ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ದಂಡ ಪಾವತಿಸಲು ಮತ್ತೊಮ್ಮೆ ಶೇ 50ರಷ್ಟು ರಿಯಾಯಿತಿ ದಂಡ ಪಾವತಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದ್ದು, ಮಾರ್ಚ್ 4ರಿಂದ 15 ದಿನಗಳ ಕಾಲಾವಕಾಶ ನೀಡಿದೆ.
11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರ ರಿಯಾಯಿತಿ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ಫೆಬ್ರವರಿ 11ರ ವರೆಗೆ 15 ದಿನಗಳ ಕಾಲ ಶೇ 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು. ಈ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಾತ್ರವಲ್ಲದೇ ರಿಯಾಯಿತಿ ದರದಲ್ಲಿ ದಂಡ ಕಟ್ಟುವ ಕಾಲಾವಕಾಶವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು.
ಅದರಂತೆ ಫೆಬ್ರವರಿ 14 ರಂದು ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ವಿಸ್ತರಣೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕಳೆದ ಬಾರಿ ಸುಮಾರು 44 ತರಹದ ನಿಯಮಗಳ ಉಲ್ಲಂಘನೆ ದಂಡದಲ್ಲಿ ರಿಯಾಯಿತಿ ನೀಡಲಾಗಿತ್ತು. ಈ ಬಾರಿಯೂ ಅದು ಹಾಗೆಯೇ ಮುಂದುವರಿಯಲಿದ್ದು, ರಿಯಾಯಿತಿಯು ಮಾರ್ಚ್ 4 ರಿಂದ 15 ದಿನಗಳವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ.






