ಒಂದೆಡೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ಭಾರೀ ಸಿದ್ದತೆ ನಡೆಸುತ್ತಿದೆ. ಇನ್ನೊಂದೆಡೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕು ಎಂದು ರಾಜ್ಯದ ಮೂರು ಪಕ್ಷಗಳು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಣತಂತ್ರ ಹಣೆಯುತ್ತಿವೆ. ಶೀಘ್ರದಲ್ಲೇ ರಾಜ್ಯ ಚುನಾವಣಾ ಆಯೋಗ ಇದರ ವೇಳಾಪಟ್ಟಿ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷವೂ ಮಹತ್ವದ ಸಭೆ ಕರೆದಿದೆ.
ಇದೇ ನವೆಂಬರ್ 28ರಂದು ಬೆಳಗ್ಗೆ ಬೆಂಗಳೂರಿನ ಪಕ್ಷದ ಕಚೇರಿ ಜೆ. ಪಿ. ಭವನದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರಮುಖರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳು, ಶಾಸಕರು, ಮಾಜಿ ಶಾಸಕರು, ರಾಜ್ಯ ಪದಾಧಿಕಾರಿಗಳು, ಪಕ್ಷದ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಪ್ರಕಟಣೆ ಹೊರಡಿಸಿದ್ದಾರೆ. ಆದಷ್ಟೂ ಬೇಗ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ರಾಜ್ಯದಲ್ಲಿನ 5800 ಗ್ರಾಮ ಪಂಚಾಯಿತಿಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಹಾಗಾಗಿ ಕೂಡಲೇ ಇದರ ಬಗ್ಗೆ ಪಕ್ಷದ ಆಂತರಿಕ ಸಭೆ ಅಗತ್ಯ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೂ ಭಾರೀ ಭ್ರಷ್ಟಚಾರ ನಡೆಸುತ್ತಿದೆ. ಇವರ ಅಕ್ರಮ ಮತ್ತು ಅವ್ಯವಹಾರ ಬಗ್ಗೆಯೂ ಚರ್ಚೆ ನಡೆಸಬೇಕಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಕೆಳ ಹಂತದಿಂದ ಪಕ್ಷ ಸಂಘಟನೆ ಮಾಡುವುದು ಹೇಗೆ ಎನ್ನುವುದರ ಕುರಿತು ಚರ್ಚೆ ನಡೆಸುವ ಅಗತ್ಯ ಇದೆ’ ಎಂದು ತಿಳಿಸಿದ್ದಾರೆ.
ರಾಜ್ಯ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಸದ್ಯದಲ್ಲಿಯೇ ಘೋಷಣೆಯಾಗಲಿದೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಸ್ಟರ್ ಪ್ಲಾನ್ ರೂಪಿಸುತ್ತಿರುವ ಜೆಡಿಎಸ್ ಕಾಂಗ್ರೆಸ್ಮತ್ತು ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೇರಲಿದೆಯಾ? ಕಾದು ನೋಡಬೇಕಿದೆ.