ಕರೋನಾ ಸೋಂಕಿನಿಂದ ಎದುರಾದ ಸಂಕಷ್ಟಗಳಿಂದ ಪಾರಾಗಲು ವಿಶ್ವದಾದ್ಯಂತ ದೇಶಗಳು ಹೋರಾಟ ನಡೆಸುತ್ತಿರುವಾಗ ಭಾರತದಲ್ಲಿ ಒಂದು ಸಮುದಾಯದ ವಿರುದ್ಧ ಹರಡುತ್ತಿರುವ ದ್ವೇಷಪೂರಿತ ಸುಳ್ಳು ವರದಿಗಳು ಸುದ್ದಿಯಾಗುತ್ತಿದೆ. ಗಲ್ಫ್ ರಾಜ್ಯಗಳು ಈ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಗಲ್ಫ್ ರಾಜ್ಯದಲ್ಲಿದ್ದುಕೊಂಡು ಮುಸ್ಲಿಂ ಸಮುದಾಯಗಳ ವಿರುದ್ಧ ದ್ವೇಷ ಹರಡುವವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ.
ಸೌದಿ ದೊರೆ ಹಾಗೂ ಧಾರ್ಮಿಕ ಶ್ರಧ್ದಾ ಕೇಂದ್ರವಾದ ಮಕ್ಕಾದ ಕಅಬಾದ ವಿರುದ್ಧ ತನ್ನ ಫೇಸ್ಬುಕ್ ಅಕೌಂಟಿಂದ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹರೀಶ್ ಬಂಗೇರ ಅವರು ಇನ್ನೂ ಸೌದಿಯ ಜೈಲಿನಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿಯ ಮಗನೊಬ್ಬನನ್ನು ಧಾರ್ಮಿಕ ಅವಹೇಳನ ಮತ್ತು ದ್ವೇಷ ಹರಡಿದ ಕಾರಣಕ್ಕೆ ಸೌದಿ ಸರಕಾರ ಬಂಧಿಸಿದ್ದು ಭಾರತೀಯ ದೂತವಾಸ ನೇರವಾಗಿ ಸಂಪರ್ಕಿಸಿದರೂ ಪ್ರಕರಣವನ್ನು ಕೈ ಬಿಟ್ಟಿಲ್ಲ. ಧಾರ್ಮಿಕ ಅವಹೇಳನ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಗಲ್ಫ್ ರಾಷ್ಟ್ರಗಳು ಎಚ್ಚರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಭಾರತೀಯ ಅನಿವಾಸಿಗಳು ಉದ್ಯೋಗ ಕಳೆದುಕೊಂಡಿದ್ದಾರೆ.
UAE ಯ ರಾಜಮನೆತನ,ವಿದ್ವಾಂಸರು ಹಾಗೂ ಬ್ಯುಸಿನೆಸ್ ಮ್ಯಾನ್ಗಳು ಇತ್ತೀಚೆಗೆ ಗಲ್ಫ್ ರಾಜ್ಯದಲ್ಲಿ ಕೆಲಸ ಮಾಡಿಕೊಂಡು ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿರುವ ಭಾರತೀಯರನ್ನು ಮತ್ತು ಭಾರತದಲ್ಲಿ ʼಇಸ್ಲಾಮೋಫೋಬಿಯʼ ಹರಡುತ್ತಿರುವುದನ್ನು ತನ್ನ ಟ್ವಿಟರ್ ಅಕೌಂಟಿನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. RSS ನ ಅಡಿಯಲ್ಲಿ ಭಾರತವನ್ನು ಫ್ಯಾಸಿಸಂ ಶಕ್ತಿಗಳು ಆಳುತ್ತಿವೆ. ಭಾರತ ತನ್ನದೇ ಪ್ರಜೆಗಳನ್ನು ಅಮಾನವೀಯವಾಗಿ ನಡೆಸುತ್ತಿದೆ ಎಂದು ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಭಾರತದ ಯುವ ಸಂಸದ ತೇಜಸ್ವಿ ಸೂರ್ಯ ಅರಬ್ ಮಹಿಳೆಯರ ಬಗ್ಗೆ ಕೀಳಾಗಿ ಬರೆದಿದ್ದ ಹಳೆಯ ಟ್ವೀಟಿನ ಸ್ಕ್ರೀನ್ ಶಾಟನ್ನು ಹಾಕಿ “ತೇಜಸ್ವೀ ಸೂರ್ಯ, ನಿಮ್ಮ ಬೆಳವಣಿಗೆ ಕುರಿತು ಸಂತಾಪವಿದೆ. ಭಾರತದಲ್ಲಿ ಹಲವಾರು ಧೀಮಂತ ಮಹಿಳಾ ನಾಯಕಿಯರಿದ್ದರೂ ನಿಮಗೆ ಮಹಿಳೆಯರ ಮೇಲೆ ಯಾವ ಗೌರವವೂ ಇಲ್ಲವೆಂದು ಈ ಟ್ವೀಟ್ ತೋರಿಸುತ್ತದೆ. ಎಂದಾದರೂ ಭಾರತ ಸರಕಾರ ನಿಮ್ಮನ್ನು ವಿದೇಶಿ ಮಂತ್ರಿ ಮಾಡಿದರೆ, ಗಲ್ಫ್ ರಾಜ್ಯಗಳಿಗೆ ಕಾಲಿಡಲು ಧೈರ್ಯ ತೋರಬೇಡಿ. ನಿಮಗಿಲ್ಲಿ ಸ್ವಾಗತವಿಲ್ಲ. ಇದನ್ನು ನೆನಪಿಟ್ಟುಕೊಳ್ಳಲಾಗುವುದು” ಎಂದು ನೂರಾ ಅಲ್ ಘುರೈರ ಟ್ವೀಟ್ ಮಾಡಿದ್ದಾರೆ. ನೂರಾ ತರಾಟೆಗೆ ತೆಗದುಕೊಂಡು ಟ್ವೀಟ್ ಮಾಡಿದ ಬೆನ್ನಿಗೆ ತೇಜಸ್ವಿ ಸೂರ್ಯರ ಅಕೌಂಟಿಂದ ಹಳೆಯ ಟ್ವೀಟನ್ನು ಡಿಲಿಟ್ ಮಾಡಲಾಗಿದೆ.
ತೇಜಸ್ವಿ ಸೂರ್ಯರ ಟ್ವೀಟನ್ನು ಪ್ರಸ್ತಾಪಿಸಿ ಭಾರತದ ಪ್ರಧಾನಿಯಲ್ಲಿ ತಮ್ಮ ಸಂಸದನನ್ನು ಪದಚ್ಯುತಗೊಳಿಸಿ ಶಿಕ್ಷೆಗೊಳಪಡಿಸಬೇಕೆಂದು ಅಬ್ದುಲ್ ರಹ್ಮಾನ್ ಅಲ್ನಾಸರ್ ಒತ್ತಾಯಿಸಿದ್ದಾರೆ.
ಸೌದಿಯ ಚಿಂತಕ ಆಬಿದ್ ಝಹ್ರಾನಿ ಇಸ್ಲಾಮ್ ಧರ್ಮ,ಮುಸ್ಲಿಮರ ಹಾಗೂ ಪ್ರವಾದಿ ಮಹಮ್ಮದರ ವಿರುದ್ಧ ದ್ವೇಷ ಹರಡುವ ಭಾರತೀಯರನ್ನು ಮರಳಿ ಭಾರತಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜಕುಮಾರಿ ಹೆಂಡ್ ಅಲ್ ಕಾಸ್ಸಿಮಿ UAEಯಲ್ಲಿ ಜನಾಂಗೀಯ ದ್ವೇಷ ಹರಡುವವರು ಶಿಕ್ಷೆಗೊಳಗಾಗುತ್ತಾರೆ ಹಾಗೂ ಗಡಿಪಾರಾಗುತ್ತರೆಂದು ಸೌರಭ್ ಉಪಧ್ಯಾಯ್ ಎಂಬವರ ದ್ವೇಷಪೂರಿತ ಟ್ವೀಟಿನ ಸ್ಕ್ರೀನ್ ಶಾಟ್ ಹಾಕಿದ್ದಾರೆ.
ನಂತರದ ಟ್ವೀಟಿನಲ್ಲಿ “ಕಣ್ಣಿಗೆ ಕಣ್ಣು ತೆಗೆಯುತ್ತಾ ಹೋದರೆ ಕೊನೆಗೆ ಜಗತ್ತೆಲ್ಲಾ ಕುರುಡಾಗುತ್ತದೆ” ಎಂಬ ಗಾಂಧಿಯ ಮಾತನ್ನು ಉಲ್ಲೇಖಿಸುತ್ತಾ ದ್ವೇಷ ಭಾಷಣವು ನರಮೇಧದ ಪ್ರಾರಂಭಿಕ ಲಕ್ಷಣ. ಸಾವಿನಿಂದ ಸಾವು ಹಾಗೂ ಪ್ರೀತಿಯಿಂದ ಪ್ರೀತಿ ಹುಟ್ಟುತ್ತದೆ. ಏಳಿಗೆ ಶಾಂತಿಯಿಂದ ಶುರುವಾಗುತ್ತದೆ ಎಂದು ಟ್ವೀಟಿಸಿದ್ದಾರೆ.
ಸದ್ಯ ಎಲ್ಲಾ ಗಲ್ಫ್ ರಾಷ್ಟ್ರಗಳು ಭಾರತದ ಇಸ್ಲಾಮೋಫೋಬಿಯಾದ ವಿರುದ್ಧ ತಿರುಗಿ ಬಿದ್ದಿದ್ದು, ಇದುವರೆಗೂ ಗಲ್ಫ್ ರಾಷ್ಟ್ರಗಳಲ್ಲಿದ್ದು, ದ್ವೇಷ ಬಿತ್ತುತ್ತಿದ್ದ ಹಿಂದುತ್ವವಾದಿಗಳನ್ನು ಕಾನೂನಿನ ಕುಣಿಕೆಯಡಿ ಶಿಕ್ಷೆಗೊಳಪಡಿಸಲು ಗಲ್ಫ್ ದೇಶಗಳು ಮುಂದಾಗಿವೆ. ಕುವೈಟ್ ರಾಜಮನೆತನದ ಅಲ್ ನಸ್ಸರ್ ಟ್ವೀಟ್ ಮಾಡಿದ್ದು, ಗಲ್ಫ್ ದೇಶದಲ್ಲಿದ್ದು ಧಾರ್ಮಿಕ ದ್ವೇಷ ಬಿತ್ತುವವರ ಮಾಹಿತಿ ವೈಯಕ್ತಿಕವಾಗಿ ನೀಡುವಂತೆ ತಿಳಿಸಿದ್ದಾರೆ.
ಮಾತ್ರವಲ್ಲದೇ ಗಲ್ಫ್ ರಾಷ್ಟ್ರದಲ್ಲಿ ಆರ್ಎಸ್ಎಸ್ ಚಟುವಟಿಕೆ ನಡೀತಾ ಇದ್ದರೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಇದು ಮಾತ್ರವಲ್ಲದೇ ಯುಎಇ ರಾಜಮನೆತನತದ ಮಂದಿ ತೇಜಸ್ವಿ ಸೂರ್ಯ ಟ್ವೀಟ್ ಕುರಿತು ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಸುಬ್ರಹ್ಮಣ್ಯ ಸ್ವಾಮಿ ಭಾಷಣ ತುಣುಕು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅಲ್ ನಸ್ಸರ್, ಭಾರತದ ಪ್ರಜಾಪ್ರಭುತ್ವವನ್ನೇ ಅಣಕಿಸಿದ್ದಾರೆ. ಇದಲ್ಲದೇ ಆರ್ಎಸ್ಎಸ್ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ದಾವೆ ಹೂಡಲು ಗಲ್ಫ್ ದೇಶಗಳು ನಿರ್ಧರಿಸಿದ್ದು, ಎನ್ಜಿಓಗಳಿಂದ ಮಾಹಿತಿ ಪಡೆಯಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯ ಬುದ್ಧಿಜೀವಿಗಳು ಅರಬ್ ಮುಖಂಡರ ಖಾತೆಗಳಿಗೆ ಆರ್ಎಸ್ಎಸ್ ನ ನೈಜ ಮುಖವಾಡ ಏನು ಅನ್ನೋದನ್ನ ಲಗತ್ತಿಸಿದ್ದಾರೆ. ಇದನ್ನ ರಾಜಮನೆತನದ ಮಂದಿ, ಗಲ್ಫ್ ವಕೀಲರು ನರಮೇಧಗಳನ್ನ ಉಲ್ಲೇಖಿಸಿ ರಿಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೇ ಮುಗಿಯದ ಇಸ್ಲಾಮಿಕ್ ದೇಶಗಳ ಟ್ವೀಟ್ ವಾರ್, ದೇಶದ ಬಹುಬೇಡಿಕೆಯ ಬಹುಭಾಷಾ ಗಾಯಕ ಸೋನು ನಿಗಂ ವಿರುದ್ಧವೂ ತಿರುಗಿ ಬಿದ್ದಿದೆ. ಈ ಹಿಂದೆ ಅಝಾನ್ ವಿರುದ್ಧ ಮಾಡಿದ್ದ ಟ್ವೀಟ್, ಮತ್ತೆ ಚರ್ಚೆಗೆ ಬಂದಿದ್ದು, ಸದ್ಯ ದುಬೈನಲ್ಲಿ ನೆಲೆಸಿರುವ ಸೋನುಗೆ ತಿರುಗುಬಾಣವಾಗಿದೆ. ಟ್ವೀಟ್ ಖಾತೆ ಬರ್ಖಾಸ್ತುಗೊಳಿಸಿದ್ದರೂ ಗಲ್ಫ್ ರಾಜಮನೆತನ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಇದು ಸದ್ಯ ಟ್ವೀಟ್ನಲ್ಲೂ ಟಾಪ್ ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿದ್ದು, ಕಾನೂನು ಭೀತಿ ಎದುರಿಸುವಂತಾಗಿದೆ.
ತೇಜಸ್ವಿ ಸೂರ್ಯನ ಐದು ವರುಷಗಳ ಹಿಂದಿನ ಟ್ವೀಟ್ ಅವರು ಸಂಸತ್ ಸದಸ್ಯ ಆದ ನಂತರ ಚರ್ಚೆಗೆ ಕಾರಣವಾಗಿದ್ದು, ಅಂತರಾಷ್ಟ್ರೀಯ ಸಂಬಂಧಕ್ಕೆ ಹುಳಿ ಹಿಂಡಿದಂತಾಗಿದೆ. ಅದರಲ್ಲೂ ಭಾರತಕ್ಕೆ ಪ್ರಮುಖ ತೈಲ ಪೂರೈಕೆ ದೇಶದ ಮಹಿಳೆಯರ ಬಗ್ಗೆಯೇ ಅವಮಾನ ಮಾಡಿದ್ದು, ಭಾರತದ ಮಾನವನ್ನ ಮುಂದಾಲೋಚನೆ ಇಲ್ಲದ ಆರ್ಎಸ್ಎಸ್ ಕಟ್ಟಾಳು ತೇಜಸ್ವಿ ಸೂರ್ಯನಂತವರು ಹರಾಜಿಗಿಡುತ್ತಿದ್ದಾರೆ.
ಈ ಹಿಂದೆ ಸಿಎಎ, ಎನ್ಆರ್ಸಿ ಪರ ಪ್ರತಿಭಟನೆಯಲ್ಲಿ, “ಎದೆ ಸೀಳಿದ್ರೆ ಎರಡಕ್ಷರ ಇಲ್ಲದವರು, ಟೈರ್ ಪಂಕ್ಚರ್ ಹಾಕುವವರು ಸಿಎಎ ವಿರೋಧಿಗಳು” ಎಂದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಆ ಹೇಳಿಕೆಯಿಂದ ತೇಜಸ್ವಿ ಸೂರ್ಯ ಹಿಂದೆ ಸರಿದಿದ್ದರು. ಇದೀಗ ಅವರ ಮಹಿಳಾ ವಿರೋಧಿ ಟ್ವೀಟ್ ಮತ್ತೆ ಮುನ್ನೆಲೆಗೆ ಬಂದು, ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವೈವಿಧ್ಯತೆಗೆ ಅಡ್ಡಪಡಿಸಿದಂತಾಗಿದೆ.
ಇಷ್ಟಾಗುತ್ತಲೇ ಕೇಂದ್ರ ಸರಕಾರ ತನ್ನ ಬಳಿ ಇರುವ ಏಕೈಕ ಮುಸ್ಲಿಂ ಮುಖ ಮುಕ್ತಾರ್ ಅಬ್ಬಾಸ್ ನಕ್ವಿಯನ್ನು ಮುಂದೆ ಇಟ್ಟಿದ್ದು, ಮೋದಿ ಸರಕಾರದ ಸಮರ್ಥನೆಗೆ ನಿಂತಿದ್ದಾರೆ. “ಭಾರತ ಅನ್ನೋದು ಮುಸ್ಲಿಮರ ಪಾಲಿಗೆ ಸ್ವರ್ಗದಂತೆ. ಅವರು ಇಲ್ಲಿ ತಮ್ಮ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಹಕ್ಕುಗಳಿಂದ ಸುರಕ್ಷಿತರಾಗಿದ್ದಾರೆ” ಎಂದು ಹೇಳಿಕೆ ನೀಡಿದ್ದು, ಇದನ್ನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದಾವೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಧ್ಯಪ್ರಾಚ್ಯದಿಂದ ಬರುತ್ತಿರುವ ಹಣದಿಂದಲೇ ಭಾರತದಲ್ಲಿ ಹಿಂದೂಗಳು ಸೇರಿದಂತೆ ಹಲವಾರು ಕುಟುಂಬಗಳು ದಿನದೂಡುತ್ತಿವೆ. ಹಿಂದಿನಿಂದಲೂ ಗಲ್ಫ್ ರಾಜ್ಯಗಳೊಂದಿಗೆ ಭಾರತ ಸರಕಾರ ಉತ್ತಮ ರಾಜತಾಂತ್ರಿಕ ಬಾಂಧವ್ಯವನ್ನು ಹೊಂದಿದೆ. ಭಾರತದ ಸಂಸದರೊಬ್ಬರನ್ನು ಗಲ್ಫ್ ರಾಜ್ಯದಲ್ಲಿ ಹೀಗೆ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲು. ಸಾಮಾಜಿಕ ಜಾಲತಾಣದ ಬಳಕೆದಾರರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೀನಮಾನವಾಗಿ ತೇಜಸ್ವಿ ಸೂರ್ಯರನ್ನು ಹಾಗೂ ತೇಜಸ್ವಿ ಸೂರ್ಯರಂತಹ ಸಂಸದರನ್ನು ತನ್ನ ಸರಕಾರದಲ್ಲಿರಿಸಿದ ಭಾರತ ಸರಕಾರವನ್ನುಟೀಕಿಸುತ್ತಿದ್ದಾರೆ.
ಭಾರತವನ್ನು ವಿಶ್ವಗುರುವನ್ನಾಗಿ ಮಾಡುತ್ತೇನೆಂದು ಹೇಳುತ್ತಿರುವ ಮೋದಿ ಸರಕಾರದ ಸಂಸದ ಹಾಗೂ ತನ್ನ RSS ಸಂಘಟನೆಯ ಸಿದ್ಧಾಂತದಿಂದಲೇ ಭಾರತದ ಮಾನ ವಿಶ್ವಮಟ್ಟದಲ್ಲಿ ಹರಾಜಾಗುತ್ತಿದೆ ಎಂದು ಹಲವಾರು ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.