ಬೆಂಗಳೂರು: ಕನ್ನಡ ಚಿತ್ರರಂಗದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅವರ ಸಾಧನೆ ಹಾಗೂ ಮೌಲ್ಯಗಳು ಇಂದಿಗೂ ಕೋಟ್ಯಾಂತರ ಕನ್ನಡಿಗರಿಗೆ ಸ್ಫೂರ್ತಿಯಾಗಿದೆ. ಇದೀಗ ಪುನೀತ್ ರಾಜ್‌ಕುಮಾರ್ ಅವರ ಜೀವನಗಾಥೆ ಕರ್ನಾಟಕದ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಆಗಲಿದೆ ಎಂಬ ಮಹತ್ವದ ಸುದ್ದಿ ಹೊರಬಿದ್ದಿದೆ.

ಪಠ್ಯಪುಸ್ತಕ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಪುನೀತ್ ರಾಜ್‌ಕುಮಾರ್ ಅವರ ಸಾಧನೆ, ಸಾಮಾಜಿಕ ಸೇವೆ ಹಾಗೂ ವ್ಯಕ್ತಿತ್ವವನ್ನು ಪಠ್ಯಕ್ರಮದಲ್ಲಿ ಸೇರಿಸುವ ಕುರಿತು ಕರ್ನಾಟಕ ಪಠ್ಯಪುಸ್ತಕ ಸಂಘ ತೀರ್ಮಾನ ಕೈಗೊಂಡಿದೆ ಎನ್ನುವ ವಿಚಾರ ಹೊರ ಬಿದ್ದಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಪುನೀತ್ ರಾಜ್‌ಕುಮಾರ್ ಅವರ ಜೀವನ ಕಥೆ ಶಿಸ್ತು, ಶ್ರಮ, ಸರಳತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಪಠ್ಯಪುಸ್ತಕಗಳ ಮೂಲಕ ಈ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪುನೀತ್ ರಾಜ್‌ಕುಮಾರ್ ಅವರು ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ನಾಯಕನಾಗಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಅವರು, ಸಿನಿಮಾ ಮಾತ್ರವಲ್ಲದೇ ಶಿಕ್ಷಣ, ಆರೋಗ್ಯ, ದಾನ ಕಾರ್ಯಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕವೂ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಜೀವನಗಾಥೆ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಆಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸರ್ಕಾರದ ನಿರ್ಧಾರಕ್ಕೆ ಸ್ವಾಗತ ವ್ಯಕ್ತಪಡಿಸುತ್ತಿದ್ದಾರೆ. ಅಪ್ಪು ಅವರ ಜೀವನ ಪಾಠಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












