎಡಗೈ ವಿಭಜನೆ ಸ್ಪಷ್ಟವಾಗಿ ತಲೆದೋರುತ್ತಿದೆ. ದಲಿತ ಚಳುವಳಿಯ ಹಿರಿಯ ತಲೆಮಾರಿನ ನಾಯಕತ್ವ ಈ ವಿಭಜನೆಯನ್ನು ವರ್ಗಪ್ರಜ್ಞೆಯ ನೆಲೆಯಲ್ಲಿ ನೋಡಿದ್ದರೆ, ಅಥವಾ ಎಡಪಂಥೀಯ ಕಾರ್ಮಿಕ-ವಿದ್ಯಾರ್ಥಿ ಚಳುವಳಿಗಳು ಜಾತಿ ನೆಲೆಯಲ್ಲಿ ನೋಡಿದ್ದರೆ ಬಹುಶಃ ಈ ಸಂದಿಗ್ಧತೆ ಎದುರಾಗುತ್ತಿರಲಿಲ್ಲ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳು ಎಡ-ಬಲ ವ್ಯಾಖ್ಯಾನವನ್ನು ಮೀರಿ, ಸಮಗ್ರ ದೃಷ್ಟಿಕೋನದಿಂದ ಯೋಚನೆ ಮಾಡಲು ನಾವು ಪ್ರಚೋದಿಸಬೇಕಿದೆ.
ಏಕೆಂದರೆ ಯುವ ಜನಾಂಗದ ನಿರೀಕ್ಷೆಗಳು ವಿಭಿನ್ನವಾಗಿರುತ್ತವೆ. ಅನಿಶ್ಚಿತತೆ ಮತ್ತು ಭವಿಷ್ಯದ ಅಭದ್ರತೆಯ ಬಗ್ಗೆ ಈ ಜನಾಂಗದಲ್ಲಿ ಆತಂಕ ಇರುವಷ್ಟೇ ಭೀತಿಯೂ ಇರುತ್ತದೆ. ಕ್ಯಾಂಪಸ್ಗಳಿಂದ ಹೊರಬಂದ ಮೇಲೆ ತಮ್ಮ ಬದುಕಿಗೆ ಕಾಯಕಲ್ಪ ನೀಡುವುದು ಏನು ? ಕೇವಲ ಆಳ್ವಿಕೆಗಳು ನಿಗದಿಪಡಿಸುವ ಶೇಕಡಾವಾರು ಮೀಸಲಾತಿಯೇ ಅಥವಾ ಅದನ್ನೂ ಮೀರಿದ ಆರ್ಥಿಕ ನೀತಿಗಳೇ ? ಈ ಯುವ ಜನಾಂಗದಲ್ಲಿ ಇರಬಹುದಾದ ಅವಕಾಶವಂಚಿತರು ಅಥವಾ ಇಂದಿಗೂ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಲಾಗದ ಅಲೆಮಾರಿ-ಬುಡಕಟ್ಟು ಸಮಾಜಗಳ ಯುವಜನರು ಯಾವ ನಿರೀಕ್ಷೆಗಳನ್ನು ಹೊಂದಿರಬಹುದು ? ಒಂದು ಯುವ ಜನ ಸಮಾವೇಶ ಮತ್ತು ತಳಮಟ್ಟದವರೆಗೆ ಚರ್ಚೆ ಸಂವಾದಗಳು ಮಾತ್ರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯ.
ವಿಘಟಿತವಾಗಿರುವ ದಲಿತ ಸಂಘಟನೆ, ಚಳುವಳಿಗಳು ಮತ್ತು ಒಂದುಗೂಡಿಸಲು ಮುಂದಾಗಿರುವ ದಲಿತೇತರ ಪ್ರಗತಿಪರ ಮನಸ್ಸುಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ಪ್ರಸ್ತುತ ಹೋರಾಟಗಳಲ್ಲಿ ಕೇಳಿಸದ ʼ ಯುವದನಿ ʼಯ ಉತ್ಖನನ ಆಗಬೇಕಿದೆ. ಸಂಘಟನಾತ್ಮಕವಾಗಿ ನಾಯಕರ ಅಥವಾ ಸಾಂಘಿಕ ಅಸ್ಮಿತೆಯ ಹಿಂಬಾಲಕರಾಗದೆ, ಸ್ವತಂತ್ರ ಆಲೋಚನೆ ಮಾಡುವ ನಿಟ್ಟಿನಲ್ಲಿ ಯುವ ಜನಾಂಗವನ್ನು ಮುಂದೊಯ್ಯಬೇಕಿದೆ. ಪ್ರಸ್ತುತ ಹೋರಾಟಗಳಲ್ಲಿ ಮರೆಯಾಗಿರುವ ಮತ್ತೊಂದು ಪ್ರಧಾನ ಧ್ವನಿ ಎಂದರೆ ಮಹಿಳಾ ಸಮೂಹದ್ದು. ಈ ಸೂಕ್ಷ್ಮವನ್ನೂ ಪರಾಮರ್ಶಿಸಿದಾಗ, ದಲಿತ ಚಳುವಳಿಗಳು ತಾತ್ವಿಕವಾಗಿ ಎಷ್ಟು ವಿಫಲವಾಗಿವೆ ಎನ್ನುವುದೂ ಸ್ಪಷ್ಟವಾಗುತ್ತದೆ. ಇದು ಆತ್ಮಾವಲೋಕನದ ಪರ್ವ ಎಂದು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ.
ಮುಂದುವರೆಯುವುದು…..
-೦-೦-೦-೦-






