ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ. ಉಮೇದುವಾರಿಕೆ ಸಲ್ಲಿಕೆ ಕೂಡ ಆರಂಭಗೊಂಡಿದ್ದು ಈಗಾಗಲೇ ಅನೇಕ ನಾಯಕರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಮವಾಸ್ಯೆ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಅನೇಕ ಘಟಾನುಘಟಿ ನಾಯಕರು ಟೆಂಪಲ್ ರನ್ ನಡೆಸಿ ಬಳಿಕ ಬೆಂಬಲಿಗರ ಸಮೇತ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಈ ಬಾರಿಯ ಹೈವೋಲ್ಟೇಜ್ ಕದನಕ್ಕೆ ಕಾರಣವಾಗಿರುವ ವರುಣ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಂಜನಗೂಡು ತಾಲೂಕು ಕಚೇರಿಗೆ ತೆರಳಿದ ವಿ.ಸೋಮಣ್ಣ ಉಮೇದುವಾರಿಕೆ ಸಲ್ಲಿಸಿದ್ರು. ಈ ವೇಳೆ ಸಿಎಂ ಬೊಮ್ಮಾಯಿ, ಸಂಸದರಾದ ಪ್ರತಾಪ್ ಸಿಂಹ, ವಿ. ಶ್ರೀನಿವಾಸ್ ಪ್ರಸಾದ್ ಸಾಥ್ ನೀಡಿದ್ರು.

ಗುರುವಾರ ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸಚಿವ ಸುಧಾಕರ್ ಇಂದು ಶಕ್ತಿ ಪ್ರದರ್ಶನ ಮಾಡುವ ಮೂಲಕ ಬಿ ಫಾರಂ ಸಲ್ಲಿಕೆ ಮಾಡಿದ್ದಾರೆ . ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್, ಟೆಂಪಲ್ ರನ್ ನಡೆಸಿ ಬಳಿಕ ಬಿ ಫಾರಂ ಸಲ್ಲಿಸಿದ್ದಾರೆ.

ತಾತ ಹೆಚ್ಡಿ.ದೇವೇಗೌಡರಿಂದ ನಾಮಪತ್ರ ಸಲ್ಲಿಸುವ ವೇಳೆ ಗಳಗಳನೇ ಕಣ್ಣಿರಿಟ್ಟಿದ್ದ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ಸಮೇತ ತಾಲೂಕು ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದಾರೆ .ಇತ್ತ ಚೆನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಉಡುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಂಚನ್ , ಪುತ್ತೂರು ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅರುಣ್ ಪುತ್ತಿಲ ಸೇರಿದಂತೆ ಇನ್ನೂ ಅನೇಕರು ಉಮೇದುವಾರಿಕೆ ಸಲ್ಲಿಸಿದ್ದಾರೆ.






