ಕೇಂದ್ರ ಬಿಜೆಪಿ ಸರ್ಕಾರಕ್ಕೆ ಏಳು ವರ್ಷ; ರೈತರ ಏಳು ಪ್ರಶ್ನೆಗಳು: ಉತ್ತರಿಸುವುದೇ ಬಿಜೆಪಿ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷಗಳು ಪೂರ್ಣಗೊಳ್ಳುತ್ತಿವೆ. 2014ರಿಂದ 2019ರ ವರೆಗಿನ ಮೊದಲ ಅವಧಿಯ ಐದು ವರ್ಷಗಳು ಹಾಗೂ ಆ ನಂತರದ ೨ ವರ್ಷಗಳಲ್ಲಿ, ಬಿಜೆಪಿ ನೇತೃತ್ವದ ಸರ್ಕಾರವರು ಸುಭದ್ರವಾಗಿಕೇಂದ್ರದಲ್ಲಿ ನೆಲೆಯೂರಿದೆ. ರಾಮ ಮಂದಿರ, ಹಿಂದೂಮುಸ್ಲಿಂ ದ್ವೇಷ ರಾಜಕಾರಣದಿಂದಲೇ ಸಿನಿಕೀಯ ಭಾವನೆಗಳ ಮುಖಾಂತರ ಜನರಲ್ಲಿ ತನ್ನ ಅಜೆಂಡಾವನ್ನು ಭಿತ್ತರಿಸುವಲ್ಲಿ ಯಶಸ್ವಿಯಾಗಿದೆ. ADVERTISEMENT ಆದರೆ, ಈ ಸರ್ಕಾರಕ್ಕೆ ಈಗ ದೊಡ್ಡ ಕಂಟಕವಾಗಿ ಪರಿಣಮಿಸಿರುವುದು ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ರೈತ ಪ್ರತಿಭಟನೆ. ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಮೂರು ಕೃಷಿ ಕಾಯ್ದೆಗಳು ರೈತರ ಮರಣ ಶಾಸನ ಎಂದು ದೆಹಲಿಯ ಗಡಿಗಳಲ್ಲಿ ಬೀಡು ಬಿಟ್ಟಿರುವ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಮೈಕೊರೆಯುವ ಚಳಿ, ಮಳೆ, ಬಿರು ಬೇಸಿಗೆಯನ್ನೂ ಲೆಕ್ಕಿಸದೇ ತೀವ್ರವಾದ ಹೋರಾಟದಲ್ಲಿ ತೊಡಗಿರುವ ಈ ರೈತರು, ಬಿಜೆಪಿ ಸರ್ಕಾರದ ಏಳು ವರ್ಷದ ಆಡಳಿತಕ್ಕೆ ಏಳು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲನೇ ಪ್ರಶ್ನೆ: ಆರು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಮೋದೀಜಿಯವರ ಘೋಷಣೆ ಏನಾಯ್ತು? 28 ಫೆಬ್ರುವರಿ ೨2017ರಂದು ಪ್ರಧಾನಿ ಮೋದಿಯವರು ಈ ಘೋಷಣೆ ಮಾಡಿದ್ದರು. ಈಗ ಆರನೇ ವರ್ಷ ಮುಂದುವರೆಯುತ್ತಿದೆ. ಈಗ ರೈತರ ಆದಾಯದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂಬುದನ್ನು ತಿಳಿಯಲು ನಾವು ಉತ್ಸುಕರಾಗಿದ್ದೇವೆ. ಆದರೆ, ಇದನ್ನು ಕೇಳಿದರೆ ಸರ್ಕಾರ ಸಿಟ್ಟಿನಿಂದ ಬುಸುಗುಡುತ್ತಿದೆ. ರೈತರ ಆದಾಯ ದುಪ್ಪಟ್ಟು ಆಗುವುದಿರಲಿ, ರೈತರ ಆದಾಯದ ಕುರಿತಾಗಿ ದಾಖಲೆಗಳನ್ನು ನೀಡಲೂ ಸರ್ಕಾರ ಹಿಂಜರಿಯುತ್ತಿದೆ. ಈ ಯೋಜನೆಯನ್ನು ಜಾರಿಗೊಳಿಸಲು ಇರುವಂತಹ ಸಮಿತಿಯ ಅಂದಾಜಿನ ಪ್ರಕಾರ ಪ್ರತಿ ವರ್ಷ ಕೃಷಿ ಕ್ಷೇತ್ರದಲ್ಲಿ 10.4%ದಷ್ಟು ಪ್ರಗತಿ ಸಾಧಿಸಿದರೆ ಮಾತ್ರ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯ. ಆದರೆ, ಕಳೆದ ಕೆಲವು ವರ್ಷಗಳಲ್ಲಿ 3.3%ದಷ್ಟು ಮಾತ್ರ ಪ್ರಗತಿಯಾಗಿದೆ. ಎರಡನೇ ಪ್ರಶ್ನೆ: ಸ್ವಾಮಿನಾಥನ್ ವರದಿಯ ಪ್ರಕಾರ ರೈತರ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಲಾಭ ನೀಡುವ ನಿಮ್ಮ ಭರವಸೆ ಏನಾಯ್ತು? ಪ್ರಧಾನ ನಂತ್ರಿ ಆಗುವುದಕ್ಕಿಂತಲೂ ಮುಂಚೆ ನರೇಂದ್ರ ಮೋದಿಯವರು ಈ ಭರವಸೆ ನೀಡಿದ್ದರು. ಆದರೆ, ಅಧಿಕಾರ ಸಿಕ್ಕ ಬಳಿಕ ಸುಪ್ರಿಂಕೋರ್ಟ್ ಎದುರು ತಮ್ಮ ಭರವಸೆಯಿಂದ ಹಿಂದೆ ಸರಿದರು. ನಂತರ ರೈತರ ಕಣ್ಣಿಗೆ ಮಣ್ಣೆರಚಲು ‘ವೆಚ್ಚ’ದ ವ್ಯಾಖ್ಯಾನವನ್ನೇ ಸರ್ಕಾರ ಬದಲಾಯಿಸಿತು. ಹೊಸ ವ್ಯಾಖ್ಯಾನವನ್ನೇ ರೈತ ಪಾಲಿನ ಆಶಾಕಿರಣ ಎಂಬಂತೆ ಬಿಂಬಿಸಲಾಯಿತು. ಆದರೆ, ಸತ್ಯ ಏನೆಂದರೆ, ಕಳೆದ ಆರು ವರ್ಷಗಲ ಎಂ ಎಸ್ ಪಿ ದರ ಹೆಚ್ಚಳದ ಪ್ರಮಾಣ ಯುಪಿಎ ಸರ್ಕಾರಕ್ಕಿಂತಲೂ ಕಡಿಮೆಯಿದೆ. ಮೂರನೇ ಪ್ರಶ್ನೆ: ಸರ್ಕಾರದ ಡಂಗುರ ಘೋಷಣೆಯ ಬಳಿಕವೂ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ಏಕೆ ವಿಫಲವಾಯ್ತು? ಈ ಯೋಜನೆಯ ಘೊಷಣೆಯ ವೇಳೆ ಪ್ರಧಾನಿಗಳು ಹೇಳಿದ್ದರು, ಈ ಹಿಂದಿನ ಬೆಳೆ ವಿಮೆಯಿಂದ ಕೇವಲ 23% ರೈತರ ಪ್ರಯೋಜನ ಸಿಗುತ್ತಿತ್ತು. 2018ರ ವೇಳೆಗೆ 50% ರೈತರಿಗೆ ಬೆಳೆ ವಿಮೆಯ ಪ್ರಯೋಜನ ಸಿಗಲಿದೆ. ಆದರೆ, ನಡೆದದ್ದು ಸಂಪೂರ್ಣ ವ್ಯತಿರಿಕ್ತ. ಐದು ವರ್ಷಗಳ ನಂತರ 2020ರಲ್ಲಿ ಬೆಳೆ ವಿಮೆಯ ಪ್ರಯೋಜನವನ್ನು ಪಡೆಯುವ ರೈತರ ಸಂಖ್ಯೆ 13 ಶೇಕಡಕ್ಕೆ ಕುಸಿಯಿತು. 4.9 ಕೋಟಿಯಷ್ಟು ಬೆಳೆ ವಿಮೆ ಪ್ರಯೋಜನ ಪಡೆಯುತ್ತಿದ್ದ ರೈತರ ಸಂಖ್ಯೆ 2.7 ಕೋಟಿಯಷ್ಟು ಇಳಿಯಿತು. ನಾಲ್ಕನೇ ಪ್ರಶ್ನೆ: ಕಳೆದ ಏಳು ವರ್ಷದಲ್ಲಿ ರೈತರು ಸಂಕಷ್ಟದಲ್ಲಿದ್ದಾಗ ಕೇಂದ್ರ ಸರ್ಕಾರ ಏಕೆ ತನ್ನ ಕೈ ತೊಳೆದುಕೊಂಡಿತು? ಕಳೆದ ಏಳು ವರ್ಷಗಳಲ್ಲಿ ದೇಶದಾದ್ಯಂತ ಎರಡು ಬಾರಿ ಬರ ಪರಿಸ್ಥಿತಿ ಎದುರಾಯ್ತು. ಅಸ್ಸಾಂ ಮತ್ತು ಬಿಹಾರದಲ್ಲಿ ತೀವ್ರ ಪ್ರವಾಹ ಉಂಟಾಗಿತ್ತು. ತಮಿಳುನಾಡಿನಲ್ಲಿ ಹಿಂದೆಂದೂ ಕೇಳದಂತಹ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. 2016ರ ನೋಟು ಅಮಾನ್ಯೀಕರಣ, 2020-21ರಲ್ಲಿ ಕರೋನಾ ಲಾಕ್್ಡೌನ್ ರೈತರನ್ನು ಪೆಡಂಭೂತದಂತೆ ಕಾಡಿದವು. ಆದರೆ, ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್’ನಲ್ಲಿ ಬರಗಾಲದ ಕುರಿತು ಅಫಿಡವಿಟ್ ಸಲ್ಲಿಸಿ ಇದು ರಾಜ್ಯಗಳ ಜವಾಬ್ದಾರಿ ಎಂದು ಹೇಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿತು. ರಾಜ್ಯಗಳ ಬಳಿ ಹಣವಿರಲಿಲ್ಲ. ಕೇಂದ್ರ ಹಣ ನೀಡದೇ ಜುಗ್ಗತನ ಪ್ರದರ್ಶಿಸಿತು. ಇದನ್ನು ಸರಿಪಡಿಸಲು ಸುಪ್ರಿಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತಾದರೂ, ಈ ನಿರ್ದೇಶನಗಳ ಪಾಲನೆಯಾಗಲಿಲ್ಲ. ಲಾಕ್ಡೌನ್ ನ ವಿಶೇಷ ಪ್ರಾಕೇಜ್’ನಲ್ಲಿ ಒಂದು ರೂಪಾಯಿ ಕೂಡಾ ನೇರವಾಗಿ ರೈತನ ಕೈಗಳಿಗೆ ಹೋಗಲಿಲ್ಲ. ಐದನೇ ಪ್ರಶ್ನೆ: ಕೃಷಿ ವೆಚ್ಚಗಳನ್ನು ಕಡಿಮೆಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಅವಧಿಯಲ್ಲಿ ರಸಗೊಬ್ಬರ, ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಇಷ್ಟು ಏರಿಕೆ ಯಾಕಾಯ್ತು? ಇದಕ್ಕಾಗಿ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ್ನು ದೂರುವುದನ್ನು ಬಿಟ್ಟುಬಿಡಿ. 2014ರಲ್ಲಿ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್’ಗೆ 106 ಡಾಲರ್ ಇದ್ದಾಗ ದೆಹಲಿಯಲ್ಲಿ ಡೀಸೆಲ್ ಪ್ರತಿ ಲೀಟರ್ ಗೆ 55 ರೂ. ಇತ್ತು. ಇವತ್ತು ಕಚ್ಚಾ ತೈಲ ಬೆಲೆ 67 ಡಾಲರ್ ಆಗಿದೆ. ಆದರೆ ಡೀಸೆಲ್ ಬೆಲೆ ಆಕಾಶ ಮುಟ್ಟುತ್ತಿದೆ. ಇದೇ ಸರ್ಕಾರದ ಆಡಳಿತದಲ್ಲಿ ಯೂರಿಯಾ ರಸಗೊಬ್ಬರದ ಬೆಲೆ ಗಗನಕ್ಕೇರಿತು. ಇದರೊಂದಿಗೆ ಡಿಎಪಿ ಹಾಗೂ ಪೊಟ್ಯಾಷ್ ಬೆಲೆಯಲ್ಲೂ ಏರಿಕೆಯಾಯಿತು. ಆರನೇ ಪ್ರಶ್ನೆ: ರೈತರನ್ನು ವಿನಾಶದಂಚಿಗೆ ದೂಡುವ ಆಮದು-ರಫ್ತು ನೀತಿಯನ್ನು ಸರ್ಕಾರ ಏಕೆ ಅನುಸರಿಸಿತು? ಕೃಷಿ ರಫ್ತನ್ನು ಪ್ರೋತ್ಸಾಹಿಸುವ ಬದಲು ಆಲೂಗಡ್ಡೆ ಹಾಗೂ ಈರುಳ್ಳಿ ರಫ್ತಿನ ಸುಂಕವನ್ನು ಹೆಚ್ಚಿಸಲಾಯಿತು. ದವಸ ಧಾನ್ಯಗಳ ಆಮದಿಗೆ ಸುಂಕ ವಿನಾಯಿತಿ ನೀಡಲಾಯಿತು. ಇದರಿಂದಾಗಿ ಇಲ್ಲಿನ ರೈತರಿಗೆ ನ್ಯಾಯಯುತ ಬೆಲೆ ಸಿಗದೇ ನಿರಾಶರಾದರು. 2013,14ರಲ್ಲಿ ಅಂತರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ ಭಾರತಕ್ಕೆ 1 ಲಕ್ಷ 59 ಸಾವಿರ ಕೋಟಿಯಷ್ಟು ನಷ್ಟ ಉಂಟಾಯಿತು. ಆದರೆ, ಆಮದು ಹೆಚ್ಚಳವಾದಂತೆ ಈ 2019,20ರ ವೇಳೆಗೆ ಈ ನಷ್ಟ ಒಂದು ಲಕ್ಷ 5 ಸಾವಿರ ಕೋಟಿಯಷ್ಟು ಇನ್ನೂ ಉಳಿದಿದೆ. ಏಳನೇ ಪ್ರಶ್ನೆ: ಯಾವ ಕಾನೂನುಗಳನ್ನು ರೈತರು ಕೇಳಲಿಲ್ಲ, ಬಯಸಲಿಲ್ಲ ಅಂತಹ ಕಾನೂನುಗಳನ್ನು ಅವರ ಮೇಲೆ ಏಕೆ ಹೇರಲಾಯಿತು? ಒಣಹುಲ್ಲು ಸುಡುವ ಕಾನೂನು ಜಾರಿಗೆ ತಂದು ರೈತರಿಗೆ ಒಂದು ಕೋಟಿಯಷ್ಟು ದಂಡ ಮತ್ತು ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ನಿಯಮ ಏಕೆ ಮಾಡಲಾಯಿತು? ವಿದ್ಯುತ್ ಕಾನೂನಿನಲ್ಲಿ ರೈತರಿಗೆ ಸಿಗುತ್ತಿದ್ದ ರಿಯಾಯಿತಿಯನ್ನು ಏಕೆ ಹತ್ತಿಕ್ಕಲಾಯಿತು? ರೈತರ ಐತಿಹಾಸಿಕ ಪ್ರತಿಭಟನೆಯ ನಂತರವೂ ಸರ್ಕಾರದ ಕಿವಿಗಳು ಏಕೆ ಕಿವುಡಾಗಿವೆ? ಈ ಐತಿಹಾಸಿಕ ಚಳವಳಿಯನ್ನು ಒಡೆಯುವ, ದುರ್ಬಲಗೊಳಿಸುವ, ಬೆದರಿಸುವ ಮತ್ತು ಅಪಮಾನಿಸುವ ಪ್ರಯತ್ನವನ್ನು ಸರ್ಕಾರ ಏಕೆ ಮಾಡಿತು? ಈ ಏಳು ತೀಖ್ಷ್ಣವಾದ ಪ್ರಶ್ನೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಧಾನ ಅಥವಾ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯತೆ ಕೇಂದ್ರ ಸರ್ಕಾರಕ್ಕೆ ಇಲ್ಲದಿರಬಹುದು. ಆದರೆ, ಈ ಪ್ರಶ್ನೆಗಳ ಕುರಿತಾಗಿ ಜನಸಾಮಾನ್ಯರು ಚಿಂತಿಸಬೇಕಾಗಿದೆ. ದೇಶದ ಬೆನ್ನೆಲುಬಾಗಿರುವ ರೈತನ ಬೆನ್ನಿಗೆ ನಿಲ್ಲಬೇಕಿದೆ.
Copy and paste this URL into your WordPress site to embed
Copy and paste this code into your site to embed