ಬೆಂಗಳೂರು : ತೀವ್ರ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದ್ದ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಠಾಕ್ರೆ ಸಹೋದರರ ಕೋಟೆಯನ್ನು ಛಿದ್ರಗೊಳಿಸುವಲ್ಲಿ ಫಡ್ನವೀಸ್ ನೇತೃತ್ವದ ಬಿಜೆಪಿ ಹಾಗೂ ಶಿವಸೇನಯ ಮೈತ್ರಿ ಯಶಸ್ವಿಯಾಗಿದೆ. ಏಷ್ಯಾದಲ್ಲೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯು ಇದೀಗ ಬಿಜೆಪಿಯ ತೆಕ್ಕೆಗೆ ಒಲಿದಿದೆ.
ಒಟ್ಟು 227 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಫಡ್ನವೀಸ್ ಹಾಗೂ ಏಕನಾಥ್ ಶಿಂಧೆ ಜೋಡಿ ಅಧ್ಬುತ ಪ್ರದರ್ಶನ ನೀಡಿದೆ ಮೂಲಕ ಮತ್ತೊಮ್ಮೆ ಸಂಘಟನಾ ಚತುರ ರಾಜಕಾರಣಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಆದರೆ ಭಾರತ ದೇಶದ ವಾಣಿಜ್ಯ ನಗರಿಯಾದ ಮುಂಬೈಯಲ್ಲಿಯೇ ಕಾಂಗ್ರೆಸ್ ತನ್ ಶಕ್ತಿಯನ್ನು ಕಳೆದುಕೊಂಡು ಬಲಹೀನವಾಗಿದೆ. 227 ಸ್ಥಾನಗಳಲ್ಲಿ 152ರಲ್ಲಿ ಸ್ಫರ್ಧಿಸಿದ್ದ ಕಾಂಗ್ರೆಸ್ ಕೇವಲ 15 ಸ್ಥಾನಗಳಿಗೆ ತೃಪ್ತಿಪಡುವಂತಾಗಿದೆ. ಅಲ್ಲದೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೇವಲ 3 ಸ್ಥಾನಕ್ಕೆ ಸೀಮಿತವಾಗಿದ್ದು, ಯುಬಿಟಿ 72, ಬಿಜೆಪಿ ಹಾಗೂ ಶಿಂಧೆ ನೇತೃತ್ವದ ಶಿವಸೇನೆ ಜೋಡಿ 122 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಠಾಕ್ರೆ ಬ್ರದರ್ಸ್‌ಗಳಿಗೆ ಶಾಕ್ ನೀಡಿವೆ. ಇತರ ಪಕ್ಷಗಳು 10 ಸ್ಥಾನಗಳಲ್ಲಿ ಗೆಲುವ ಕಂಡಿವೆ.
227 ಸ್ಥಾನಗಳಲ್ಲಿ 88ರಲ್ಲಿ ಬಿಜೆಪಿ ಗೆದ್ದಿದ್ದು, ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 28 ಸ್ಥಾನಗಳಲ್ಲಿ ಮುಂದಿದೆ. ಈ ಮಹಾಯುತಿ ಮೈತ್ರಿಕೂಟವು 114ರ ಅರ್ಧದಷ್ಟನ್ನು ಆರಾಮವಾಗಿ ದಾಟಿದೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೈತ್ರಿ ಅಧಿಕಾರ ನಡೆಸಲಿದೆ.
ಇನ್ನೂ ಮುಂಬೈ ನಗರದ ಜನರು ತಮ್ಮ ಪಕ್ಷಕ್ಕೆ ನೀಡಿರುವ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಉತ್ಸಾಹಿ ಜನರು ಎನ್‌ಡಿಎಯ ಸಾರ್ವಜನಿಕ ಕಲ್ಯಾಣ ಮತ್ತು ಉತ್ತಮ ಆಡಳಿತದ ಕಾರ್ಯಸೂಚಿಯನ್ನು ಆಶೀರ್ವದಿಸಿದ್ದಾರೆ! ಹಲವಾರು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳ ಫಲಿತಾಂಶಗಳು ಎನ್‌ಡಿಎ ಮತ್ತು ಮಹಾರಾಷ್ಟ್ರದ ಜನರ ನಡುವಿನ ಬಾಂಧವ್ಯವು ಇನ್ನಷ್ಟು ಗಟ್ಟಿಗೊಳಿಸಿದೆ. ನಮ್ಮ ಕೆಲಸದ ಅನುಭವ ಮತ್ತು ಅಭಿವೃದ್ಧಿಯ ದೃಷ್ಟಿಕೋನವು ಜನರ ಹೃದಯಗಳನ್ನು ತಲುಪಿದೆ ಎಂದು ಮೋದಿ ಮಹಾರಾಷ್ಟ್ರದ ಎಲ್ಲಾ ಜನರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಜನಾದೇಶವು ಪ್ರಗತಿಗೆ ಮತ್ತಷ್ಟು ವೇಗ ನೀಡುತ್ತದೆ, ಅಲ್ಲದೆ ಇದು ರಾಜ್ಯದ ಶ್ರೀಮಂತ ಸಂಸ್ಕೃತಿಯ ಆಚರಣೆಯಾಗಿದೆ. “ಮಹಾರಾಷ್ಟ್ರದಾದ್ಯಂತ ಜನರ ನಡುವೆ ಅವಿರತ ಶ್ರಮವಹಿಸಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರೆಲ್ಲ ನಮ್ಮ ಮೈತ್ರಿಕೂಟದ ಸಾಧನೆಯ ಬಗ್ಗೆ ಜನರಿಗೆ ತಲುಪಿಸಿದ್ದಾರೆ. ಭವಿಷ್ಯದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಎತ್ತಿ ತೋರಿಸಿದರು ಮತ್ತು ವಿರೋಧ ಪಕ್ಷದ ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೇಟ್ಟಿಸಿದರು. ಅವರಿಗೆ ನನ್ನ ಶುಭಾಶಯಗಳು” ಎಂದು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಿಜೆಪಿಯ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ದಾರೆ.












