ಇಸ್ರೇಲ್–ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ವರದಿ ಮಾಡುವಲ್ಲಿ ಕೆಲವು ಸುದ್ದಿ ವಾಹಿನಿಗಳ ನಡೆ ಕುರಿತು ಆತಂಕ ವ್ಯಕ್ತಪಡಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B), ಸುದ್ದಿ ಟಿವಿ ಚಾನೆಲ್ಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ಗಳ (TRP) ಪ್ರಕಟಣೆಯನ್ನು ನಾಲ್ಕು ವಾರಗಳ ಕಾಲ ಸ್ಥಗಿತಗೊಳಿಸಲು ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಗೆ ನಿರ್ದೇಶನ ನೀಡಿದೆ.
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರುವುದಾಗಿ ಸಚಿವಾಲಯ ತಿಳಿಸಿದ್ದು, ನಾಲ್ಕು ವಾರಗಳವರೆಗೆ ಅಥವಾ ಮುಂದಿನ ನಿರ್ದೇಶನಗಳು ಹೊರಬರುವವರೆಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಸಚಿವಾಲಯ, “ಕೆಲವು ಸುದ್ದಿ ಟಿವಿ ವಾಹಿನಿಗಳು ಅನಗತ್ಯ ಸಂಚಲನ ಮೂಡಿಸುವ ಮತ್ತು ಊಹಾತ್ಮಕ ವಿಷಯಗಳನ್ನು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸಾರ್ವಜನಿಕರಲ್ಲಿ, ವಿಶೇಷವಾಗಿ ಸಂಘರ್ಷ ಪ್ರದೇಶಗಳಲ್ಲಿ ಇರುವ ಕುಟುಂಬಸ್ಥರು ಅಥವಾ ಪರಿಚಯಸ್ಥರಲ್ಲಿ ಆತಂಕ ಉಂಟಾಗುವ ಸಾಧ್ಯತೆ ಇದೆ” ಎಂದು ತಿಳಿಸಿದೆ.

ಆದರೆ ಯಾವ ವಾಹಿನಿಗಳು ಈ ರೀತಿಯ ವರದಿ ಮಾಡಿವೆ ಎಂಬುದನ್ನು ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. “ಸಾರ್ವಜನಿಕ ಹಿತದೃಷ್ಟಿಯಿಂದ” ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದು,
ಈ ಕ್ರಮ ಕೈಗೊಳ್ಳಲು ಸರ್ಕಾರವು 2014 ಜನವರಿ 16ರಂದು ಜಾರಿಯಾದ ಟಿವಿ ರೇಟಿಂಗ್ ಏಜೆನ್ಸಿಗಳ ನೀತಿ ಮಾರ್ಗಸೂಚಿಗಳ ಕ್ಲಾಸ್ 24.2 ಅನ್ನು ಉಲ್ಲೇಖಿಸಿದೆ. ಅದರ ಪ್ರಕಾರ, BARC ಸಂಸ್ಥೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾಲಕಾಲಕ್ಕೆ ನೀಡುವ ಆದೇಶಗಳು ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿದೆ.

ಟಿಆರ್ಪಿ ಅಂದರೆ ದೂರದರ್ಶನ ವಾಹಿನಿಗಳ ವೀಕ್ಷಕರ ಸಂಖ್ಯೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದ್ದು, ಜಾಹೀರಾತು ದರಗಳನ್ನು ನಿರ್ಧರಿಸಲು ಪ್ರಸಾರ ಸಂಸ್ಥೆಗಳು ಮತ್ತು ಜಾಹೀರಾತುದಾರರು ಇದನ್ನು ಬಳಸುತ್ತಾರೆ. ಟಿಆರ್ಪಿ ಪ್ರಕಟಣೆ ಸ್ಥಗಿತಗೊಳ್ಳುವುದರಿಂದ ಸುದ್ದಿ ವಾಹಿನಿಗಳ ವ್ಯಾಪಾರಿಕ ಸ್ಥಾನಮಾನಕ್ಕೂ ಪರಿಣಾಮ ಬೀಳುತ್ತದೆ.
ಇದಕ್ಕೂ ಮೊದಲು 2020ರಲ್ಲಿ ಟಿಆರ್ಪಿ ಅಂಕಿಅಂಶಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆ ಮುಂಬೈ ಪೊಲೀಸ್ ತನಿಖೆ ನಡೆದಾಗ ಕೂಡ ಕೇಂದ್ರ ಸರ್ಕಾರ ಕೆಲವು ವಾರಗಳ ಕಾಲ ಸುದ್ದಿ ವಾಹಿನಿಗಳ ಟಿಆರ್ಪಿ ಪ್ರಕಟಣೆಯನ್ನು ಸ್ಥಗಿತಗೊಳಿಸಿತ್ತು.
2010ರಲ್ಲಿ ಪ್ರಸಾರೋದ್ಯಮದ ಆಶ್ರಯದಲ್ಲಿ ಸ್ಥಾಪಿತವಾದ BARC ಭಾರತದಲ್ಲಿ ಟಿವಿ ವೀಕ್ಷಕರ ಮಾಹಿತಿಯನ್ನು ಅಳೆಯಲು ಮತ್ತು ಪ್ರಕಟಿಸಲು ಅಧಿಕೃತ ಸಂಸ್ಥೆಯಾಗಿದೆ. ಇದರ ಅಂಕಿಅಂಶಗಳು ಬಹು ಕೋಟಿ ರೂ.ಗಳ ಜಾಹೀರಾತು ಒಪ್ಪಂದಗಳಿಗೆ ಆಧಾರವಾಗಿರುವುದರಿಂದ ಈ ಸ್ಥಗಿತ ಕ್ರಮ ಪ್ರಸಾರ ಕ್ಷೇತ್ರದಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.ಇಸ್ರೇಲ್ ಮತ್ತು ಇರಾನ್ ನಡುವಿನ ಪರಸ್ಪರ ದಾಳಿಗಳ ಬಳಿಕ ಸಂಘರ್ಷ ತೀವ್ರಗೊಂಡಿದ್ದು, ಈ ಘಟನೆಗಳ ವರದಿಗೆ ಭಾರತೀಯ ಸುದ್ದಿ ವಾಹಿನಿಗಳು ಹೆಚ್ಚಿನ ಸಮಯ ಮೀಸಲಿಡುತ್ತಿವೆ.






