ಬಂಗಾಳದಲ್ಲಾದ ಸೋಲನ್ನು ನಿಮ್ಮಿಂದ ಅರಗಿಸಲಾಗಿಲ್ಲವೆಂದು ನಮಗೆ ಅವಮಾನ ಮಾಡಬೇಡಿ: ಪ್ರಧಾನಿ ಮೋದಿಗೆ ತಿವಿದ ದೀದಿ

ಯಾಸ್‌ ಚಂಡಮಾರುತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಅಗೌರವ ತೋರಿ ಸಭೆಯಿಂದ ಅರ್ಧದಿಂದ ಎದ್ದು ಬಂದಿದ್ದಾರೆಂಬ ಕೇಂದ್ರದ ಆರೋಪಕ್ಕೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, ಬಂಗಾಳದಲ್ಲಿ ನೀವು ಎದುರಿಸಿದ ಅಪಮಾನಕಾರಿ ಸೋಲನ್ನು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಧಾನಿ ಮೋದಿಯನ್ನುದ್ದೇಶಿಸಿ ಹೇಳಿದ್ದಾರೆ.

ನರೇಂದ್ರ ಮೋದಿಯನ್ನು ಅರ್ಧ ತಾಸು ಕಾಯಿಸಿದ್ದೇನೆಂದು ಏಕಮುಖ ವರದಿಯನ್ನು ಕೇಂದ್ರ ಸರ್ಕಾರ ವರದಿ ಮಾಡಿದೆ. ಹಾಗಾಗಿ, ಇದರ ಕುರಿತು ಸಂಪೂರ್ಣ ಸತ್ಯ ಬಿಚ್ಚಿಡಲು ಪತ್ರಿಕಾ ಹೇಳಿಕೆ ನೀಡಲು ನಾನು ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.

ಚಂಡಮಾರುತಕ್ಕೆ ತುತ್ತಾದ ಪ್ರದೇಶಕ್ಕೆ ನಾನು ಭೇಟಿ ನೀಡಲು ತೀರ್ಮಾನಿಸಿದ್ದೆ. ಸೈಕ್ಲೋನ್‌ಗೆ ತುತ್ತಾಗಿ ತೀವ್ರ ಹಾನಿಗೀಡಾಗಿದ್ದ ಸಾಗರ್‌ ಹಾಗೂ ಡಿಗಾ ಪ್ರದೇಶಕ್ಕೆ ನಾನು ಹೊರಡಲು ಎಲ್ಲಾ ತಯಾರಿಯೂ ನಡೆದಿತ್ತು. ಆದರೆ, ಅನಿರೀಕ್ಷಿತವಾಗಿ ಪ್ರಧಾನಮಂತ್ರಿ ಬಂಗಾಳಕ್ಕೆ ಭೇಟಿ ನೀಡುವುದಾಗಿಯೂ, ಸಭೆ ನಡೆಸುವುದಾಗಿ ನಮಗೆ ತಿಳಿಸಲಾಯಿತು. ಅದಕ್ಕೆ ತಕ್ಕಂತೆ ನಮ್ಮ ಯೋಜನೆಗಳನ್ನು ತಕ್ಷಣವೇ ಮಾರ್ಪಾಡುಗೊಳಿಸಿದೆವು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿಯ ಹೆಲಿಕಾಪ್ಟರ್ ಅಲ್ಲಿಗೆ ಇಳಿಯುತ್ತದೆ ಎಂದು ನಮ್ಮನ್ನು 20 ನಿಮಿಷಗಳ ಕಾಲ ಕಾಯುವಂತೆ ಮಾಡಲಾಯಿತು, ನಾವು ತಾಳ್ಮೆಯಿಂದ ಕಾಯುತ್ತಿದ್ದೆವು. ಪ್ರಧಾನಿ-ಮುಖ್ಯಮಂತ್ರಿಗಳ ಸಭೆ ನಡೆಯಬೇಕಿದ್ದ ಸ್ಥಳವನ್ನು ತಲುಪುವ ಹೊತ್ತಿಗೆ, ಅಲ್ಲಿಗೆ ಸ್ವಲ್ಪ ಸಮಯದ ಹಿಂದೆಯೇ ಪ್ರಧಾನಿ ಆಗಮಿಸಿದ್ದರು ಹಾಗೂ ಸಭೆ ಈಗಾಗಲೇ ಆರಂಭವಾಗಿದೆ ಎಂದು ನಮಗೆ ತಿಳಿದು ಬಂತು. ಸಭೆ ನಡೆಯುತ್ತಿರುವುದರಿಂದ ಈ ಸಮಯದಲ್ಲಿ ಯಾವುದೇ ಪ್ರವೇಶವಿರುವುದಿಲ್ಲ ಎಂದು ಹೇಳಿ, ನಮ್ಮನ್ನು ಹೊರಗೆ ಕಾಯುವಂತೆ ಕೇಳಲಾಯಿತು. ನಾವು ಸ್ವಲ್ಪ ಸಮಯ ತಾಳ್ಮೆಯಿಂದ ಕಾದೆವು. ನಂತರ, ನಾವು ಮತ್ತೆ ಕೇಳಿದಾಗ, ಮುಂದಿನ ಒಂದು ಗಂಟೆಯವರೆಗೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿಸಲಾಯಿತು. ಸಭೆ ಕಾನ್ಫರೆನ್ಸ್ ಹಾಲ್‌ಗೆ ಸ್ಥಳಾಂತರಗೊಂಡಿದೆ ಎಂದು ಯಾರೋ ಹೇಳಿದರು, ಆದ್ದರಿಂದ ಮುಖ್ಯ ಕಾರ್ಯದರ್ಶಿ ಮತ್ತು ನಾನು ಅಲ್ಲಿಗೆ ಹೋಗಲು ನಿರ್ಧರಿಸಿದೆವು. ನಾವು ಅಲ್ಲಿಗೆ ತಲುಪಿದಾಗ, ಪ್ರಧಾನಿ ರಾಜ್ಯಪಾಲರು, ಕೇಂದ್ರ ಮುಖಂಡರು ಮತ್ತು ವಿರೋಧ ಪಕ್ಷದ ಕೆಲವು ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ನೀಡಿದ ವಿವರಣೆ, ಕೇಂದ್ರ ಸರ್ಕಾರ ಮಾಡಿರುವ ಆರೋಪಕ್ಕ ಸಂಪೂರ್ಣ ತದ್ವಿರುದ್ಧವಾಗಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಅದಾಗ್ಯೂ, ಸಭೆ ವೇಳೆ ಅಗತ್ಯ ದಾಖಲೆಗಳನ್ನು ನಾವು ಪ್ರಧಾನಮಂತ್ರಿಗೆ ಸಲ್ಲಿದಿದ್ದು, ಅದಾದ ಬಳಿಕ ನಾನು ದಿಗಾ ಪ್ರದೇಶಕ್ಕೆ ತೆರಳಬೇಕಿರುವುದರಿಂದ ಪ್ರಧಾನಮಂತ್ರಿಯವರ ಬಳಿ ಅನುಮತಿ ಕೇಳಿದೆ. ಮೂರು ಬಾರಿ ಮನವಿ ಮಾಡಿದ ಬಳಿಕವಷ್ಟೇ ನಾನು ಸಭೆಯಿಂದ ನಿರ್ಗಮಿಸಿದೆ ಎಂದು ಮಮತಾ ತಿಳಿಸಿದ್ದಾರೆ.

ಒಡಿಶಾ, ಗುಜರಾತ್‌ ಅಥವಾ ಇನ್ಯಾವುದೇ ರಾಜ್ಯದಲ್ಲಿ ಸಭೆ ಮಾಡುವಾಗ ಪ್ರಧಾನಿ ಮೋದಿ ಅಲ್ಲಿನ ಮುಖ್ಯಮಂತ್ರಿಯೊಂದಿಗೆ ಮಾತ್ರ ಸಭೆ ನಡೆಸುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಸಭೆ ನಡೆಸುವಾಗ ವಿರೋಧ ಪಕ್ಷ ನಾಯಕರನ್ನು ಕುಳ್ಳಿರಿಸುತ್ತಾರೆ. ಇದೇ ರೀತಿ ಪ್ರತಿ ಬಾರಿಯೂ ನಮ್ಮ ಸರ್ಕಾರಕ್ಕೆ ಮುಜುಗರ ತರಿಸಲು ಪ್ರಯತ್ನಿಸುತ್ತಾರೆ.  ನಮ್ಮನ್ನು ಅಪಮಾನಗೊಳಿಸಲೆಂದೇ ಶಿಷ್ಟಾಚಾರ ಉಲ್ಲಂಘಿಸಿ ಸಭೆ ನಡೆಸಿದ್ದಾರೆ ಎಂದು ಮಮತಾ ಪ್ರತ್ಯಾರೋಪ ಮಾಡಿದ್ದಾರೆ.

ನೀವು ನಮ್ಮನ್ನು ಏಕೆ ಅವಮಾನಿಸುತ್ತೀರಿ? ನೀವು ನಮ್ಮನ್ನು ಏಕೆ ಗುರಿಯಾಗಿಸುತ್ತೀರಿ? ನೀವು ನಮ್ಮನ್ನು ಏಕೆ ತೊಂದರೆಗೊಳಿಸುತ್ತೀರಿ? ಬಂಗಾಳದಲ್ಲಿ ನೀವು ಚುನಾವಣೆಯಲ್ಲಿ ಸೋತಿದ್ದೀರಿ ಎಂಬ ಅಂಶವನ್ನು ನೀವು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲವೆಂದೇ? ಬಂಗಾಳಕ್ಕೆ ನೀಡಿದ ಸಹಾಯಕ್ಕೆ ಪ್ರತಿಯಾಗಿ ಅವರ ಪಾದಗಳನ್ನು ಮುಟ್ಟುವಂತೆ ಪ್ರಧಾನಿ ಹೇಳಿದರೆ, ಬಂಗಾಳದ ಜನರಿಗೆ ಮತ್ತು ಬಂಗಾಳದ ಸುಧಾರಣೆಗಾಗಿ ನಾನು ಅದನ್ನು ಮಾಡಲು ಸಿದ್ಧನಿದ್ದೇನೆ, ಆದರೆ ದಯವಿಟ್ಟು ಈ ಕೊಳಕು ರಾಜಕೀಯ ಆಟಗಳನ್ನು ಆಡಬೇಡಿ. ಬಂಗಾಳವನ್ನು ಈ ರೀತಿ ಶಿಕ್ಷಿಸಬೇಡಿ. ಶಕ್ತಿ ಮೀರಿ ಶ್ರಮಿಸುತ್ತಿರುವ ಮುಖ್ಯ ಕಾರ್ಯದರ್ಶಿಯನ್ನು ಅವಮಾನಿಸಬೇಡಿ ಎಂದು ಮಮತಾ ಬ್ಯಾನರ್ಜಿ ಕೋರಿಕೊಂಡಿದ್ದಾರೆ.

ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಳ್ಳುವ ಈ ಆದೇಶವನ್ನು ಹಿಂಪಡೆಯುವಂತೆ ನಾನು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ನೀವು ಅವರನ್ನು ಏಕೆ ಗುರಿಯಾಗಿಸುತ್ತಿದ್ದೀರಿ? ಇದನ್ನು ಮಾಡುವ ಮೂಲಕ ನೀವು ರಾಷ್ಟ್ರದಾದ್ಯಂತದ  ಎಲ್ಲಾ ರಾಜ್ಯಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳನ್ನು  ಅವಮಾನಿಸುತ್ತಿದ್ದೀರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಸತತ ಆರೋಪ ಮಾಡುತ್ತಿರುವ ನಡುವೆಯೇ ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದು, ಶಿಷ್ಟಾಚಾರ ಪಾಲಿಸದೆ ಸಭೆ ನಡೆಸಿದ ಕೇಂದ್ರ ಸರ್ಕಾರವನ್ನು ತರಾಟೆಗೆ ಎಳೆದಿದ್ದಾರೆ. 

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...