ಭಾರತದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ, ಕರೋನಾದ ದುಸ್ಥಿತಿ, ಭಾರತ ಮತ್ತು ಚೀನಾ ಗಡಿಯಲ್ಲಿ ಆಗುತ್ತಿರುವ ಅಧೋಗತಿ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಸದ್ಯ ಗಟ್ಟಿ ದನಿಯಲ್ಲಿ ಮಾತನಾಡುತ್ತಿರುವ ನಾಯಕನೆಂದರೆ ರಾಹುಲ್ ಗಾಂಧಿ. ಕೆಲವೊಮ್ಮೆ ಅವರ ಸಹೋದರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದನಿ ಎತ್ತುತ್ತಿದ್ದಾರೆ. ಆದರೆ ಅವರ ಬಹುತೇಕ ವಿಷಯಗಳು ಉತ್ತರ ಪ್ರದೇಶ ಕೇಂದ್ರಿಕೃತವಾಗಿರುತ್ತವೆ. ಆಗೊಮ್ಮೆ ಈಗೊಮ್ಮೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಮಾತನಾಡುತ್ತಿದ್ದಾರೆ. ಆದರೆ ಗಾಂಧಿ ಪರಿವಾರದ ಆಚಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ, ಪ್ರಧಾನ ನರೇಂದ್ರ ಮೋದಿಯವರ ಮೌನದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಏಕೈಕ ನಾಯಕರೆಂದರೆ ಕೇಂದ್ರದ ಮಾಜಿ ಸಚಿವರಾದ ಪಿ. ಚಿದಂಬರಂ.
ಕೇಂದ್ರ ಸರ್ಕಾರದ ಗೃಹ ಸಚಿವರಾಗಿ, ಹಣಕಾಸು ಸಚಿವರಾಗಿ ಸರ್ವೋಚ್ಚ ನ್ಯಾಯಾಲಯದ ವಕೀಲರು ಆಗಿರುವ ಪಿ. ಚಿದಂಬರಂ, ಸರ್ಕಾರ, ಆಡಳಿತ ವ್ಯವಸ್ಥೆಯ ಆಳ-ಅಗಲವನ್ನು ಚೆನ್ನಾಗಿ ಬಲ್ಲವರು. ನೀತಿ-ನಿರೂಪಣೆಯಲ್ಲಿ ನಿಪುಣರು. ಅವರು ವಿಪಕ್ಷದ ತಮ್ಮ ಸಾಥಿಗಳೆಲ್ಲರೂ ಸುಮ್ಮನಿರುವಾಗ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಖಡಕ್ ಪ್ರಶ್ನೆಗಳನ್ನು ಎತ್ತುತ್ತಾ ತಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇಂದು ಮತ್ತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರೋನಾ ಬರುವ ಮುನ್ನವೇ ದೇಶದ ಆರ್ಥಿಕ ಪರಿಸ್ಥಿತಿ ಪಾತಳಮುಖಿಯಾಗಿತ್ತು. ಅದಕ್ಕೆ ಪ್ರಧಾನಿ ಮೋದಿಯವರ ಆಡಳಿತ ವೈಖರಿಯೇ ಕಾರಣ. ನೋಟ್ ಬ್ಯಾನ್ ನಿಂದ ಹಿಡಿದು ಮೊದಲ ಹಂತದ ಲಾಕ್ಡೌನ್ ಘೋಷಣೆ ಮಾಡುವವರೆಗೆ ಮೋದಿ ತೆಗೆದುಕೊಂಡ ಏಕಮುಖ ನಿರ್ಧಾರಗಳೇ ಕಾರಣ. ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಅವರು ಕನಿಷ್ಠ ಕಾಳಜಿಯನ್ನೂ ಹೊಂದಿಲ್ಲದಿರುವುದೇ ಕಾರಣ. ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ ಅವರ ನಂತರ ನಾವು ಕಮ್ಮಿ ಇಲ್ಲ ಎಂದು ತೋರಿಸಲಿಕ್ಕೆ ಮಾತ್ರ ನಿರ್ಮಲಾ ಸೀತಾರಾಮನ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಲಾಯಿತು. ನಿರ್ಮಲಾ ಸೀತಾರಾಮನ್ ಅವರಿಂದ ಸುಧಾರಣೆ ಸಾಧ್ಯವಾಗದು ಎಂಬುದನ್ನು ಅವರ ಪತಿ ಪರಕಾಳ ಪ್ರಭಾಕರ್ ಅವರೇ ಹೇಳಿದ್ದಾರೆ. ಆದರೂ ನಿರ್ಮಲಾ ಸೀತಾರಾಮನ್ ಅವರನ್ನು ಹಣಕಾಸು ಸಚಿವರನ್ನಾಗಿ ಮುಂದುವರೆಸಲಾಗುತ್ತಿದೆ.
ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿದ್ದ, ಇನ್ಫೋಸಿಸ್ ಅಧ್ಯಕ್ಷರಾಗಿದ್ದ, ಸದ್ಯ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ಅನುಭವಿ ಕೆ.ವಿ. ಕಾಮತ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕಾಮತ್ ಅವರ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಅವಕಾಶ ನೀಡಲಿಲ್ಲ. ಸದ್ಯ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಸಾಧ್ಯ ಇರುವ ಮತ್ತೊಬ್ಬ ವ್ಯಕ್ತಿಯೆಂದರೆ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗೌವರ್ನರ್ ಡಾ. ರಘುರಾಮ್ ರಾಜನ್. ಆದರೆ ಡಾ. ರಘುರಾಮ್ ರಾಜನ್ ಅವರ ಜೊತೆ ಪ್ರಧಾನಿ ಮೋದಿ ಅವರಿಗೆ ಪ್ರತಿಷ್ಟೆಯ ಪ್ರಶ್ನೆ. ಮೋದಿಯವರ ಇಂಥ ಧೋರಣೆಗಳಿಂದ ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ದೈನೇಸಿ ಸ್ಥಿತಿ ತಲುಪುತ್ತಿದೆ.
ಈ ಎಲ್ಲಾ ವಿಷಯಗಳನ್ನು ನೆನಪಿಸುವ ರೀತಿಯಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಇಂದು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ, ಪ್ರಧಾನ ಮಂತ್ರಿ ಮೋದಿ ವೈಫಲ್ಯಗಳೇ ಚಿದಂಬರಂ ಅವರ ಪ್ರಶ್ನೆಗಳ ಪ್ರಧಾನ ಅಂಶಗಳಾಗಿವೆ. ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ಮೊದಲಿಗೆ ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಯಾವಾಗ ಒಪ್ಪಿಕೊಳ್ಳುವಿರಿ? ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಆಗಿರುವ ವೈಫಲ್ಯವನ್ನು ಮತ್ತು ಅವರ ಆರ್ಥಿಕತೆಯ ನಿರ್ವಹಣಾ ವೈಫಲ್ಯವನ್ನು ಬಿಜೆಪಿ ಸರ್ಕಾರ ಯಾವಾಗ ಒಪ್ಪಿಕೊಳ್ಳುತ್ತದೆ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸಮಸ್ಯೆಯನ್ನು ಹುಡುಕಿದರೆ ಮಾತ್ರ ಪರಿಹಾರ ಸಾಧ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ.
ಆರ್ಥಿಕತೆಯ ಜೊತೆಗೆ ಟೆಲಿಕಾಂ ಹಾಗೂ ವಿಮಾನಯಾನಗಳ ಬಗ್ಗೆಯೂ ಪ್ರಸ್ತಾಪಿಸಿರುವ ಪಿ. ಚಿದಂಬರಂ, ‘ನಮ್ಮ ಪ್ರಮುಖ ಟೆಲಿಕಾಂ ಕಂಪೆನಿಗಳು ಕುಸಿತದ ಹಾದಿಯಲ್ಲಿವೆ ಮತ್ತು ದಯನೀಯ ಸ್ಥಿತಿಯಲ್ಲಿರುವ ಟೆಲಿಕಾಂ ಉದ್ಯಮವನ್ನು ಉಳಿಸುವ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂಬುದು ಮನವರಿಕೆಯಾಗಿದೆಯೇ?’ ಎಂಬ ಸವಾಲು ಹಾಕಿದ್ದಾರೆ. ‘ವಿಮಾನಯಾನ ಉದ್ಯಮವು ಭಾರಿ ನಷ್ಟವನ್ನು ಅನುಭವಿಸಿದೆ, ಸರ್ಕಾರವು ಈಗ ವಿಮಾನಯಾನ ಸಂಸ್ಥೆಗಳ ನೆರವಿಗೆ ಧಾವಿಸದಿದ್ದರೆ ಎಲ್ಲವೂ ಏರ್ ಇಂಡಿಯಾ ದಾರಿಯಲ್ಲಿ ಸಾಗಬೇಕಾಗುತ್ತದೆ ಎಂಬುದನ್ನಾದರೂ ಸರ್ಕಾರ ಅರಿತುಕೊಳ್ಳುವುದೇ? ಎಂದಿದ್ದಾರೆ.
ನಿರುದ್ಯೋಗದ ಬಗ್ಗೆ ಟ್ವೀಟ್ ಮಾಡಿರುವ ಚಿದಂಬರಂ, ‘ಕಳೆದ 12 ತಿಂಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಅಥವಾ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಟೆಲಿಕಾಂ ಮತ್ತು ವಿಮಾನಯಾನ ಎಂಬ ಎರಡು ಪ್ರಮುಖ ವಲಯಗಳಲ್ಲಿನ ಕುಸಿತದಿಂದಲೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇನ್ನೂ ಹಲವು ಸಾವಿರ ಉದ್ಯೋಗಗಳು ನಷ್ಟವಾಗಲಿವೆ ಎಂಬುದಾದರೂ ತಿಳಿದಿದೆಯೇ’ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರಂತೂ ಮೌನಕ್ಕೆ ಶರಣಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕಡೆ ಪಕ್ಷ ಸಂಬಂಧಪಟ್ಟ ಸಚಿವರಾದರೂ ಉತ್ತರಿಸಬೇಕಲ್ಲವೇ?