ಚಿಕ್ಕಮಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಿ ಸಂಭವಿಸುತ್ತಿದೆ. ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದ ಮೇರೆಗೆ ಮಾಜಿ ಶಾಸಕ ವೈ.ಎಸ್ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ನಿನ್ನೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಕಡೂರು ಕ್ಷೇತ್ರ ಅಭ್ಯರ್ಥಿಯ ಘೋಷಣೆ ಮಾಡಿದ್ದು ದತ್ತಾಗೆ ಕೈ ಟಿಕೆಟ್ ಕೈ ತಪ್ಪಿದೆ.

ಕಡೂರು ಕ್ಷೇತ್ರದಲ್ಲಿ ಆನಂದ್ಗೆ ಮಣೆ ಹಾಕಿದ ಕಾಂಗ್ರೆಸ್ ವೈಎಸ್ವಿ ದತ್ತಾ ಕನಸಿಗೆ ನೀರೆರೆಚಿದೆ. ಕಾಂಗ್ರೆಸ್ನಿಂದ ಈ ಬಾರಿ ಟಿಕೆಟ್ ಪಕ್ಕಾ ಎಂದುಕೊಂಡಿದ್ದ ದತ್ತಾ ಎಐಸಿಸಿಯ ಈ ನಡೆಯಿಂದ ಅಸಮಾಧಾನಗೊಂಡಿದ್ದಾರೆ. ಇದೇ ನೋವಿನಲ್ಲಿ ಅಭಿಮಾನಿಗಳಿಗೆ ಪತ್ರ ಬರೆದಿರುವ ವೈಎಸ್ವಿ ದತ್ತಾ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸೋದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಟಿಕೆಟ್ ಆಸೆಯಿಂದ ಪಕ್ಷಾಂತರಗೊಂಡಿದ್ದ ದತ್ತಾ ಇದೀಗ ಪರ್ಯಾಯ ಮಾರ್ಗದ ಹುಡುಕಾಟದಲ್ಲಿದ್ದು ಇದೇ ಕಾರಣಕ್ಕಾಗಿಯೇ ಅಭಿಮಾನಿಗಳಿಗೆ ಬಹಿರಂಗ ಪತ್ರವನ್ನು ಪಡೆದಿದ್ದಾರೆ. ನನಗೆ ಹಾಗೂ ನನ್ನ ಬೆಂಬಲಿಗರ ಆತ್ಮಾಭಿಮಾನಕ್ಕೆ ಧಕ್ಕೆಯುಂಟಾಗಿದೆ. ಹೀಗಾಗಿ ಭಾನುವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಅಭಿಮಾನಿಗಳ ಜೊತೆಗೆ ನಾನು ಸಭೆ ಕರೆಯುತ್ತಿದ್ದೆನೆ. ನನ್ನನ್ನು ಹಣವಿಲ್ಲದ ಹಾಗೂ ಜಾತಿಯಿಲ್ಲದ ದತ್ತಣ್ಣ ಎಂದು ಅಭಿಮಾನಿಗಳು ಕರೆಯುತ್ತಿದ್ದರು. ಇದೀಗ ನನ್ನ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲು ನನಗೆ ಬೆಂಬಲಿಗರ ಅಭಿಪ್ರಾಯದ ಅಗತ್ಯವಿದೆ ಎಂದು ಮನವಿ ಮಾಡಿ ಅಭಿಮಾನಿಗಳಿಗೆ ದತ್ತಾ ಬಹಿರಂಗ ಪತ್ರ ಬರೆದಿದ್ದಾರೆ. ‘