
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೋವಿಡ್ ಸಾಂಕ್ರಾಮಿಕ ಪ್ರಪಂಚದಾದ್ಯಂತ ದಾಂಗುಡಿ ಇಟ್ಟ ನಂತರ, ಸಂಪೂರ್ಣ ವಿಶ್ವವೇ ಸ್ಥಬ್ದವಾಗಿತ್ತು. ಅದರಲ್ಲೂ, ಕ್ರೀಡಾ ಕ್ಷೇತ್ರವಂತೂ ಉಸಿರಾಡಲಾಗದ ಪರಿಸ್ಥಿತಿಗೆ ಬಂದು ತಲುಪಿತ್ತು. ಆದರೆ, ಆಗಸ್ಟ್‌ನಿಂದ ಆರಂಭವಾದ ಕ್ರಿಕೆಟ್ ಪಂದ್ಯಾವಳಿಗಳು ಕ್ರಿಕೆಟ್ ಪ್ರಿಯರಿಗಂತೂ ಸಿಹಿ ಸುದ್ದಿಯನ್ನು ನೀಡಿದೆ. ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾದ ಬೆನ್ನಲ್ಲೇ, ಇಂಗ್ಲೆಂಡಿನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೊಸ ದಾಖಲೆಯನ್ನು ಬರೆಯುವುದರೊಂದಿಗೆ ತಾನಿನ್ನೂ ಕ್ರಿಕೆಟ್ ಆಡಲು ಫಿಟ್ ಆಗಿದ್ದೇನೆ ಎಂದು ನಿರೂಪಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪಡೆದ ಮೊತ್ತ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೆ ಜೇಮ್ಸ್ ಆ್ಯಂಡರ್ಸನ್ ಪಾತ್ರರಾಗಿದ್ದಾರೆ. ಪಾಕಿಸ್ತಾನ ವಿರುದ್ದ ನಡೆಯುತ್ತಿರುವ ಮೂರು ಟೆಸ್ಟ್‌ಗಳ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಕಪ್ತಾನ ಅಝರ್ ಅಲಿ ಅವರ ವಿಕೆಟ್ ಪಡೆಯುವ ಮೂಲಕ ಈ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಜೇಮ್ಸ್ ಆ್ಯಂಡರ್ಸನ್‌ಗಿಂತ ಹೆಚ್ಚಿನ ವಿಕೆಟ್ ಪಡೆದ ಬೌಲರ್‌ಗಳೆಲ್ಲರೂ ಸ್ಪಿನ್ನರ್‌ಗಳು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 708 ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ನಂತರದ ಸ್ಥಾನ ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್ (563) ಅವರ ಹೆಸರಲ್ಲಿದೆ.
ಜೇಮ್ಸ್ ಆ್ಯಂಡರ್ಸನ್ ಈವರೆಗೆ 156 ಟೆಸ್ಟ್ ಪಂದ್ಯಗಳನ್ನಾಡಿದ್ದು 26.79ರ ಸರಾಸರಿಯಲ್ಲಿ 600 ವಿಕೆಟ್ ಪಡೆದಿದ್ದಾರೆ. 29 ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದು, ಪಂದ್ಯವೊಂದರಲ್ಲಿ ಹತ್ತು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮೂರು ಬಾರಿ ಮಾಡಿದ್ದಾರೆ. 600 ವಿಕೆಟ್‌ಗಳಲ್ಲಿ 384 ವಿಕೆಟ್‌ಗಳನ್ನು ತವರಿನಲ್ಲಿ ಆಡುವಾಗ ಪಡೆದಿರುವ ಜೇಮ್ಸ್ ಆ್ಯಂಡರ್ಸನ್, ಉಳಿದ 216 ವಿಕೆಟ್‌ಗಳನ್ನು ವಿದೇಶಗಳಲ್ಲಿ ಪಡೆದಿದ್ದಾರೆ.
700 ವಿಕೆಟ್ ಪಡೆಯಲೂ ಸಾಧ್ಯ
600 ವಿಕೆಟ್ ಪಡೆದ ಸಾಧನೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿರುವ ಜೇಮ್ಸ್ ಆ್ಯಂಡರ್ಸನ್, 700 ವಿಕೆಟ್ ಪಡೆದವರ ಕ್ಲಬ್‌ಗೆ ಸೇರುವ ಎಲ್ಲಾ ಅರ್ಹತೆಗೊಳಿವೆ ಎಂದು ಹೇಳಿದ್ದಾರೆ.
“ಕಪ್ತಾನ ಜೋ ರೂಟ್ ಅವರೊಂದಿಗೆ ಕೂಡಾ ಈ ಕುರಿತಾಗಿ ಮಾತನಾಡಿದ್ದು, ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಶಸ್ ಸರಣಿಯಲ್ಲಿ ತಾನೂ ಇರುತ್ತೇನೆಂಬ ಭರವಸೆ ನೀಡಿದ್ದಾರೆ,” ಎಂದು ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ.

ಇಂಗ್ಲೆಂಡಿನ ಇನ್ನೋರ್ವ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡಾ ಇಂತಹದೇ ಸಾಧನೆಯ ಹಾದಿಯಲ್ಲಿದ್ದು, ಇನ್ನು ಕೇವಲ 6 ವಿಕೆಟ್ ಪಡೆದಲ್ಲಿ ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಶ್ (519) ಅವರನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರಲಿದ್ದಾರೆ.
ಹಲವು ಬಾರಿ ಗಾಯದ ಕಾರಣದಿಂದಾಗಿ ಮೈದಾನದಿಂದ ಹೊರಗುಳಿದಿದ್ದ ಜೇಮ್ಸ್ ಆ್ಯಂಡರ್ಸನ್ ಮತ್ತೆ ಕ್ರಿಕೆಟ್ ಫೀಲ್ಡ್‌ಗೆ ಮರಳಿ ಇಂತಹದೊಂದು ಸಾಧನೆ ಮಾಡಿರುವುದು ನಿಜಕ್ಕೂ ಎಲ್ಲಾ ವೇಗದ ಬೌಲರ್‌ಗಳಿಗೆ ಪ್ರೇರಣೆಯಾಗಿದೆ. 2019ರ ಜುಲೈನಲ್ಲಿ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ದೀರ್ಘಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದ ಜೇಮ್ಸ್ ಆ್ಯಂಡರ್ಸನ್, ಮತ್ತೆ ಬೌಲಿಂಗ್‌ನಲ್ಲಿ ತಮ್ಮ ಲಯ ಕಂಡು ಕೊಂಡಿರುವುದು, ಓರ್ವ ಆಟಗಾರನ ಸ್ಪರ್ಧಾತ್ಮಕ ಮನೋಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಕ್ರಿಕೆಟ್ ದಿಗ್ಗಜರ ಶುಭಾಶಯಗಳ ಮಹಾಪೂರ
ಜೇಮ್ಸ್ ಆ್ಯಂಡರ್ಸನ್ ಅಝರ್ ಅಲಿ ವಿಕೆಟ್ ಪಡೆಯುತ್ತಿದ್ದಂತೆಯೇ, ಕ್ರಿಕೆಟ್‌ನ ದಿಗ್ಗಜರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ಬ್ಯಾಟಿಂಗ್‌ನಲ್ಲಿ ಮೈಲಿಗಲ್ಲು ನೆಟ್ಟಂತೆ, ಜೇಮ್ಸ್ ಆ್ಯಂಡರ್ಸನ್ ಸಾಧನೆ ವೇಗಿಗಳಿಗೆ ಹೊಸ ಸವಾಲು ಮುಂದಿಟ್ಟಿದೆ, ಎಂದು ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್ ಹೇಳಿದ್ದಾರೆ.
ಕ್ರಿಕೆಟ್‌ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇಯ್ನ್, ಕರ್ಟ್ನಿ ವಾಲ್ಶ್, ವೆಸ್ಟ್ ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್, ಅನಿಲ್ ಕುಂಬ್ಳೆ, ಶೋಯಬ್ ಅಖ್ತರ್ ಸೇರಿದಂತೆ ಸಂಪೂರ್ಣ ಕ್ರಿಕೆಟ್ ಜಗತ್ತು, ಜೇಮ್ಸ್ ಆ್ಯಂಡರ್ಸನ್ ಅವರಿಗೆ ಶುಭಾಶಯಗಳ ಮಳೆಯನ್ನೇ ಸುರಿಸಿದೆ.
What an incredible achievement @jimmy9! Many congratulations on your feat.
6️⃣0️⃣0️⃣ wickets in Test Cricket over a span of 17 years for a fast bowler is a testament to your grit, perseverance and accurate bowling. pic.twitter.com/nQok5bgbOG
— Sachin Tendulkar (@sachin_rt) August 25, 2020
Congratulations @jimmy9 for this outstanding achievement of 600 wickets. Definitely one of the best bowlers I've faced.
— Virat Kohli (@imVkohli) August 25, 2020
Just take a moment to appreciate how good Jimmy is
600! You’re amazing bro! @jimmy9 #600— Dale Steyn (@DaleSteyn62) August 25, 2020
Congratulations to @jimmy9 hard word does pay off well done and keep on going champ 600 and counting
— Courtney A Walsh (@CuddyWalsh) August 25, 2020
Congratulations @jimmy9. What a splendid record to have. More power to you https://t.co/EmpxuBzdrL
— Sir Vivian Richards (@ivivianrichards) August 25, 2020
Congratulations @jimmy9 on your 600 wickets! Massive effort from a great fast bowler. Welcome to the club
— Anil Kumble (@anilkumble1074) August 25, 2020
ಭಾರತದ ಬುಮ್ರಾಗೆ ಸವಾಲೆಸೆದ ಯುವಿ
ಜೇಮ್ಸ್ ಆ್ಯಂಡರ್ಸನ್ ಸಾಧನೆ ಮಾಡುತ್ತಿದ್ದಂತೇ, ಅವರನ್ನು ಅಭಿನಂದಿಸುವ ಟ್ವೀಟ್ ಮಾಡಿದ ಜಸ್ಪ್ರೀತ್ ಬುಮ್ರಾಗೆ ಉತ್ತ ನೀಡಿರುವ ಯುವರಾಜ್ ಸಿಂಗ್, ನಿಮ್ಮ ಟಾರ್ಗೆಟ್ ಕನಿಷ್ಟ 400 ಆದರೂ ಆಗಿರಬೇಕು ಎಂದು ಹೇಳಿದ್ದಾರೆ.
Your target is 400 !! Minimum
— Yuvraj Singh (@YUVSTRONG12) August 25, 2020