ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ದೆಹಲಿಯಲ್ಲಿ ಭಾರೀ ಸರ್ಕಸ್ ನಡೆಸಿದ ಬಳಿಕ ಅಮಿತ್ ಷಾ ಭೇಟಿ ಮಾಡಲಾಗಿತ್ತು. ಸಂಸತ್ ಭವನದಲ್ಲಿ ನಡೆದ ಭೇಟಿ ಬಳಿಕ ನಗು ಮೊಗದೊಂದಿಗೆ ಹೊರಬಂದಿದ್ದ ಸಿಎಂ ಯಡಿಯೂರಪ್ಪ, ನಾವು ಅಂದುಕೊಂಡಂತೆ ಎಲ್ಲವೂ ಆಯಿತು. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್‌ನಿಂದ ಯಾವುದೇ ಅಡ್ಡಿಯಿಲ್ಲ. ನಾವು ಕೊಟ್ಟ ಸಲಹೆಗಳನ್ನು ಜೆ ಪಿ ನಡ್ಡಾ ಹಾಗು ಅಮಿತ್ ಷಾ ಇಬ್ಬರೂ ಒಪ್ಪಿಕೊಂಡಿದ್ದಾರೆ. ನಾವು ಅಧಿಕಾರಕ್ಕೆ ಬರಲು ತ್ಯಾಗ ಮಾಡಿದವರ ಹಿತ ಕಾಯುವುದು ಮುಖ್ಯ ಎಂದಿದ್ದರು. ಇದೀಗ ಇಂದು ಬೆಳಗ್ಗೆ 10.30ಕ್ಕೆ 10 ಮಂದಿ ನೂತನ ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ಯಡಿಯೂರಪ್ಪ ದೆಹಲಿಯಲ್ಲಿ ಮಾತನಾಡಿದ್ದ ಮಾತುಗಳನ್ನು ಮತ್ತೊಮ್ಮೆ ಕೇಳಿಸಿಕೊಂಡರೆ ಅವತ್ತು ರಾಷ್ಟ್ರ ರಾಜಧಾನಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸುಳ್ಳು ಹೇಳಿದ್ರಾ..? ಸತ್ಯ ಹೇಳಿದ್ರಾ ಎನ್ನುವ ಪ್ರಶ್ನಾರ್ಥಕ ಚಿಹ್ನೆ ಮೂಡುವುದು ಸಹಜ.
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲು ಒಪ್ಪಿಗೆ ಕೊಟ್ಟಿದ್ದಾರೆ ಎಂದಿದ್ದ ಯಡಿಯೂರಪ್ಪ, ಒಂದಷ್ಟು ಆಕಾಂಕ್ಷಿಗಳ ಮನವೊಲಿಕೆ ಮಾಡಬೇಕಿದೆ, ಮನವೊಲಿಕೆ ಮಾಡಿದ ಬಳಿಕ ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದಿದ್ದರು. ಇದರಲ್ಲಿ ಕೆಲವೊಂದು ಮಾತುಗಳು ಸತ್ಯ ಎನಿಸುತ್ತಿವೆ. ಸಚಿವ ಸಂಪುಟ ವಿಸ್ತರಣೆ ಆಗುತ್ತಿದೆ, ಆದರೆ ಯಡಿಯೂರಪ್ಪ ಹೇಳಿದಂತೆ ಮನವೊಲಿಕೆ ಮಾಡಿದ್ದು ಯಾರನ್ನು ಎನ್ನುವ ಅನುಮಾನ ಕಾಡುತ್ತಿದೆ. ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವುದು ದೆಹಲಿಗೆ ತೆರಳುವ ಮುನ್ನವೇ ಬಹಿರಂಗವಾಗಿತ್ತು. ಗೆದ್ದಿರುವ 10 ಜನರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಎನ್ನಲಾಗಿತ್ತು. ದೆಹಲಿಗೆ ಹೋಗಿಬಂದ ಬಳಿಕ ಆ ವಿಚಾರ ಕನ್ಫರ್ಮ್ ಆಗಿತ್ತು. ಹೀಗಾಗಿ ಯಡಿಯೂರಪ್ಪ ಮನವೊಲಿಕೆಯಲ್ಲಿ ಸೋತಿದ್ದಾರಾ ಎನ್ನುವ ಪ್ರಶ್ನೆಯೂ ಉದ್ಬವವಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಸಿಕ್ಕಿದೆ ಎಂದು ದೆಹಲಿಯಿಂದ ವಾಪಸ್ ಬಂದ ಬಳಿಕ ಉಮೇಶ್ ಕತ್ತಿ ಸೇರಿದಂತೆ ಹಲವು ಆಕಾಂಕ್ಷಿತರು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ವೇಳೆ ಯಡಿಯೂರಪ್ಪ ಹೈಕಮಾಂಡ್ ಸೂಚನೆಯನ್ನು ಸೂಚ್ಯವಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಬಹುದಿತ್ತು. ಯಾವುದನ್ನೂ ಹೇಳದ ಸಿಎಂ ಯಡಿಯೂರಪ್ಪ, ಸುಳ್ಳು ಹೇಳಿದ್ರಾ ಅನ್ನೋ ಅನುಮಾನದೊಂದಿದೆ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ದೆಹಲಿಗೂ ತೆರಳುವ ಒಂದು ದಿನ ಮುಂಚಿತವಾಗಿ ಯಡಿಯೂರಪ್ಪ ಬೆಳಗಾವಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸುದ್ದಿಗೋಷ್ಟಿ ಮಾಡಿದ್ದ ಮುಖ್ಯಮಂತ್ರಿ ಉಮೇಶ್ ಕತ್ತಿ ಮಂತ್ರಿ ಆಗಲಿದ್ದಾರೆ ಎಂದು ಘೋಷಣೆ ಮಾಡಿದ್ದರು. ಆ ಬಳಿಕ ದೆಹಲಿಗೆ ತೆರಳಲಿ ವಾಪಸ್ ಬಂದ ಬಳಿಕ ಹೈಕಮಾಂಡ್ ಜೊತೆ ನಡೆದ ಚರ್ಚೆಯ ಬಗ್ಗೆ ತಿಳಿಸಿ, ಉಮೇಶ್ ಕತ್ತಿಯನ್ನು ಮನವೊಲಿಸುವ ಕೆಲಸ ಮಾಡಬೇಕಿತ್ತು. ಆದರೆ ನೂತನ ಶಾಸಕರನ್ನು ಸಚಿವರನ್ನಾಗಿ ಮಾಡುವ ಒತ್ತಡದಲ್ಲಿ ಸಿಲುಕಿದ್ದ ಯಡಿಯೂರಪ್ಪ, ಬೀಸುವ ಕತ್ತಿಯಿಂದ ಪಾರಾದರೆ ಸಾಕು ಎನ್ನುವ ಉದ್ದೇಶದಿಂದ ಉಮೇಶ್ ಕತ್ತಿ ಸೇರಿದಂತೆ ಉಳಿದ ಆಕಾಂಕ್ಷಿಗಳಿಂದ ಹೈಕಮಾಂಡ್ ಮಟ್ಟದಲ್ಲಿ ನಡೆದ ಚರ್ಚೆಯನ್ನು ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ.
ಉಮೇಶ್ ಕತ್ತಿ ಹಾಗು ಸಿ.ಪಿ ಯೋಗೇಶ್ವರ್ ಇಬ್ಬರೂ ಯಡಿಯೂರಪ್ಪ ಕೋಟಾದಿಂದಲೇ ಸಚಿರಾಗಲು ಬಯಸಿದ್ದವರು. ಅರವಿಂದ ಲಿಂಬಾವಳಿ ಮಾತ್ರ ಪಕ್ಷದ ಕೋಟಾದಿಂದ ಸಚಿವರಾಗುವ ಪಟ್ಟಿಯಲ್ಲಿದ್ದರು. ಈಗ ಸಂಪುಟ ದರ್ಜೆ ಸಚಿವರಾಗುತ್ತಿರುವ 10 ಮಂದಿ ನೂತನ ಶಾಸಕರೂ ಕೂಡ ಯಡಿಯೂರಪ್ಪನ ಹಿಂಬಾಲಕರೇ ಆಗಿದ್ದಾರೆ. ಇದರ ಜೊತೆಗೆ ಮತ್ತಿಬ್ಬರು ಯಡಿಯೂರಪ್ಪನ ಆಯ್ಕೆಯೇ ಆಗಲಿದೆ. ಆ ಬಳಿಕ ಸಂಪುಟದಲ್ಲಿ ಯಡಿಯೂರಪ್ಪ ಪ್ರಬಲರಾಗಲಿದ್ದಾರೆ ಎನ್ನುವ ಕಾರಣಕ್ಕೆ ಸಂಘಪರಿವಾರ ಅಡ್ಡಿ ಮಾಡಿದೆ ಎನ್ನಲಾಗಿದೆ. ಜೊತೆಗೆ ಆರ್‌ಎಸ್‌ಎಸ್ ಸಂಘಟನೆ ಪ್ರಬಲವಾಗಿರುವ ಕರಾವಳಿ ಭಾಗಕ್ಕೆ ಒಂದು ಸಚಿವ ಸ್ಥಾನ ಕೊಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಸಂಘ ಪರಿವಾರದಿಂದ ಹೈಕಮಾಂಡ್‌ಗೆ ಸೂಚನೆಯೂ ಹೋಗಿತ್ತು. ಆದರೆ ನೂತನ ಶಾಸಕರಲ್ಲಿ ಮೂರ್ನಾಲ್ಕು ಜನರನ್ನು ಕೈಬಿಟ್ಟು ಪ್ರಾಂತ್ಯವಾರು ಆದ್ಯತೆ ನೀಡಲು ಸೂಚಿಸಲಾಗಿತ್ತು.
ಯಡಿಯೂರಪ್ಪ ನೂತನ ಶಾಸಕರ ಮನವೊಲಿಕೆಯಲ್ಲೂ ಸೋಲುವ ಮೂಲಕ 10 ಮಂದಿ ಶಾಸಕರಿಗೆ ಮಣೆ ಹಾಕಿದರು. ಇದೇ ಗೊಂದಲದ ಕಾರಣದಿಂದ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ ಎನ್ನಲಾಗಿದೆ. ಸರ್ಕಾರದಲ್ಲಿ ಸಂಪೂರ್ಣ ಬಿ.ಎಸ್ ಯಡಿಯೂರಪ್ಪ ಆಪ್ತರೇ ತುಂಬಿಕೊಂಡರೆ ಸಂಘದ ಮಾತಿಗೆ ಬೆಲೆ ಸಿಗುವುದಿಲ್ಲ. ಕರಾವಳಿ ಭಾಗಕ್ಕೆ ಒಂದು ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೂ ಮುಖಭಂಗ ಎನ್ನುವ ಉದ್ದೇಶದಿಂದ ಕೇವಲ 10 ಜನರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಾ ಇದೆ. ಒಟ್ಟಾರೆ ಯಡಿಯೂರಪ್ಪನವರ ಸುಳ್ಳು ಆಶ್ವಾಸನೆ ಜೊತೆಗೆ ಸಂಘ ಪರಿವಾರದ ಕೈಚಳಕವೂ ಕೆಲಸ ಮಾಡಿದೆ ಎಂಬುದು ಇಲ್ಲಿ ಎದ್ದು ಕಾಣುತ್ತಿದೆ.